ಮಣಿಪಾಲ: ದಿನಾಂಕ:19-09-2026 (ಹಾಯ್ ಉಡುಪಿ ನ್ಯೂಸ್) ಅಂಬಾಗಿಲು -ಮಣಿಪಾಲ ರಸ್ತೆಯ ಮಣಿಪಾಲದ ಗೇಮ್ಸ್ ಸೆಂಟರ್ ಸಿಟಿ ಅರೇನಾ ಎಂಬ ಅನಧಿಕೃತ ಗೇಮ್ಸ್ ಅಡ್ಡೆಗೆ ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ವಿವೇಕಾನಂದ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಗೇಮ್ಸ್ ಅಡ್ಡೆಗೆ ಬೀಗ ಜಡಿದಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ವಿವೇಕಾನಂದ ಅವರು ದಿನಾಂಕ 17/09/2026 ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 18/09/2026 ರಂದು ಸಮಯ ಸುಮಾರು ಮುಂಜಾನೆ 12:45 ಗಂಟೆಗೆ ಶಿವಳ್ಳಿ ಗ್ರಾಮದ ಮಣಿಪಾಲದ ,ಮಣಿಪಾಲ ಅಂಬಾಗಿಲು ರಸ್ತೆಯಲ್ಲಿರುವ ಗೇಮ್ಸ್ ಸೆಂಟರ್ ಸಿಟಿ ಅರೇನಾದಲ್ಲಿ ಅವಧಿ ಮೀರಿ ಗೇಮ್ಸ್ ಗಳನ್ನು ಆಡಿಸುತಿದ್ದು ಉಡುಪಿಯ ವಿವಿದ ಪರಿಸರದಿಂದ ಸಾರ್ವಜನಿಕರು ಅಲ್ಲಿ ಬಂದು ಆ ಸ್ಥಳದಲ್ಲಿ ಜಮಾಯಿಸುವುದರಿಂದ ಅಲ್ಲಿಯೇ ಪರಿಸರದಲ್ಲಿ ವಾಸವಿರುವ ಇತರ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ತೊಂದರೆಯಾದ ಬಗ್ಗೆ ಬಂದ ದೂರಿನ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದ ಸಮಯ ಠಾಣೆಯ ಸಿಬ್ಬಂದಿ ಸಿದ್ದೇಶ, ಸಚಿನ್ ರವರೊಂದಿಗೆ ಹೋಗಿ ವೀಡಿಯೋ ಮಾಡಿ ಗೇಮ್ಸ್ ಸೆಂಟರ್ ಸಿಟಿ ಅರೇನಾವನ್ನು ಮುಚ್ಚಿಸಿದ್ದಾರೆ.
ಈ ಗೇಮ್ಸ್ ಸೆಂಟರನ್ ಮ್ಯಾನೇಜರ್ ಸತ್ಯ ಸ್ವರೂಪ ಎಂಬವರಿಗೆ ಈ ಹಿಂದೆ ಹಲವಾರು ಬಾರಿ ಮೌಖಿಕವಾಗಿ ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದರೂ ಸಹ ಈ ಗೇಮ್ ಸೆಂಟರ್ ನ ಮಾಲೀಕರು ಮತ್ತು ಮ್ಯಾನೇಜರ್ ಅವಧಿ ಮೀರಿ ಯಾವುದೇ ಪರವಾನಿಗೆ ಪಡೆಯದೇ ಕಾರ್ಯಚರಣೆ ಮಾಡಿದ್ದರಿಂದ ರಾತ್ರಿ ವೇಳೆಯಲ್ಲಿ ಮಣಿಪಾಲದ ಹೊರಗಿನ ಜನರು ಮದ್ಯಪಾನ ಮಾಡಿ ಅಲ್ಲಿಯೇ ಬಂದು ಸೇರುವುದರಿಂದ ಅಲ್ಲಿನ ಅಕ್ಕ ಪಕ್ಕದಲ್ಲಿರುವ ಶಾಂಭವಿ ಎಂಪ್ಯಾರ್ ಶಾಂಭವಿ ಹೆರಿಟೇಜ್ ಹಾಗೂ ಗ್ರೀನ್ ಫಾರ್ಚೂನ್ ಅಪಾರ್ಟ್ ಮೆಂಟ್ ನಿವಾಸಿಗಳ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡಿ ಸಾರ್ವಜನಿಕ ಉಪದ್ರವಕ್ಕೆ ಕಾರಣವಾಗಿದ್ದರು ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ .
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 156/2026 ಕಲಂ: 292 BNS ರಂತೆ ಪ್ರಕರಣ ದಾಖಲಾಗಿದೆ.
ಮಣಿಪಾಲ ಪರಿಸರದಲ್ಲಿ ಮಾಮೂಲಿ ಸಂದಾಯ ಮಾಡುತ್ತಾ ಇಂತಹ ಹಲವಾರು ಅನಧಿಕೃತ ಗೇಮ್ಸ್ ಅಡ್ಡೆಗಳಿದ್ದು ತಡ ರಾತ್ರಿ ವರೆಗೆ ಕಾರ್ಯಾಚರಿಸುತ್ತಿದ್ದು,ಯುವಕರು ಇಲ್ಲಿ ಸಿಗರೇಟ್,ಗಾಂಜಾ ಗಳಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳು ಮಣಿಪಾಲ ಪರಿಸರದ ಎಲ್ಲಾ ಅನಧಿಕೃತ ಗೇಮ್ಸ್ ಅಡ್ಡೆಗಳಿಗೆ ದಾಳಿ ನಡೆಸಿ ಶಾಶ್ವತ ಬೀಗ ಜಡಿಯ ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

