IMG-20251107-WA0003.jpg
Spread the love

ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಸಿಗುತ್ತಿರಬೇಕಾದರೆ ಯಾವ ಪ್ರಜ್ಞೆಯ ಅವಶ್ಯಕತೆಯೂ ಇರುವುದಿಲ್ಲ. ಆದರೆ ಬದುಕು ಕಷ್ಟಕ್ಕೆ ಸಿಲುಕಿದಾಗ, ನೋವಿನ ಅನುಭವವಾದಾಗ, ವಂಚನೆಗೆ ಒಳಗಾದಾಗ, ಅನಾರೋಗ್ಯಕ್ಕೆ ತುತ್ತಾದಾಗ, ಮುಪ್ಪು ವಯಸ್ಸಿನ ಪ್ರಭಾವಕ್ಕೆ ನರಳುವಾಗ, ಖಿನ್ನತೆಗೆ ಬಲಿಯಾದಾಗ, ಸೋಲಿಗೆ ಶರಣಾದಾಗ, ಸಾವಿನ ಭಯ ಕಾಡುವಾಗ ಯಾವುದಾದರೂ ಒಂದು ಪ್ರಜ್ಞೆ ನಮ್ಮನ್ನು ಆ ನೋವಿನ ತೀವ್ರತೆ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಿಂದೆ ಕೃಷ್ಣ ಮತ್ತು ಗಾಂಧಿಯವರ ವಿಚಾರಗಳ ಸಾಮ್ಯತೆ ಮತ್ತು ಭಿನ್ನತೆಯ ಬಗ್ಗೆ ಒಂದಷ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಅದರ ಮುಂದುವರಿದ ಭಾಗವಾಗಿ ಕೃಷ್ಣಪ್ರಜ್ಞೆ ಮತ್ತು ಬುದ್ಧ ಪ್ರಜ್ಞೆಯ ಕೆಲವು ನೋಟಗಳು……

ಮನುಷ್ಯ ತುಂಬಾ ಸಂಕಟಕ್ಕೆ ಸಿಲುಕಿದಾಗ ಅಥವಾ ದ್ವಂದ್ವದಲ್ಲಿ ಮುಳುಗಿದಾಗ ಸಂಪ್ರದಾಯವಾದಿಗಳಿಗೆ ಸಾಮಾನ್ಯವಾಗಿ ನೆನಪಾಗುವುದು ದೇವರು. ಅದಕ್ಕಿಂತ ಸ್ವಲ್ಪ ಹೆಚ್ಚಿನ ಅಧ್ಯಾತ್ಮಿಕ ಒಲವುಳ್ಳವರಿಗೆ ನೆನಪಾಗುವುದು ಕೃಷ್ಣ ಮತ್ತು ಭಗವದ್ಗೀತೆ. ಹಾಗೆಯೇ ಇದೇ ಸಂದರ್ಭದಲ್ಲಿ, ಸನ್ನಿವೇಶದಲ್ಲಿ ವೈಚಾರಿಕ ಮನೋಭಾವದ ಬುದ್ಧಿಜೀವಿಗಳಿಗೆ ನೆನಪಾಗುವುದು ಗೌತಮ ಬುದ್ಧ.

ಎರಡೂ ವಿಭಿನ್ನ ಚಿಂತನೆಗಳು. ಆದರೆ ಮನಸ್ಸಿನ ತಳಮಳಕ್ಕೆ ಒಂದು ರೀತಿ ಸಮಾಧಾನಕರ ಉತ್ತರ ನೀಡುವ ಪ್ರಯತ್ನದ ಸಾಧನೆಗಳೂ ಹೌದು.

ಉದಾಹರಣೆಗೆ ನಾವು ತುಂಬಾ ಸೋಲಿಗೆ ಒಳಗಾಗಿ, ಅನಾರೋಗ್ಯಕ್ಕೆ ತುತ್ತಾಗಿ, ಖಿನ್ನತೆಯಲ್ಲಿರುವ ಸಂದರ್ಭದಲ್ಲಿ ದೇವರ ನೆನಪಾಗುವುದು ಅಥವಾ ಪೂಜೆ, ಪುನಸ್ಕಾರ, ಹೋಮ, ಹವನ ಮುಂತಾದ ಭಕ್ತಿಯ ವಿವಿಧ ರೂಪಗಳ ನೆನಪಾಗುವುದು ಅಥವಾ ಭಗವದ್ಗೀತೆಯಲ್ಲಿ ಕೃಷ್ಣ ಬೋಧಿಸಿರುವ
ಶ್ಲೋಕ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗ್ವೋಸ್ತ್ವಕರ್ಮಣಿ ||

ಮೂಲ ಅರ್ಥ:ನಿನಗೆ ನಿನ್ನ ಕೆಲಸವನ್ನು (ಕರ್ತವ್ಯವನ್ನು) ಶ್ರದ್ಧೆಯಿಂದ ಮಾಡುವುದಷ್ಟೇ ಹಕ್ಕು ಇದೆ. ಅದರ ಫಲ ಏನೆಂಬುದನ್ನು ನಿರ್ಧರಿಸುವ ಅಥವಾ ಫಲದ ಆಸೆಯಿಂದ ಕೆಲಸ ಮಾಡುವ ಅಧಿಕಾರ ನಿನಗಿಲ್ಲ. ಫಲದ ಆಸೆಗಾಗಿ ನೀನು ಕರ್ಮಕ್ಕೆ ಕಾರಣನಾಗಬೇಡ ಹಾಗೂ ಕೆಲಸ ಮಾಡದೆ ಸುಮ್ಮನೆ ಕುಳಿತುಕೊಳ್ಳುವ (ನಿಷ್ಕ್ರಿಯರಾಗುವ) ಆಸೆಯೂ ನಿನಗಿರಬಾರದು.

ಏನು ಆಗಿದೆಯೋ ಅದು ಒಳ್ಳೆಯದಕ್ಕೆ, ಏನು ಆಗುತ್ತಿದೆಯೋ ಅದೂ ಒಳ್ಳೆಯದಕ್ಕೆ. ಏನು ಆಗಲಿದೆಯೋ ಅದೂ ಒಳ್ಳೆಯದಕ್ಕೆ. ನೀನಿಲ್ಲಿರುವುದು ನೆಪ ಮಾತ್ರ. ಎಲ್ಲಕ್ಕೂ ನಾನೇ ಸೂತ್ರದಾರ ಎಂಬ ಅದೃಶ್ಯ ಚಿಂತನೆಗಳ, ಜನ್ಮಾಂತರದ ನಂಬಿಕೆಗಳ ಒಂದು ವಿಚಾರ ನಮಗೆ ಒಂದಷ್ಟು ಸಮಾಧಾನ ನೀಡಬಹುದು.

ಇನ್ನೊಂದೆಡೆ, ಬುದ್ಧ ಪ್ರಜ್ಞೆ ಅರಿವಿನ ಆಳಕ್ಕಿಳಿದು ವಾಸ್ತವವನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ಈ ಶರೀರ ಸಹಜವಾಗಿಯೇ ಒಂದಲ್ಲ ಒಂದು ದಿನ ನಶಿಸಿ ಹೋಗುತ್ತದೆ. ರೋಗ ರುಜಿನಗಳು, ಕಷ್ಟ ನೋವುಗಳು, ವೃದ್ಧಾಪ್ಯ ನಿರಂತರವಾಗಿ ಮನುಷ್ಯ ಜನ್ಮದಲ್ಲಿ ಸಂಭವಿಸುತ್ತದೆ. ಎಲ್ಲವನ್ನು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಲೇಬೇಕು. ಇದು ಬಹುತೇಕ ಯಾರನ್ನೂ ಬಿಡುವುದಿಲ್ಲ. ನಮಗೆ ಬಂದ ಕಷ್ಟಗಳಿಗೆ ಬಹುತೇಕ ನಾವೇ ಕಾರಣರು. ನಮ್ಮ ಬದುಕಿನ ಕ್ರಿಯೆ, ಪ್ರತಿಕ್ರಿಯೆಗಳು ನಮ್ಮನ್ನು ರೂಪಿಸಿರುತ್ತವೆ. ಅದಕ್ಕೆ ಪೂರಕವಾಗಿ ಅನೇಕ ಒಳ, ಹೊರಗಿನ ಕಾರಣಗಳು ಇರುತ್ತವೆ. ಆದ್ದರಿಂದ ಎಲ್ಲವೂ ಅತ್ಯಂತ ಸಹಜವಾಗಿರುತ್ತದೆ ಮತ್ತು ಅದೇ ಪ್ರಾಕೃತಿಕ ನ್ಯಾಯ. ಅದನ್ನು ಸ್ವೀಕರಿಸುವ ಮನೋಭಾವ ಮಾತ್ರ ನಮ್ಮ ನಿಯಂತ್ರಣದಲ್ಲಿದ್ದರೆ ಎಲ್ಲಾ ನೋವು, ಖಿನ್ನತೆಗಳು ಸಹಜವಾಗಿಯೇ ನಿಯಂತ್ರಣಕ್ಕೆ ಬರುತ್ತದೆ. ನಾವು ಯಾರೇ ಆಗಿದ್ದರೂ ಈ ಪ್ರಾಕೃತಿಕ ನಿಯಮವನ್ನು ಮೀರಲು ಸಾಧ್ಯವಿಲ್ಲ ಎಂದು ಬುದ್ಧ ಪ್ರಜ್ಞೆ ಅರ್ಥ ಮಾಡಿಸುತ್ತದೆ. ಆಗ ಮನಸ್ಸಿಗೆ ಒಂದಷ್ಟು ಸಮಾಧಾನ ಮೂಡುತ್ತದೆ.

ಮುಖ್ಯವಾಗಿ,
ಗೌತಮ ಬುದ್ಧ ದುಃಖ ನಿವಾರಣೆಗಾಗಿ ಮತ್ತು ನಿರ್ವಾಣ ಪ್ರಾಪ್ತಿಗಾಗಿ ಅಷ್ಟಾಂಗ ಮಾರ್ಗ (ಎಂಟು ಮಾರ್ಗಗಳು) ಎನ್ನುವ ಮಧ್ಯಮ ಮಾರ್ಗವನ್ನು ಬೋಧಿಸಿದ್ದಾನೆ. ಬುದ್ಧನ ಆ ಎಂಟು ಮಾರ್ಗಗಳು ಕನ್ನಡದಲ್ಲಿ ಈ ಕೆಳಗಿನಂತಿವೆ:
ಸಮ್ಯಕ್ ದೃಷ್ಟಿ (Samyak Drishti) – ಒಳ್ಳೆಯದು ಮತ್ತು ಕೆಟ್ಟದ್ದನ್ನು ಸರಿಯಾಗಿ ತಿಳಿಯುವುದು (ಸರಿಯಾದ ನಂಬಿಕೆ/ನೋಟ).
ಸಮ್ಯಕ್ ಸಂಕಲ್ಪ (Samyak Sankalpa) – ಆಸೆ, ಕ್ರೋಧ ಮತ್ತು ಹಿಂಸೆಯಿಂದ ದೂರವಿರಲು ದೃಢ ನಿರ್ಧಾರ ಮಾಡುವುದು (ಸರಿಯಾದ ಆಲೋಚನೆ).
ಸಮ್ಯಕ್ ವಾಕ್ (Samyak Vaak) – ಸತ್ಯವಾದ, ಮೃದುವಾದ ಮತ್ತು ಒಳ್ಳೆಯ ಮಾತುಗಳನ್ನು ಮಾತ್ರ ಆಡುವುದು (ಸರಿಯಾದ ಮಾತು).
ಸಮ್ಯಕ್ ಕರ್ಮಾಂತ (Samyak Karmanta) – ಹಿಂಸೆ, ಕಳವು ಮತ್ತು ಕಾಮದಾಟಗಳಿಂದ ದೂರವಿರುವ ಉತ್ತಮ ನಡವಳಿಕೆ (ಸರಿಯಾದ ಕೆಲಸ/ಕ್ರಿಯೆ).
ಸಮ್ಯಕ್ ಆಜೀವ (Samyak Aajiva) – ನೇತಿ ಮತ್ತು ಪ್ರಾಮಾಣಿಕವಾದ ರೀತಿಯಲ್ಲಿ ಜೀವನೋಪಾಯವನ್ನು ನಡೆಸುವುದು (ಸರಿಯಾದ ಜೀವನ).
ಸಮ್ಯಕ್ ವ್ಯಾಯಾಮ (Samyak Vyayama) – ಕೆಟ್ಟThoughts (ಆಲೋಚನೆಗಳು) ಬರದಂತೆ ತಡೆದು, ಒಳ್ಳೆಯ ಯೋಚನೆಗಳನ್ನು ಬೆಳೆಸಿಕೊಳ್ಳುವುದು (ಸರಿಯಾದ ಪ್ರಯತ್ನ).
ಸಮ್ಯಕ್ ಸ್ಮೃತಿ (Samyak Smriti) – ಮನಸ್ಸು ಮತ್ತು ಶರೀರದ ಬಗ್ಗೆ ಸದಾ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಇರುವುದು (ಸರಿಯಾದ ನೆನಪು/ಮನೆ).
ಸಮ್ಯಕ್ ಸಮಾಧಿ (Samyak Samadhi) – ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಿ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು (ಸರಿಯಾದ ಏಕಾಗ್ರತೆ).ಈ ಅಷ್ಟಾಂಗ ಮಾರ್ಗಗಳು ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನೀಡುತ್ತವೆ.

ಇದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಕೃಷ್ಣಪ್ರಜ್ಞೆಯನ್ನು ಆಳವಾಗಿ ಅಧ್ಯಯನ ಮಾಡಿ, ಹಾಗೆಯೇ ಬುದ್ಧ ಪ್ರಜ್ಞೆಯನ್ನು ಆಳವಾಗಿ ಅಧ್ಯಯನ ಮಾಡಿ, ಯಾವುದನ್ನು ದ್ವೇಷಿಸದೆ ಯಾವುದನ್ನು, ಯಾರನ್ನು ವಿರೋಧಿಸದೆ, ಯಾರಿಗೂ ಸೇರದ ತಟಸ್ಥ ಸ್ಥಳದಲ್ಲಿ ನಿಂತು, ಇಡೀ ಭಾರತೀಯ ಸಮಾಜದ ಜನರ ಮನಸ್ಥಿತಿ, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಮತ್ತೆ ಸರಳವಾಗಿ ಮತ್ತು ಸಹಜವಾಗಿ ಬದುಕಿನ ಸಂಘರ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಆಗ ಬುದ್ಧ ಪ್ರಜ್ಞೆ ಮತ್ತು ಕೃಷ್ಣಪ್ರಜ್ಞೆ ಅರ್ಥವಾಗುತ್ತದೆ.

ಜೊತೆಗೆ ಇದು ನಮಗೆ ಮಾತ್ರ ಅನ್ವಯಿಸಿಕೊಂಡು ವೈಯಕ್ತಿಕ ನೆಲೆಯಲ್ಲಿ ಚಿಂತಿಸುವುದಲ್ಲ. ವ್ಯಕ್ತಿಗತವಾಗಿ ಚಿಂತಿಸಿಯೂ, ಸಾಮಾಜಿಕವಾಗಿಯೂ ಚಿಂತಿಸಿದರೆ ಮಾತ್ರ ಎರಡರ ನಡುವಿನ ವ್ಯತ್ಯಾಸ ಅರ್ಥವಾಗುತ್ತದೆ. ಕೃಷ್ಣ ಪ್ರಜ್ಞೆ ಭಕ್ತಿಯ ಪರಮೋಚ್ಚ ಸ್ಥಿತಿಯಾಗಲಿ , ಬುದ್ಧ ಪ್ರಜ್ಞೆಯ ಅರಿವಿನ ಪರಮೋಚ್ಚ ಸ್ಥಿತಿಯಾಗಲಿ ತಲುಪುವ ಮಾರ್ಗದಲ್ಲಿ ಮನಸ್ಸು ಅತ್ಯಂತ ಶುದ್ಧವಾಗಿ ವಿಶಾಲವಾಗಿ ಮತ್ತು ಸಮಗ್ರವಾಗಿ ಇರಬೇಕಾಗುತ್ತದೆ.

ಇಡೀ ಜಗತ್ತಿನ ಮಾನವ ಕುಲದ ಮನಸ್ಥಿತಿಯ, ಸಾರ್ವತ್ರಿಕ ಸತ್ಯದ ಹುಡುಕಾಟದ ಆಸಕ್ತಿ ಇದ್ದಾಗ ಮಾತ್ರ, ನಿರ್ಮಲ, ಸ್ವಚ್ಛ ಮನಸ್ಸಿನ, ದೂರದೃಷ್ಟಿಯ ಮತ್ತು ವಿಷಯವನ್ನು ತಿಳಿಯಲೇಬೇಕೆಂಬ ಕುತೂಹಲ ಇದ್ದಾಗ ಮಾತ್ರ ಇಂತಹ ವಿಷಯಗಳು ಸ್ವಲ್ಪ ಮಟ್ಟಿಗೆ ಅರ್ಥವಾಗಲು ಸಾಧ್ಯ. ಸಹಜ ಸ್ಥಿತಿಯಲ್ಲಿ ಬುದ್ಧ ಪ್ರಜ್ಞೆ ಮತ್ತು ಕೃಷ್ಣ ಪ್ರಜ್ಞೆ ಅಂತರ್ಗತವಾಗಿ ವ್ಯಕ್ತವಾಗಬಹುದೇ ಹೊರತು ಪ್ರಜ್ಞಾಪೂರ್ವಕವಾಗಿ ಅರಿವಿಗೆ ಬರುವುದಿಲ್ಲ.

ಈ ಲೇಖನ ಕೂಡ ಅತ್ಯಂತ ಸರಳ ನಿರೂಪಣೆ. ಇದನ್ನು ಮೀರಿಯೂ ಅನೇಕ ಆಯಾಮಗಳು ಇವುಗಳಲ್ಲಿದೆ. ಕೃಷ್ಣಪ್ರಜ್ಞೆ ಒಂದು ರೀತಿ ನಂಬಿಕೆಯ ಆಧಾರದ ಮೇಲೆ ನಿಂತಿದ್ದರೆ, ಬುದ್ಧ ಪ್ರಜ್ಞೆ ಸಹಜ, ಸ್ವಾಭಾವಿಕ ಮತ್ತು ನಮ್ಮ ಅರಿವಿನ ಆಳದ ಪ್ರಜ್ಞೆಯ ಮೇಲೆ ನಿಂತಿದೆ. ಹೆಚ್ಚು ಶ್ರಮಬಯಸದ, ಸಂಪ್ರದಾಯಗಳಿಗೆ ಜೋತು ಬಿದ್ದ ಭಕ್ತಿ ಮತ್ತು ಜನ್ಮಾಂತರದಲ್ಲಿ ನಂಬಿಕೆ ಇರುವವರಿಗೆ ಕೃಷ್ಣ ಪ್ರಜ್ಞೆ ಸಮಾಧಾನ ನೀಡಿದರೆ, ಆಳವಾದ ಅಧ್ಯಯನ, ಚಿಂತನೆ ಮತ್ತು ವೈಜ್ಞಾನಿಕ ಮನೋಭಾವದವರಿಗೆ ಬುದ್ಧ ಪ್ರಜ್ಞೆ ಸಮಾಧಾನ ನೀಡುತ್ತದೆ. ಉಳಿದದ್ದು ಅವರವರ ವಿವೇಚನೆಗೆ ಬಿಡುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!