ಬೆಳಗಾವಿ ಜೂ ೧೩– ಸರಕಾರಿ ಸೇವೆಯೊಂದಿಗೆ ಸಾಹಿತ್ಯ ಕೃಷಿ ಮಾಡುತ್ತ ಎರಡೂ ಕ್ಷೇತ್ರಗಳಲ್ಲಿ ಸಾರ್ಥಕ ಬದುಕು ಕಂಡವರು ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಇಲಾಖೆಯ ನೌಕರರಾದ ಬಸವರಾಜ ಗಾರ್ಗಿಯವರು ಎಂದು ಧಾರವಾಡ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿಯವರು ಹೇಳಿದರು.
ಹಿಂದುಳಿದ ವರ್ಗ ಮತ್ತ ಅಲ್ಪ ಸಂಖ್ಯಾತ ಇಲಾಖೆಯ ನೌಕರರಾಗಿ ಸೇವೆಯಿಂದ ನಿವೃತ್ತರಾದ ಬಸವರಾಜ ಗಾರ್ಗಿಯವರಿಗೆ ಅವರ ಪರಿವಾರದವರು ಬೆಳಗಾವಿ ನಗರ ಸಾಹಿತ್ಯ ಭವನದಲ್ಲಿ 11 ರಂದು ಶನಿವಾರ ಏರ್ಪಡಿಸಿದ ಷಷ್ಠಬ್ದಿ ಹಾಗೂ ಅವರೇ ಬರೆದ ‘ಹಾಸ್ಟೇಲ ಮಕ್ಕಳ ಕಥೆಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಅಭಿನಂದನ ನುಡಿ ಹೇಳಿದ ಚಾರಿತ್ರಿಕ ಕಾದಂಬರಿಕಾರರಾದ ಯ.ರು.ಪಾಟೀಲರವರು ‘ಮೊದಲು ಐದು ವರ್ಷಗಳ ಕಾಲ ಗುಲ್ಬರ್ಗದ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ತದನಂತರ ಕಿತ್ತೂರು ಕರ್ನಾಟದಕದಲ್ಲಿ ಕೆಲಸ ಮಾಡಬೇಕು ಅದೂ ಮಕ್ಕಳೊಂದಿಗೆ ಇರಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರಕಾರದ ನೌಕರಿ ಬಿಟ್ಟು ಸಾಹಿತ್ಯದ ಜೊತೆಗೆ ಸರಕಾರಿ ಸೇವೆಯನ್ನು ಅಚ್ಚುಕಟ್ಟಾಗಿ ಮಾಡಿದವರು ಎಂದರೆ, ಕೃತಿ ಕುರಿತು ಮಾತನಾಡಿದ ಮಕ್ಕಳ ರಂಗಭೂಮಿ ಚಿಂತಕರು ಆದ ಮುಂಡರಗಿಯ ಡಾ.ನಿಂಗು ಸೊಲಗಿಯವರು ಮಾತನಾಡುತ್ತ ಮೊದಲಿನಿಂದಲೂ ಮಕ್ಕಳ ಸಾಹಿತ್ಯ ಕುರಿತು ಒಲವು ಹೊಂದಿದ ಗಾರ್ಗಿಯವರು ಅದೇ ಸಾಹಿತ್ಯ ಪ್ರಕಾರವನ್ನು ಹುಲುಸಾಗಿ ಬೆಳೆಸಲಿ ಎಂದರು.
ಅಧ್ಯಕ್ಷತೆ ವಹಿಸಿದ ವಿಶ್ರಾಂತ ಪ್ರಾಚಾರ್ಯರಾದ ಬಿ.ಎಸ್. ಗವಿಮಠರವರು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗಡಿ ಭಾಗಗಳಾದ ನಿಪ್ಪಾಣಿ, ಖಾನಾಪುರ ಹಾಗೂ ಅಥಣಿ ಭಾಗಗಳಲ್ಲಿ ಹಮ್ಮಿಕೊಂಡ ಜಿಲ್ಲಾ ಸಮ್ಮೇಳನದಲ್ಲಿ ಯ.ರು.ಪಾಟೀಲರವರೊಂದಿಗೆ ಬಸವರಾಜ ಗಾರ್ಗಿಯವರು ವಹಿಸಿದ ಪಾತ್ರ ಗಣನೀಯವೆಂದರು.
ಸಸಿಗೆ ನೀರು ಎರೆಯುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಮನಗೌಡ ಕನ್ನೋಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲಕ್ಷ್ಮಣ್ ಬಬಲಿ, ಎಸ್.ಡಿ. ಹುದ್ದಾರ, ಡಿ.ಕೆ.ಗುಡ್ಲಾನೂರ, ಉತ್ತಮಸಿಂಗ ರಾಥೋಡ್ ಎಚ್.ಎಸ್.ಯಳ್ಳೂರು ಡಾ.ಹೇಮಾ ಸೋನೊಳ್ಳಿ ಜ್ಯೋತಿ ಬದಾಮಿ ಉಪಸ್ಥಿತರಿದ್ದರು. ಕಾರಂಜಿಮಠದ ಪೂಜ್ಯಶ್ರೀಗಳಾದ ಗುರುಸಿದ್ಧ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಾದ ನೀಡುತ್ತ ಇನ್ನು ಗಾರ್ಗಿಯವರಿಗೆ ಸಾಹಿತ್ಯಿಕ ಕೆಲಸ ಮಾಡಲು ಬಿಡುವು ಸಿಕ್ಕಂತಾಯಿತು ಭವಿಷ್ಯತ್ತಿನಲ್ಲಿ ಮಕ್ಕಳ ಸಾಹಿತ್ಯಕ್ಕೆ ಅವರ ಕೊಡುಗೆ ದೊರೆಯಲಿ ಎಂದರು.
ಶಿಕ್ಷಕಿ ಗೌರಿ ರಾಮಗುರವಾಡಿಯವರು ಸ್ವಾಗತಿಸಿದರು ಮಲ್ಲಿಕಾರ್ಜುನ ದೇಶನೂರು ನಿರೂಪಿಸಿದರು. ಅಮೃತರಾಜ ಗಾರ್ಗಿಯವರು ವಂದಿಸಿದರು