IMG-20260918-WA0053.jpg
Spread the love

ದಿನಾಂಕ:19-09-2026(ಹಾಯ್ ಉಡುಪಿ ನ್ಯೂಸ್)

ಮಂಗಳೂರು:ಕರಾವಳಿ ಜನರ ದಶಕಗಳ ಕನಸಿಗೆ ಕೊನೆಗೂ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಸ್ಪಂದಿಸಿದ್ದು, ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಈ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದರು.

ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಹಾಗೂ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಸುಧೀರ್ಘ ಬೆಳವಣಿಗೆ ಕಂಡಿದೆ. ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಇದನ್ನು ಆಡಳಿತ ಭಾಷೆಯಾಗಿ ಘೋಷಿಸಬೇಕೆಂದು ಕರಾವಳಿ ಭಾಗದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರು.

ಈ ಸಂಬಂಧ ತಜ್ಞರು ಮತ್ತು ಅಧಿಕಾರಿಗಳಿಂದ ಪಡೆದ ವರದಿಯನ್ನು ಆಧಾರವಾಗಿಟ್ಟುಕೊಂಡು, ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಸರ್ಕಾರಿ ಉದ್ದೇಶಗಳಿಗಾಗಿ ಹೆಚ್ಚುವರಿ ಆಡಳಿತ ಭಾಷೆಯಾಗಿ ಬಳಸಲು ಸಂಪುಟ ಸಭೆ ಅಂತಿಮ ಅನುಮೋದನೆ ನೀಡಿದೆ.

ಈ ಹೊಸ ಘೋಷಣೆಯು ಮುಖ್ಯವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗಲಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಭಾಷಾ ಬಳಕೆ, ಅನುವಾದ ಹಾಗೂ ಸಿಬ್ಬಂದಿ ತರಬೇತಿಯಂತಹ ವಿವಿಧ ಚಟುವಟಿಕೆಗಳಿಗಾಗಿ ಸರ್ಕಾರವು ಪ್ರತಿ ವರ್ಷ 82 ಲಕ್ಷ ರೂಪಾಯಿ ಅನುದಾನವನ್ನು ಕಾಯ್ದಿರಿಸಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮದಿಂದ ಕರಾವಳಿ ಭಾಗದ ತುಳು ಭಾಷಾ ಪ್ರೇಮಿಗಳು ಮತ್ತು ತುಳುವರು ಭಾರೀ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

error: No Copying!