HR2Th-2asAA01ra.jpg
Spread the love

ಬೆಂಗಳೂರು: ದಿನಾಂಕ:10-09-2026(ಹಾಯ್ ಉಡುಪಿ ನ್ಯೂಸ್) ಈ ಸರ್ಕಾರಕ್ಕೆ ಇನ್ನೂ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲಾವಕಾಶವಿದೆ. ಉಳಿದಿರುವ ಅವಧಿಯಲ್ಲಿ ಸರ್ಕಾರ ಜನರಿಗೆ ನೀಡಿರುವ ಎಲ್ಲಾ ಭರವಸೆಗಳು ಹಾಗೂ ವಾಗ್ದಾನಗಳನ್ನು ಈಡೇರಿಸುವ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಕಾಂಗ್ರೆಸ್‌ನ ಇತಿಹಾಸವೇ ಬಡವರಿಗೆ ಶಕ್ತಿ ನೀಡುವಂತಹದ್ದು. ಸಮಾಜದಲ್ಲಿನ ದೌರ್ಜನ್ಯ ಮತ್ತು ಶೋಷಣೆಯನ್ನು ನಿಲ್ಲಿಸುವುದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಕಾಂಗ್ರೆಸ್‌ನ ಮೂಲ ಆಶಯವಾಗಿದೆ.

ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈ ರಾಜ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ವಿರೋಧ ಪಕ್ಷಗಳು ಮಾಡುವ ಟೀಕೆಗಳಿಗೆ ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ಅವರಿಗೆ ಹೇಳಬಯಸುತ್ತೇನೆ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಆಯೋಜಿಸಿದ್ದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಮಾತನಾಡಿದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಿರುವ ಭ್ರಷ್ಟಾಚಾರ ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದು ವಿಪರ್ಯಾಸ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸರ್ಕಾರದಲ್ಲಿ ವಿಜಯೇಂದ್ರ ಅವರು ತಾವೇ ಮುಖ್ಯಮಂತ್ರಿ ಎಂಬಂತೆ ವರ್ತಿಸುತ್ತಿದ್ದರು. ಯಡಿಯೂರಪ್ಪನವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅಂಥವರು ಇಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವುದನ್ನು ನೋಡಿದಾಗ ನಗಬೇಕೋ, ಅಳಬೇಕೋ ಗೊತ್ತಾಗುವುದಿಲ್ಲ.

ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಿತು. ಈ ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇತ್ತು. ಆದರೆ ಅದರ ಬಗ್ಗೆ ಸಮರ್ಪಕವಾಗಿ ಚರ್ಚೆ ಮಾಡಲಿಲ್ಲ. ನಾಗೇಂದ್ರ ಅವರ ರಾಜೀನಾಮೆಗೆ ಪಾದಯಾತ್ರೆ ಮಾಡಿದರು. ಆದರೆ ರಾಜ್ಯ ಎದುರಿಸುತ್ತಿದ್ದ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಈಗ ಮತ್ತೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್‌ ಅಷ್ಟೇ. ಯಾವ ಸಮಸ್ಯೆಗಾಗಿ ಈ ಪಾದಯಾತ್ರೆ? ಕೇವಲ ರಾಜಕೀಯ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಸರ್ಕಾರವಾಗಲಿ, ಮುಖ್ಯಮಂತ್ರಿಗಳಾಗಲಿ ಇದಕ್ಕೆ ಸೊಪ್ಪು ಹಾಕುವ ಅಗತ್ಯವಿಲ್ಲ.

ಈ ಹಿಂದೆ ನಾನು, ಪರಮೇಶ್ವರ್‌ ಅವರು ಅನೇಕ ಬಾರಿ ಪಾದಯಾತ್ರೆ ಮಾಡಿದ್ದೇವೆ. ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಪಾದಯಾತ್ರೆಗಳು ಜನರ ಸಮಸ್ಯೆಗಳಿಗಾಗಿ, ಜನರ ಹಿತಕ್ಕಾಗಿ ನಡೆದವು. ಆದರೆ ಬಿಜೆಪಿಯವರು ಇಂದು ಯಾವುದೇ ಜನಪರ ವಿಚಾರವಿಲ್ಲದೆ ಕೇವಲ ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಯಾವುದೇ ಜನಪರ ಕೆಲಸ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಈಗ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ.

ಬಿಜೆಪಿಯ ನಾಲ್ಕು ವರ್ಷಗಳ ಆಡಳಿತದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಬದಲಾದರು. ಹಿಂದುಳಿದ ಜಾತಿಗಳಿಗಾಗಿ ಕೇವಲ ಐದು ಹಾಸ್ಟೆಲ್‌ಗಳನ್ನು ನಿರ್ಮಿಸಿದರು. ನಾವು ಅಧಿಕಾರದಲ್ಲಿದ್ದಾಗ 500ಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ನಿರ್ಮಿಸಿದ್ದೇವೆ. ಬಡವರಿಗೆ, ರೈತರಿಗೆ, ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಅವರು ಏನು ಮಾಡಲಿಲ್ಲ. ಇದೇ ನೋಡಿ ಅವರ ಇತಿಹಾಸ ಎಂದು ಸಿದ್ದರಾಮಯ್ಯ ಹೇಳಿದರು.

error: No Copying!