ಉಡುಪಿ : ದಿನಾಂಕ:30-08-2026(ಹಾಯ್ ಉಡುಪಿ ನ್ಯೂಸ್) ಕಳೆದ 20 ದಿನಗಳ ಹಿಂದೆ ಕಾಪು ಠಾಣಾ ವ್ಯಾಪ್ತಿಯಲ್ಲಿ ವಿಶು ಶೆಟ್ಟಿ ಅಂಬಲಪಾಡಿಯವರು ಅಪರಿಚಿತ ಮನನೊಂದ ಯುವತಿಯನ್ನು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚಿಕಿತ್ಸೆಗೆ ಸ್ಪಂದಿಸಿ ಬಿಡುಗಡೆಗೊಂಡ ಯುವತಿಯನ್ನು ಸಂಬಂಧಿಕರ ಪತ್ತೆಯಾಗದ ಕಾರಣ ವಿಶು ಶೆಟ್ಟಿಯವರು ಪೊಲೀಸರ ಸಹಾಯದಿಂದ ನಿಟ್ಟೂರಿನ ಮಹಿಳಾ ನಿಲಯಕ್ಕೆ ದಾಖಲಿಸಿದ ಘಟನೆ ನಡೆದಿದೆ.
ಯುವತಿ ಶ್ಯಾಮಿಲಿ (20) ಗುಜರಾತ್ ಮೂಲದವಳಾಗಿದ್ದು ಯಾವುದೋ ಕಾರಣದಿಂದ ಮನನೊಂದು ಉಡುಪಿಗೆ ಬಂದು ಅಸಹಾಯಕ ಸ್ಥಿತಿಯಲ್ಲಿದ್ದಾಗ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟಿದ್ದಳು. ಯುವತಿ ತನ್ನ ಪ್ರೇಮಿಯು ಜೈಲಿನಲ್ಲಿ ಇರುವುದಾಗಿ ತಿಳಿಸಿದ್ದು ಇದರಿಂದ ಮನನೊಂದಿದ್ದೇನೆ ಎಂಬ ಮಾಹಿತಿ ನೀಡಿದ್ದಾಳೆ. ಯುವತಿಯ ಬಗ್ಗೆ ಮಾಹಿತಿ ಇರುವವರು ಅಥವಾ ಸಂಬಂಧ ಪಟ್ಟವರು ರಾಜ್ಯ ಮಹಿಳಾ ನಿಲಯವನ್ನು ಸಂಪರ್ಕಿಸಲು ವಿಶು ಶೆಟ್ಟಿ ತಿಳಿಸಿದ್ದಾರೆ.
ಯುವತಿಯ ಚಿಕಿತ್ಸೆ, ಔಷಧಿ ಹಾಗೂ ಕ್ಯಾಂಟೀನ್ ವೆಚ್ಚ ರೂ.17000/- ಆಗಿದ್ದು ಅಂಬಲಪಾಡಿಯ ವ್ಯಾಪಾರಿ ಅಬ್ದುಲ್ಲಾರವರು ರೂ. 5,000/- ನೀಡಿದ್ದು, ಉಳಿದ ಹಣವನ್ನು ವಿಶು ಶೆಟ್ಟಿ ಭರಿಸಿದ್ದಾರೆ. ಕಾನೂನು ಪ್ರಕ್ರಿಯೆಯಲ್ಲಿ ಕಾಪು ಪೊಲೀಸರು ಸಹಕರಿಸಿದ್ದಾರೆ.
