IMG-20261007-WA0000.jpg
Spread the love

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ……

ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ ಸಂಸಾರದಂತಾಗಿದೆ…..

ಮೈನಸ್ ಬಜೆಟ್ ಆಗಿ ಮುಂದುವರಿಯುತ್ತಿದೆ…….

ಹೇಗೋ ಕಷ್ಟ ಪಟ್ಟು ತೂಗಿಸಿಕೊಂಡು ಹೋಗುವಂತಾಗಿದೆ……

ಕರ್ನಾಟಕ ಮೂಲದ ವಿಪ್ರೋ, ಇನ್ಫೋಸಿಸ್, ಬಯೋಕಾನ್ ಮುಂತಾದ ಖಾಸಗಿ ಸಂಸ್ಥೆಗಳು ಏರು ಮುಖದ ಪ್ರಗತಿ ದಾಖಲಿಸುತ್ತಿವೆ. ಸರ್ಕಾರದ ಲೆಕ್ಕವೂ ಏರು ಮುಖದಲ್ಲಿದೆ ಆದರೆ ಸಾಲ ಮತ್ತು ಬಡ್ಡಿಯ ಲೆಕ್ಕದಲ್ಲಿ………

ಇದಕ್ಕೆ ಕೇವಲ ಒಂದು ಪಕ್ಷ, ಸರ್ಕಾರ ಅಥವಾ ವ್ಯಕ್ತಿ ಕಾರಣವಲ್ಲ. ಇಡೀ ಸರ್ಕಾರಿ ವ್ಯವಸ್ಥೆಯ ಇತಿಹಾಸ ಕಾರಣವಾಗಿದೆ.

ಇದೇನು ಆಶ್ಚರ್ಯಪಡುವಂತಹ ವಿಷಯವಲ್ಲ. ಸರ್ಕಾರದ ಆದಾಯ ಖರ್ಚು ಲೆಕ್ಕಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿದರೆ ಎಲ್ಲರಿಗೂ ಅರ್ಥವಾಗುತ್ತದೆ.

ಸರ್ಕಾರವೆಂಬುದು ಆಳುವ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಅದು ಯಾವತ್ತಿಗೂ ತಾತ್ಕಾಲಿಕ ಎಂಬ ಅರಿವು ಅಧಿಕಾರಸ್ಥರಿಗೆ ತಿಳಿದಿರುತ್ತದೆ. ಆದ್ದರಿಂದ ಅವರು ಎಷ್ಟು ಸಾಧ್ಯವೋ ಅಷ್ಟು ತಮ್ಮ ಹಿತಾಸಕ್ತಿಗೆ ಅನುಕೂಲಕರ ಕೆಲಸಗಳನ್ನು ಮಾಡಿ ತಕ್ಷಣದ ಲಾಭಗಳನ್ನು ಮಾಡಿಕೊಂಡು ದೀರ್ಘಕಾಲದಲ್ಲಿ ಅದರ ಪರಿಣಾಮಗಳನ್ನು ನಿರ್ಲಕ್ಷಿಸುತ್ತಾರೆ.

ಅದರಿಂದಾಗಿಯೇ ಇವತ್ತಿನ ಖಜಾನೆಯ ಪರಿಸ್ಥಿತಿ. ಇದು ತಾತ್ಕಾಲಿಕವೇ ಇರಬಹುದು. ಮುಂದೆ ಸರಿ ಹೋಗಬಹುದು. ಆದರೆ ಸರ್ಕಾರದ ಮಟ್ಟದಲ್ಲಿ ಈ ಸ್ಥಿತಿ ಒಳ್ಳೆಯದಲ್ಲ. ಒಬ್ಬ ವ್ಯಕ್ತಿ ಅಥವಾ ಒಂದು ಖಾಸಗಿ ಸಂಸ್ಥೆಯ ಏರಿಳಿತಗಳು ಸಹಜ ಮತ್ತು ಅದರ ಪರಿಣಾಮ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಆದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಹದ್ದಿನ ಕಣ್ಣಿನಲ್ಲಿ, ಅಂಕಗಳ ದೃಷ್ಟಿಯಿಂದ ಅತಿ ಬುದ್ದಿವಂತರಾದವರು ಇದನ್ನು ನಿರ್ವಹಿಸುತ್ತಿರುತ್ತಾರೆ. ರಾಜ್ಯದ ಎಲ್ಲಾ ಅಧಿಕಾರ ಮತ್ತು ಸಂಪನ್ಮೂಲಗಳು ಅವರ ನಿಯಂತ್ರಣದಲ್ಲಿಯೇ ಇರುತ್ತವೆ. ಅಲ್ಲದೆ ಇಡೀ ರಾಜ್ಯದ ಜನರ ಬದುಕಿನ ಪ್ರಶ್ನೆ ಅಡಗಿರುತ್ತದೆ. ಆದ್ದರಿಂದ ತುಂಬಾ ತುಂಬಾ ಜವಾಬ್ದಾರಿಯುತವಾಗಿ ಆರ್ಥಿಕ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ.

ಕೇವಲ ಇಷ್ಟೇ ಅಲ್ಲ. ಈ ಸರ್ಕಾರ ನಡೆಸಲು ರಾಜ್ಯ ಆದಾಯದ ಅತಿದೊಡ್ಡ ಭಾಗ ಅದರ ನಿರ್ವಹಣೆಗೇ ಹೋಗುತ್ತದೆ. ಹೀಗಿದ್ದರೂ ಅವ್ಯವಸ್ಥೆ ಇದೆ ಎಂದರೆ ಸರ್ಕಾರದ ಅದಕ್ಷತೆಗೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.

ಹಾಗಾದರೆ,
ಕರ್ನಾಟಕ ಭಾರತದಲ್ಲಿ ಬಡ ರಾಜ್ಯವೇ ? ಇಲ್ಲಿನ ಆದಾಯ ಕಡಿಮೆಯಾಗುತ್ತಿದೆಯೇ ? ಸಂಪನ್ಮೂಲಗಳು ಬರಿದಾಗಿವೆಯೇ ?

ಖಂಡಿತ ಇಲ್ಲ. ಹಣವೇ ಅಭಿವೃದ್ಧಿ ಎಂದು ಭಾವಿಸಿರುವ ಈ ಆಧುನಿಕ ಕಾಲದಲ್ಲಿ, ಮಾಹಿತಿ ತಂತ್ರಜ್ಞಾನದ ಸೇವೆಯಲ್ಲಿ ಬೆಂಗಳೂರು ವಿಶ್ವದ ಒಂದೋ, ಎರಡನೆಯದೋ ಅತಿ ಹೆಚ್ಚು ಹಣ ಸಂಪಾದನೆಯ ನಗರವಾಗಿದೆ. ಶಿಕ್ಷಣ, ಆರೋಗ್ಯ ವಿಷಯದಲ್ಲೂ ಮುಂಚೂಣಿಯಲ್ಲಿದೆ. ಪ್ರವಾಸೋದ್ಯಮದಲ್ಲಿ ಮೈಸೂರು, ರೇಷ್ಮೆ ಬೆಳೆಯಲ್ಲಿ ರಾಮನಗರ, ಮತ್ಸೋದ್ಯಮದಲ್ಲಿ ಕರಾವಳಿ ಕರ್ನಾಟಕ, ಅಡಿಕೆ ಕಾಫಿ ಉತ್ಪಾದನೆಯಲ್ಲಿ ಮಲೆನಾಡು, ವಾಣಿಜ್ಯ ನಗರಗಳಾಗಿ ಹುಬ್ಬಳ್ಳಿ ಬೆಳಗಾವಿ, ದ್ರಾಕ್ಷಿ, ದಾಳಿಂಬೆ, ತರಕಾರಿ ಕೃಷಿಯಲ್ಲಿ ಬಿಜಾಪುರ, ಯಾದಗಿರಿ, ಹೈನು ಉದ್ಯಮದಲ್ಲಿ, ಮಾವು ಉತ್ಪಾದನೆಯಲ್ಲಿ ಕೋಲಾರ, ಸಿದ್ದ ಉಡುಪು ಕ್ಷೇತ್ರದಲ್ಲಿ ದಾವಣಗೆರೆ, ಪ್ರವಾಸೋದ್ಯಮದಲ್ಲಿ ಮೈಸೂರು ಇನ್ನೂ ಮುಂತಾದ ಲಾಭದಾಯಕ ಪ್ರದೇಶಗಳನ್ನು ಕರ್ನಾಟಕ ಒಳಗೊಂಡಿದೆ.
ಆದರೂ ಈ ಪರಿಸ್ಥಿತಿ ಏಕೆ ?

ವಾಸ್ತವದಲ್ಲಿ ಸರ್ಕಾರದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಅದನ್ನು ಖರ್ಚು ಮಾಡುವ ರೀತಿ ಅಸಮರ್ಪಕವಾಗಿದೆ. ಮುಖ್ಯವಾಗಿ ಭ್ರಷ್ಟಾಚಾರ ಮತ್ತು ದುಂದು ವೆಚ್ಚ ಇದಕ್ಕೆ ಅತಿಮುಖ್ಯ ಕಾರಣವಾಗಿದೆ. ಉದಾಹರಣೆಗೆ 100 ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇರುವಲ್ಲಿ ಸುಮಾರು 500 ರಷ್ಟು ರೂಪಾಯಿ ಅಧಿಕೃತವಾಗಿಯೇ ಖರ್ಚಾಗುತ್ತದೆ. ಪಾರದರ್ಶಕ ಕಾನೂನು, ಟೆಂಡರ್ ಪ್ರಕ್ರಿಯೆ ಎಲ್ಲಾ ಇದ್ದರೂ ಆ ನಿಯಮಗಳನ್ನು ಸಹ ವಂಚಿಸಲಾಗುತ್ತದೆ.

ಈ ಅವ್ಯವಸ್ಥೆ ತಡೆಯಲು ನಮ್ಮಲ್ಲಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಎಂಬ ಲೆಕ್ಕ ಪತ್ರ ಇಲಾಖೆಯಿದೆ. ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ತೆರಿಗೆ ಇಲಾಖೆಯ ರೀತಿ ಇದೂ ಸಹ ಸರ್ಕಾರದ ನಿಯಂತ್ರಣದಲ್ಲಿ ಇಲ್ಲದ ಸ್ವಾಯತ್ತ ಸಂಸ್ಥೆ. ಸರ್ಕಾರದ ಪ್ರತಿ 1 ರೂಪಾಯಿ ಖರ್ಚು ವೆಚ್ಚ ಮತ್ತು ಅದರ ಸದುಪಯೋಗದ ಮೇಲೆ ನಿಗಾ ಇಡುವ ಸಂಸ್ಥೆ ಇದು. ಆದರೂ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಹಣದ ಕೊರತೆಯ ವಿಷಯದಲ್ಲಿ ಎದುಸಿರು ಬಿಡುತ್ತಿರುವಾಗ ಇನ್ನು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಭೀಕರತೆ ಎದುರಾಗದೆ ಇರುತ್ತದೆಯೇ ?

ಸರ್ಕಾರಗಳು ಓಟಿನ ರಾಜಕೀಯದಲ್ಲಿ ತಮಗೆ ಇಷ್ಟ ಬಂದಂತೆ ಯೋಜನೆಗಳನ್ನು ಘೋಷಿಸುತ್ತಾರೆ. ಯಾವುದೇ ಪೂರ್ವ ತಯಾರಿ, ಹಣಕಾಸಿನ ನಿರ್ಧಿಷ್ಟ ಮಾನದಂಡ ಇರುವುದಿಲ್ಲ. ಹೇಗೋ ಮುಂದೆ ನೋಡೋಣ. ಈಗ ಜನ ಮೆಚ್ಚಿದರೆ ಸಾಕು ಎಂದು ಧೋರಣೆ ಇವರದು. ಜನರೂ ಸಹ ತಾತ್ಕಾಲಿಕ ಲಾಭಕ್ಕೆ ಹೆಚ್ಚು ಕಾತುರರಾಗಿರುತ್ತಾರೆ. ಆ ಎಲ್ಲದರ ಪರಿಣಾಮ ಸದ್ಯಕ್ಕೆ ದಿವಾಳಿಯತ್ತ ಕರ್ನಾಟಕ ಸರ್ಕಾರದ ಆರ್ಥಿಕ ಪರಿಸ್ಥಿತಿ…..

ಸರ್ಕಾರಗಳ ಹಣದ ದುಂದು ವೆಚ್ಚ……..

ಒಂದು ಆಶ್ಚರ್ಯಕರ ವಿಷಯ ಸಾಮಾನ್ಯ ಜನರ ಅರಿವಿಗೆ ಇನ್ನೂ ಬಂದಿಲ್ಲ. ಸರ್ಕಾರ ಮಾಡುವ ವೆಚ್ಚದಲ್ಲಿ ಶೇಕಡಾ 20/30% ವ್ಯರ್ಥ ಅಥವಾ ದುಂದು ವೆಚ್ಚ ಆಗುತ್ತದೆ. ದಯವಿಟ್ಟು ಗಮನಿಸಿ. ಇದರಲ್ಲಿ ಭ್ರಷ್ಟಾಚಾರ ಸೇರಿಲ್ಲ. ಅದು ಪ್ರತ್ಯೇಕ.

ಹಾಗಾದರೆ ದುಂದು ವೆಚ್ಚ ಹೇಗಾಗುತ್ತದೆ…….

ಮೊದಲನೆಯ ಅತಿಹೆಚ್ಚು ದುಂದು ವೆಚ್ಚ ಸರ್ಕಾರಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಲ್ಲಿ ನಮ್ಮ ತೆರಿಗೆಯ ಹಣ ಪೋಲಾಗುತ್ತದೆ.

ಸರ್ಕಾರದ ವತಿಯಿಂದ ಆಗುವ ಯಾವುದೇ ಕಟ್ಟಡ, ರಸ್ತೆ, ಕಾರ್ಯಾಲಯ, ಸಭೆ ಸಮಾರಂಭಗಳು ಅದು ಸರ್ಕಾರದ ಕರ್ತವ್ಯದ ಒಂದು ಭಾಗ. ಯಾವುದೇ ಜನಪ್ರತಿನಿಧಿಯ ಖಾಸಗಿ ಕಾರ್ಯಕ್ರಮವಲ್ಲ. ಅದನ್ನು ಸ್ಥಳೀಯವಾಗಿ ಒಂದು ಸಣ್ಣ ಹಣದಲ್ಲಿ ಅವಶ್ಯಕತೆ ಇದ್ದಲ್ಲಿ ಪೂಜೆ ಮಾಡಿ ಮುಗಿಸಬಹುದು. ಆದರೆ ಅದಕ್ಕಾಗಿ ಸರ್ಕಾರ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತದೆ.

ಸರ್ಕಾರದಲ್ಲಿ ಇರುವ ಎಲ್ಲಾ ಇಲಾಖೆಗಳು, ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು, ಎಲ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಈ ರೀತಿಯ ಅನಾವಶ್ಯಕ ಕಾರ್ಯಕ್ರಮಗಳಿಗೆ ಖಜಾನೆಯ ತೆರಿಗೆ ಹಣ ಖರ್ಚಾದರೆ ಎಷ್ಟಾಗಬಹುದು ಊಹಿಸಿ.

ಕಾರ್ಯಕ್ರಮದ ಗಾತ್ರಕ್ಕೆ ಅನುಗುಣವಾಗಿ ಸಾರಿಗೆ, ಪೆಂಡಾಲ್, ಕುರ್ಚಿ, ಧ್ವನಿವರ್ಧಕ, ಅಲಂಕಾರ, ಊಟ, ಜಾಹೀರಾತು ಫಲಕ ಹೀಗೆ ಎಲ್ಲವೂ ಕೇವಲ ಒಂದು ಸರ್ಕಾರದ ಯೋಜನೆಯ ಶಂಕುಸ್ಥಾಪನೆ ಅಥವಾ ಉದ್ಘಾಟನೆಗೆ ಖರ್ಚಾಗುತ್ತದೆ. ವಾಸ್ತವದಲ್ಲಿ ಕೇವಲ ಒಂದು ಸಾವಿರ ರೂಪಾಯಿಯಲ್ಲಿ ಒಂದು ಕಡ್ಡಿ ಕರ್ಪೂರ ಹೂವು ಉಪಯೋಗಿಸಿ ಕಾರ್ಯಕ್ರಮ ಮುಗಿಸಬಹುದು.

ಹಾಗೆಯೇ ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಕೃಷ್ಣ, ತುಂಗೆ, ಕಾವೇರಿ, ಹೇಮಾವತಿ, ಭೀಮಾ ಹೀಗೆ ಅನೇಕ ನದಿಗಳು – ಜಲಾಶಯಗಳು ತುಂಬಿದಾಗ ಮುಖ್ಯಮಂತ್ರಿಗಳು ಅಥವಾ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಬಹಳಷ್ಟು ವೇಳೆ ಹೆಲಿಕಾಪ್ಟರ್ ನಲ್ಲಿ ತೆರಳಿ ಇಡೀ‌ ಆಡಳಿತ ಯಂತ್ರ ಅಲ್ಲಿ ಹಾಜರಿರುವಂತೆ ಮಾಡಿ ಬಾಗಿನ ನೀಡಲು ಲಕ್ಷಾಂತರ ಹಣ ಬೊಕ್ಕಸದಿಂದ ಖರ್ಚು ಮಾಡುತ್ತಾರೆ. ಎಷ್ಟೊಂದು ಮೂರ್ಖತನ ನೋಡಿ. ಕೆರೆ ತುಂಬುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ. ಸ್ಥಳೀಯವಾಗಿ ಅಲ್ಲಿನ ಅಧಿಕಾರಿ ಅಥವಾ ರೈತರು ಬಾಗಿನ ನೀಡಬಹುದಲ್ಲವೇ…..

ಇಷ್ಟೇ ಅಲ್ಲ, ಪ್ರತಿ ಬಾರಿ ಸರ್ಕಾರ ಬದಲಾದಾಗ ಅವಶ್ಯಕತೆ ಇಲ್ಲದಿದ್ದರೂ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸರ್ಕಾರಿ ಮನೆ ಮತ್ತು ಕಚೇರಿಯ ನವೀಕರಣಕ್ಕಾಗಿ ಒಟ್ಟು ಕೋಟ್ಯಾಂತರ ರೂಪಾಯಿಯನ್ನು ಲೋಕೋಪಯೋಗಿ ಇಲಾಖೆ ಖರ್ಚು ಮಾಡುತ್ತದೆ. ಜೊತೆಗೆ ಮಂತ್ರಿಗಳ – ಅಧಿಕಾರಿಗಳ ಸೋಪು, ಟವೆಲ್ಲು, ರೂಂ ಪ್ರೆಶ್ನರ್, ಪರ್ಪ್ಯೂಮ್, ಕಾಫಿ ಟೀ ಒದಗಿಸಲು ತಟ್ಟೆ ಲೋಟಗಳು, ಖುರ್ಚಿಗಳು ಹೀಗೆ ಮತ್ತೆ ಲಕ್ಷಾಂತರ ರೂಪಾಯಿಗಳ ತೆರಿಗೆ ರೂಪದ ಹಣ ಖರ್ಚಾಗುತ್ತದೆ.

ಇವು ಉದಾಹರಣೆಗಳು ಮಾತ್ರ. ಪ್ರತಿ ಸರ್ಕಾರಿ ಇಲಾಖೆಯ ಪರ್ಚೆಸ್ ವಿಭಾಗದಲ್ಲಿ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ದುಂದು ವೆಚ್ಚ ನಡೆಯುತ್ತಲೇ ಇರುತ್ತದೆ. ಅದರ ಜೊತೆ ಭ್ರಷ್ಟಾಚಾರ ಪ್ರತ್ಯೇಕ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಾಜ್ಯದ ಬಜೆಟ್ ಗಾತ್ರ ಸುಮಾರು ‌4.5 ಲಕ್ಷ ಕೋಟಿ. ದುಂದು ವೆಚ್ಚ ಸುಮಾರು ‌ಶೇಕಡಾ 20% ಅಂದರೂ 90000 ಕೋಟಿಯಷ್ಟಾಗುತ್ತದೆ.

ಆಸಕ್ತಿದಾಯಕ ವಿಷಯವೆಂದರೆ, ಸರ್ಕಾರದ ಅಬಕಾರಿ ( ಮದ್ಯಪಾನ ) ಆದಾಯ ಪ್ರತಿವರ್ಷ ಸುಮಾರು 40 ಸಾವಿರ ಕೋಟಿ. ಧೂಮಪಾನ ಬಹುಶಃ 3/4 ಸಾವಿರ ಕೋಟಿ ಇರಬಹುದು. ಮದ್ಯಪಾನ ಮತ್ತು ಧೂಮಪಾನ ಸಂಪೂರ್ಣ ನಿಷೇಧ ಮಾಡಿದರೆ ಅಂದಾಜು 45000 ಕೋಟಿ ಆದಾಯ ನಷ್ಟವಾಗಬಹುದು. ಸರ್ಕಾರದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದರೆ ಇದು ಒಂದು ದೊಡ್ಡ ಮೊತ್ತವೇ ಅಲ್ಲ. ಜೊತೆಗೆ ಜನರ ಆರೋಗ್ಯ, ಅಪಘಾತ, ಹಿಂಸಾಚಾರ ಗಣನೀಯ ಮಟ್ಟದಲ್ಲಿ ಸುಧಾರಿಸುತ್ತದೆ.

ಅಷ್ಟೇ ಅಲ್ಲ ಎಷ್ಟೋ ವಸ್ತುಗಳ ಬೆಲೆಗಳನ್ನು ಮತ್ತು ತೆರಿಗೆಗಳನ್ನು ಕಡಿಮೆ ಮಾಡಿ ಜನರ ಮೇಲಿನ ಆರ್ಥಿಕ ಒತ್ತಡ ಕಡಿಮೆ ಮಾಡಬಹುದು ಮತ್ತು ಪರೋಕ್ಷವಾಗಿ ಭ್ರಷ್ಟಾಚಾರ ಸಹ ನಿಯಂತ್ರಿಸಬಹುದು.

ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಬೇಕಷ್ಟೇ.

ರಾಜಕೀಯ ಪಕ್ಷಗಳಿಗೆ ಸರ್ಕಾರ ಎಂಬುದು ಕೇವಲ ಬಾಡಿಗೆ ಮನೆ ಇದ್ದಂತೆ. ಇರುವಷ್ಟು ದಿನ ಅವರಿಗೆ ಅನುಕೂಲ ಮಾಡಿಕೊಂಡು ಹೋಗುವಾಗ ಕೆಡಿಸಿ ಹೋಗುತ್ತಾರೆ. ಮತ್ತೆ ಇನ್ನೊಬ್ಬರು ಬಾಡಿಗೆಗೆ ಬರುತ್ತಾರೆ. ಮನೆ ಹಾಳಾಗುತ್ತಲೇ ಇರುತ್ತದೆ. ಪ್ರಜೆಗಳೇ ಜಾಗೃತರಾಗಿ ತಮ್ಮ ಸ್ವಂತ ಮನೆಗೆ ತಾವೇ ‌ವಾಸಿಸಲು ಆಯ್ಕೆ ಮಾಡಿಕೊಂಡು ಬರುವವರೆಗೂ………….

ಭಯ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕ ನಿಜಕ್ಕೂ ಸಂಪದ್ಭರಿತ ರಾಜ್ಯ. ಆದರೆ ಇತ್ತೀಚಿನ ರಾಜಕೀಯದಲ್ಲಿ, ಜಾತಿ ಅಭಿಮಾನದಲ್ಲಿ ಮತ್ತು ಒಟ್ಟು ವ್ಯವಸ್ಥೆಯ ಭ್ರಷ್ಟಾಚಾರದಲ್ಲಿ ನಲುಗುತ್ತಿದೆ. ಜನರು ಚುನಾವಣಾ ವ್ಯವಸ್ಥೆಯಲ್ಲಿ ಜಾಗೃತರಾದರೆ ಇದಕ್ಕೆ ಪರಿಹಾರ ಖಂಡಿತ ಸಿಗುತ್ತದೆ. ಅಲ್ಲಿಯವರೆಗೂ ಜನರನ್ನು ಪ್ರಬುದ್ದರಾಗಿಸುವ ಕೆಲಸ ನಾವು ಮಾಡೋಣ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!