ಬೆಂಗಳೂರು: ದಿನಾಂಕ:14-09-2026(ಹಾಯ್ ಉಡುಪಿ ನ್ಯೂಸ್) ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಇಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿ, ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್‌ಶಿಪ್ ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ಇಂದು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮುಖ್ಯಮಂತ್ರಿಗಳು ದಿಢೀರ್ ಭೇಟಿ ನೀಡಿ, ಸ್ವತಃ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು .ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್‌ಶಿಪ್ ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಂಡರು.
ಕಲಬುರಗಿ, ರಾಯಚೂರು, ಹಾವೇರಿ, ಬೀದರ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಮಕ್ಕಳು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅವರ ಬದುಕಿನಲ್ಲಿ ಯಾವುದೇ ಕೊರತೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ವಿದ್ಯಾರ್ಥಿ ನಿಲಯದಲ್ಲಿನ ಕೆಲವು ಕುಂದು-ಕೊರತೆಗಳ ಕುರಿತು ಸಿಬ್ಬಂದಿ ವರ್ಗದವರು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಡೆಪ್ಯೂಟಿ ಕಮಿಷನರ್ ಹಾಗೂ ಸಿಇಓಗೆ ಹೇಳಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅಗತ್ಯ ನೆರವು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ನಮ್ಮ ನಾಡಿನ ಪ್ರತಿಯೊಬ್ಬ ಮಗುವಿನ ಕನಸಿಗೂ ರೆಕ್ಕೆ ನೀಡುವುದು, ಅವರಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹೇಳಿದರು..


