ದಿನಾಂಕ:12-09-2026(ಹಾಯ್ ಉಡುಪಿ ನ್ಯೂಸ್)
ಉಷಾರಾಣಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ; ಕರಾವಳಿಯ ಕಾನೂನು ಕ್ಷೇತ್ರಕ್ಕೆ ಮತ್ತೊಂದು ಗರಿಮೆ
ಬೆಳ್ತಂಗಡಿ: ಬೆಳ್ತಂಗಡಿಯ ನೆಲದಲ್ಲಿ ಹುಟ್ಟಿ, ಕಾನೂನು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಉಷಾರಾಣಿ ಇದೀಗ ಕರ್ನಾಟಕ ಹೈಕೋರ್ಟ್‌ನ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಕೀರ್ತಿಯೂ ಸಲ್ಲುತ್ತದೆ . ಈ ಮಹತ್ವದ ನೇಮಕಾತಿ ಬೆಳ್ತಂಗಡಿ ಮಾತ್ರವಲ್ಲದೆ ಜೈನ ಸಮಾಜಕ್ಕೆ ಹಾಗೇ ಇಡೀ ಕರಾವಳಿ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ.
ಈವರೆಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾರಾಣಿ ಅವರು ಇದೀಗ ರಾಜ್ಯದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರ ನ್ಯಾಯಾಂಗ ಅನುಭವ, ಕಾನೂನು ಜ್ಞಾನ ಹಾಗೂ ಸೇವಾ ಹಿನ್ನೆಲೆ ಈ ನೇಮಕಾತಿಗೆ ಮತ್ತಷ್ಟು ಮಹತ್ವ ನೀಡಿದೆ.
ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುವ ಉಷಾರಾಣಿ ಅವರು ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಹಿರಿಯ ವಕೀಲ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ನೇಮಿರಾಜ ಶೆಟ್ಟಿ ಅವರ ಪುತ್ರಿ ಎಂಬ ಹೆಗ್ಗಳಿಕೆಯೂ ಅವರಿಗಿದೆ.
ವಿಶೇಷವೆಂದರೆ, ಲಭ್ಯವಿರುವ ಮಾಹಿತಿಯಂತೆ ಕರ್ನಾಟಕ ಹೈಕೋರ್ಟ್‌ನ ಮೊದಲ ಜೈನ ಮಹಿಳಾ ನ್ಯಾಯಮೂರ್ತಿಯಾಗಿ ಉಷಾರಾಣಿ ಅವರು ಹೊಸ ಇತಿಹಾಸ ಬರೆಯಲಿದ್ದಾರೆ. ಅವರ ಈ ಸಾಧನೆ ಕಾನೂನು ಕ್ಷೇತ್ರದಲ್ಲಿ ಮುನ್ನಡೆಯಲು ಬಯಸುವ ಯುವತಿಯರಿಗೆ, ವಿಶೇಷವಾಗಿ ಕರಾವಳಿಯ ವಿದ್ಯಾರ್ಥಿನಿಯರಿಗೆ, ಪ್ರೇರಣೆಯ ಸಂದೇಶವಾಗಿದೆ.
ಬೆಳ್ತಂಗಡಿಯಿಂದ ಆರಂಭವಾದ ಶಿಕ್ಷಣ ಮತ್ತು ಕಾನೂನು ಕ್ಷೇತ್ರದ ಪಯಣ ಇಂದು ಕರ್ನಾಟಕದ ಉನ್ನತ ನ್ಯಾಯಾಂಗದವರೆಗೆ ತಲುಪಿದೆ. ಪ್ರತಿಭೆ, ಪರಿಶ್ರಮ ಮತ್ತು ನ್ಯಾಯದ ಬದ್ಧತೆ ಇದ್ದರೆ ಸ್ಥಳೀಯ ನೆಲೆಯಿಂದಲೂ ಅತ್ಯುನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಉಷಾರಾಣಿ ಅವರ ಪಯಣ ಮಾದರಿಯಾಗಿದೆ.
ಅವರ ಮುಂದಿನ ನ್ಯಾಯಾಂಗ ಸೇವೆ ಇನ್ನಷ್ಟು ಎತ್ತರಕ್ಕೆ ಸಾಗಲಿ, ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ಅವಕಾಶವೂ ದೊರಕಲಿ ಎಂಬ ಆಶಯದೊಂದಿಗೆ ಬೆಳ್ತಂಗಡಿ ಹಾಗೂ ಕರಾವಳಿಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
