IMG_20260928_005004.jpg
Spread the love

ಕೊಯಮತ್ತೂರು: ಹಾಲಿವುಡ್ ಸಿನಿಮಾವನ್ನೇ ಮೀರಿಸುವ ಪೊಲೀಸ್ ಚೇಸಿಂಗ್ ವೊಂದು ತಮಿಳುನಾಡಿನಲ್ಲಿ ನಡೆದಿದ್ದು, ಈ ಕುರಿತ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಗುಟ್ಕಾ ಸ್ಮಗ್ಲರ್ ಗಳ ಗುಂಪೊಂದು ತಪಾಸಣೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸ್ ಕಾನ್`ಸ್ಟೇಬಲ್ ಕಾರನ್ನು ತಡೆಯುವ ಯತ್ನದಲ್ಲಿ ಕಾರಿನ ಮೇಲೆ ಹತ್ತಿದ್ದಾರೆ. ಕಾರು ಸ್ಮಗ್ಲರ್ ಗಳು ಮಾತ್ರ ಕಾರು ನಿಲ್ಲಿಸದೇ ಪೇದೆ ಸಮೇತ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ.

300ಕೆಜಿ ಗುಟ್ಕಾ, ನಿಷೇಧಿತ ಉತ್ಪನ್ನಗಳು

ಆರೋಪಿತ ಕಾರಿನಲ್ಲಿ ಸುಮಾರು 300 ಕೆಜಿ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳು ಇದ್ದವು ಎನ್ನಲಾಗಿದೆ. ಕೊಯಮತ್ತೂರು ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರೊಂದನ್ನು ತಡೆದಿದ್ದರು. ಕಾರಿನ ಹಿಂಭಾಗದಲ್ಲಿ ಹಲವು ಚೀಲಗಳು ಕಂಡುಬಂದಿದ್ದವು.

ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಚೀಲಗಳನ್ನು ಪರಿಶೀಲಿಸಲು ಮುಂದಾದಾಗ ಕಾರಿನಲ್ಲಿದ್ದ ಮೂವರು ಪೊಲೀಸರನ್ನು ತಳ್ಳಿ, ಬಾಗಿಲುಗಳನ್ನು ಲಾಕ್‌ ಮಾಡಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.8

ಕಾರಿನ ಬ್ಯಾನೆಟ್ ಏರಿದ ವೇಲ್ ಮುರುಗನ್

ಈ ವೇಳೆ ಸಮಯಪ್ರಜ್ಞೆ ಮೆರೆದ ಹೆಡ್‌ಕಾನ್‌ಸ್ಟೆಬಲ್‌ ವೆಲ್ ಮುರುಗನ್‌ ಕಾರಿನ ಮೇಲ್ಛಾವಣಿಗೆ ಜಿಗಿದು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಕಾರು ಕೊಯಮತ್ತೂರಿನ ಹೊರವಲಯದ ಹಲವು ಜನನಿಬಿಡ ಪ್ರದೇಶಗಳ ಮೂಲಕ ವೇಗವಾಗಿ ಸಾಗಿದ್ದು, ಟೋಲ್‌ ಪ್ಲಾಜಾವೊಂದನ್ನೂ ದಾಟಿದೆ. ಚಾಲಕ FASTag ಮೂಲಕ ಟೋಲ್‌ ಪಾವತಿಸಿ ಬ್ಯಾರಿಯರ್‌ ದಾಟಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ವಿಡಿಯೋ ವೈರಲ್

ಕಾರಿನ ಮೇಲ್ಛಾವಣಿಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಅಪಾಯಕಾರಿ ರೀತಿಯಲ್ಲಿ ಅಂಟಿಕೊಂಡಿರುವುದನ್ನು ಕಂಡ ಹಲವು ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ.

ಹಾಲಿವುಡ್ ರೇಂಜ್ ಪೊಲೀಸ್ ಚೇಸಿಂಗ್

ಇತ್ತ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ನೆರೆಯ ತಿರುಪ್ಪೂರು ಜಿಲ್ಲೆಯ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಆಂಬ್ಯುಲೆನ್ಸ್‌ ಸಿಬ್ಬಂದಿ ಕಾರನ್ನು ತಡೆಯಲು ಕಾರ್ಯಾಚರಣೆ ಆರಂಭಿಸಿದರು. ಸುಮಾರು 40 ಕಿ.ಮೀ. ಮುಂದುವರಿದ ಬೆನ್ನಟ್ಟುವಿಕೆ ಕೊನೆಗೂ ಅವಿನಾಶಿ ಬಳಿ ಅಂತ್ಯಗೊಂಡಿದೆ. ಪೊಲೀಸ್‌ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳು ಕಾರನ್ನು ಸುತ್ತುವರಿದು ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.

ಇಬ್ಬರ ಬಂಧನ

ಕಾರಿನಲ್ಲಿದ್ದ ಮೂವರ ಪೈಕಿ ಒಬ್ಬನನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದರೆ, ಉಳಿದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಬಾಬು ಧಾರಾ (27), ರಾಜೇಶ್‌ (23) ಮತ್ತು ಸುರೇಶ್‌ (20) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನಿಂದ ಕೊಯಮತ್ತೂರಿಗೆ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಸಾಗಿಸಿ, ಅಲ್ಲಿ ಪೂರೈಕೆ ಮಾಡಲು ಹೊರಟಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವಾದ ಆಂಬ್ಯುಲೆನ್ಸ್‌ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೂ ಮೆಚ್ಚುಗೆ ವ್ಯಕ್ತವಾಗಿದೆ.

error: No Copying!