ನೇಪಾಳದಲ್ಲಿ ಪ್ರವಾಹದಿಂದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೆಲವು ಯಾತ್ರಿಗಳು ಪ್ರವಾಹದಿಂದ ಕೊಚ್ಚಿ ಹೋದ ಸಂದರ್ಭದಲ್ಲಿ ಕಾರ್ಪೊರೇಟ್ ಅಧ್ಯಾತ್ಮಿಕ ಗುರು ಶ್ರೀ ಜಗ್ಗಿ ವಾಸುದೇವ್ ಅವರು ಕಣ್ಣೀರು ಹಾಕಿದ್ದಾರೆ. ಅವರ ಇಶಾ ಫೌಂಡೇಶನ್ ಗೆ ಸೇರಿದ ಹಲವಾರು ಭಕ್ತರು ಈ ಪ್ರವಾಹದಲ್ಲಿ ಅಸುನೀಗಿದ್ದು ಅವರಿಗೆ ತುಂಬಾ ದುಃಖ ಉಂಟು ಮಾಡಿದೆ. ಆ ದು:ಖ ಅತ್ಯಂತ ಸಹಜವಾದದ್ದು. ನೋವು, ನಲಿವು ಈ ಬದುಕಿನಲ್ಲಿ ಯಾರನ್ನೂ ಬಿಡುವುದಿಲ್ಲ.
ನಿರ್ವಾಣ ಸಮಯದಲ್ಲಿ ಬುದ್ದಂಗೂ ಕಾಡಿತ್ತು ಕಿಬ್ಬೊಟ್ಟೆ ನೋವು. ಅಂದರೆ ಮಾನಸಿಕವಾಗಿ ದೇಹ ತ್ಯಾಗಕ್ಕೆ ಸಿದ್ದರಾದ, ಎಲ್ಲಾ ರೀತಿಯ ಭಾವಗಳನ್ನು ಗೆದ್ದು ಸ್ಥಿತಪ್ರಜ್ಞರಾಗಿದ್ದ ಬುದ್ದರಿಗೂ ನೋವು ಕಾಡದೇ ಬಿಡಲಿಲ್ಲ. ಸಾವು ನೋವು ರೋಗರುಜಿನಗಳು ಯಾರನ್ನೂ ಬಿಡುವುದಿಲ್ಲ.
ನೇಪಾಳದ ಪ್ರವಾಹದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ…..
ಶಿವರಾತ್ರಿಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರೊಂದಿಗೆ ಕುಣಿಯುತ್ತಾ, ಶಿವನನ್ನು ಪೂಜಿಸುವ, ಆರಾಧಿಸುವ, ಶಿವನದೇ ವಾಸಸ್ಥಾನವನ್ನು ನೋಡಲು ಮಾನಸ ಸರೋವರದ ಕೈಲಾಸ ಪರ್ವತ ಯಾತ್ರೆಗೆ ಶಿವನ ಭಕ್ತರೇ ಸಾಗುತ್ತಿರುವಾಗ, ಈ ಪ್ರವಾಹದಿಂದ ಶಿವನ ಭಕ್ತರನ್ನು ರಕ್ಷಿಸಲು ಸಾಧ್ಯವಾಗದಿದ್ದಕ್ಕೆ ಹೊಣೆ ಯಾರಾಗಿರಬಹುದು ಎಂದು ನಾವು ಯೋಚಿಸುವುದು ತಪ್ಪೇ. ಮೆದುಳಿನ ಕೆಲಸವೇ ಅದಾದುದರಿಂದ ಸರಿ ತಪ್ಪುಗಳ ಪ್ರಶ್ನೆ ಉದ್ಭವಿಸುವುದಿಲ್ಲ.
ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗೆ ಪ್ರಶ್ನಿಸಬಹುದಾದರು ಈ ರೀತಿಯ ದುರಂತಕ್ಕೆ ಸರ್ಕಾರ ನೇರ ಹೊಣೆಯಾಗುವುದಿಲ್ಲ. ಏಕೆಂದರೆ ಯಾತ್ರೆಯನ್ನು ನಿಷೇಧಿಸಲು ಸಾಧ್ಯವಿಲ್ಲ. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅದು ಸಾಕಾಗುವುದಿಲ್ಲ. ಆದ್ದರಿಂದ ಸರ್ಕಾರದ ಜವಾಬ್ದಾರಿ ಕಡಿಮೆ ಇರುತ್ತದೆ. ಪರಿಹಾರ ಮಾತ್ರ ಯುದ್ಧೋಪಾದಿಯಲ್ಲಿ ಮಾಡಬೇಕಾಗುತ್ತದೆ. ಅದನ್ನು ಪ್ರಶ್ನಿಸಬಹುದು.
ಎರಡನೆಯದಾಗಿ, ಪ್ರಕೃತಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಕೃತಿ ಚಲನಶೀಲವಾದರೂ ನಿರ್ಜೀವ. ನಮ್ಮ ಮಾತುಗಳಿಗೆ ಪ್ರತಿಕ್ರಯಿಸಲಾರದು. ಅಲ್ಲದೇ
ಪ್ರಕೃತಿಗೆ ತನ್ನ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಯಂತ್ರಣವೇನು ಇಲ್ಲ. ಅದು ಸಹಜವಾಗಿಯೇ ತನ್ನ ಒತ್ತಡವನ್ನ ಹೊರ ಚೆಲ್ಲುತ್ತದೆ.
ಹಾಗಾದರೆ ಸದ್ಗುರುವನ್ನೂ ಪ್ರಶ್ನಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಸಹ ನಮ್ಮ ನಿಮ್ಮಂತೆ ಹುಲು ಮಾನವರು. ಅವರಿಗೂ ಈ ಅನಾಹುತ ತಡೆಯಲು ಸಾಧ್ಯವಿಲ್ಲ. ಕೆಲವರ ದೃಷ್ಟಿಯಲ್ಲಿ ಅವರು ದೇವಮಾನವರಾದರು ಅದು ಒಂದು ಅಂದಭಕ್ತಿ ಮತ್ತು ಭ್ರಮೆ ಅಷ್ಟೇ…
ನಿಜಕ್ಕೂ ನಾವು ಪ್ರಶ್ನಿಸಬೇಕಾಗಿರುವುದು ಇದೇ ಸದ್ಗುರು ಮತ್ತು ಅವರ ಅನುಯಾಯಿಗಳು ಸದಾ ಕಾಲ ಪ್ರಾರ್ಥಿಸುವ ಶಿವನನ್ನು. ಈಗ ನಾವು ಶಿವನನ್ನು ಪ್ರಶ್ನಿಸಿದರೆ ತಪ್ಪಾಗುತ್ತಿದೆಯೇ ?
ಅದು ದೈವ ವಿರೋಧಿ ಆಗುತ್ತದೆಯೇ ?
ಅದು ಧರ್ಮ ವಿರೋಧಿಯಾಗುತ್ತದೆಯೇ ?
ಅದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ…..
ಮನುಷ್ಯರಾದ ನಾವು ನಮ್ಮ ಅರಿವಿನ ಮಿತಿಯಲ್ಲಿ ಸಾಧ್ಯವಾದಷ್ಟು ವಾಸ್ತವಕ್ಕೆ ಹತ್ತಿರವಾದ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು, ಸಹಜತೆಯನ್ನು ಕಾಪಾಡಿಕೊಳ್ಳಬೇಕು. ಅತಿಯಾದ ನಿರೀಕ್ಷೆಗಳು, ಇಲ್ಲದ ಅಗೋಚರ ಶಕ್ತಿ, ಭ್ರಮೆಗಳಿಂದ ಹೊರಬಂದು ಅತ್ಯಂತ ಸಹಜವಾಗಿ ಜೀವಿಸಿದರೆ ನಮ್ಮ ನೋವು ಸಂಕಷ್ಟಗಳು ಒಂದಷ್ಟು ಕಡಿಮೆಯಾಗಬಹುದು.
ಸದ್ಗುರು ಜಗ್ಗಿ ವಾಸುದೇವ ಅವರ ಕಣ್ಣೀರು ಮತ್ತು ದುಃಖ ಸಹಜವಾದದ್ದು. ಆದರೆ ಶಿವನನ್ನು ತೋರಿಸಿ ಭ್ರಮೆಗಳನ್ನು ಸೃಷ್ಟಿಸಿ ಕಾರ್ಪೊರೇಟ್ ಶೈಲಿಯಲ್ಲಿ ಹಣ ಮಾಡುವುದು ವಂಚನೆ. ಮನುಷ್ಯ ತನ್ನ ಆಂತರಿಕ ಅರಿವಿನಿಂದ ಆತನ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಷ್ಟಗಳು ಹಾಗೆಯೇ ಇರುತ್ತವೆ. ಆದರೆ ಅವುಗಳ ತೀವ್ರತೆಯನ್ನು ನಾವು ಸ್ಥಿತಪ್ರಜ್ಞತೆಯಿಂದ ಕಡಿಮೆ ಮಾಡಿಕೊಳ್ಳಬಹುದು. ಆದರೆ ಕಾರ್ಪೊರೇಷನ್ ಆಧ್ಯಾತ್ಮಿಕ ಚಿಂತನೆಯಿಂದ ಸಹಜ ನೋವುಗಳು ಇನ್ನಷ್ಟು ತೀವ್ರವಾಗಿ ಆಘಾತ ಉಂಟುಮಾಡುತ್ತದೆ. ಏಕೆಂದರೆ ನಾವು ಸಹಜತೆಯಿಂದ ದೂರ ಸರಿಯುವಂತೆ, ಅವರ ಮೇಲೆಯೇ ಅವಲಂಬಿತವಾಗುವಂತೆ ಈ ದೇವಮಾನವರು ಭ್ರಮೆಗಳನ್ನು ಸೃಷ್ಟಿಸುತ್ತಾರೆ.
ಈ ಜಗತ್ತು ಸೃಷ್ಟಿಯಾದಂದಿನಿಂದ ಈ ರೀತಿಯ ಪ್ರಾಕೃತಿಕ ವಿಕೋಪಗಳು ಜೀವರಾಶಿಯ ಸಹಜ ಜೀವನ ಕ್ರಮದ ಭಾಗವಾಗಿಯೇ ಇದೆ. ಇದರ ಮೇಲೆ ಸಂಪೂರ್ಣ ನಿಯಂತ್ರಣ ಇನ್ನೂವರೆಗೂ ಸಾಧ್ಯವಾಗಿಲ್ಲ. ಕೆಲವು ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳಲ್ಲಿ ಒಂದಷ್ಟು ಸುಧಾರಣೆಯಾಗಿದೆ. ಜೊತೆಗೆ ಪರಿಸರದಲ್ಲಿ ಇದು ಸಹಜವಾದರೂ ಹಿಂದೆ ಜನಸಂಖ್ಯೆ ಕಡಿಮೆ ಇದ್ದ ಕಾರಣ ಈ ಅವಘಡಗಳಿಗೆ ಮನುಷ್ಯ ಸಿಕ್ಕಿ ಬೀಳುತ್ತಿರಲಿಲ್ಲ. ಈಗ ಅತಿಯಾದ ಜನಸಂಖ್ಯೆಯ ಕಾರಣ ಅವನ ವಾಸ ಸ್ಥಳಗಳು ವಿಸ್ತರಿಸುತ್ತಾ ಹೋಗಿರುವುದರಿಂದ ಮನುಷ್ಯ ಸಾವು ನೋವಿಗೆ ತುತ್ತಾಗುತ್ತಿದ್ದಾನೆ. ಈ ಸಹಜ ಅರಿವು ನಮ್ಮಲ್ಲಿ ಉಂಟಾದಾಗ ನಮ್ಮ ಹತ್ತಿರದವರ ಸಾವು ನೋವುಗಳಿಗೆ ನಮ್ಮ ಪ್ರತಿಕ್ರಿಯೆ ಸ್ವಲ್ಪ ಮಟ್ಟಿಗೆ ನಮ್ಮ ನೋವನ್ನು ಕಡಿಮೆ ಮಾಡಬಹುದು.
ಏನೇ ಆಗಲಿ ಮೌಢ್ಯದ ನಂಬಿಕೆಗಳಿಗಿಂತ ಅರಿವಿನ ವಾಸ್ತವಿಕ ಪ್ರಜ್ಞೆ ಹೆಚ್ಚು ಪ್ರಯೋಜನಕಾರಿ ಮತ್ತು ಉಪಯುಕ್ತ. ಅದು ನಮ್ಮನ್ನು ಇಂದಿನ ಸಂಘರ್ಷಮಯ ಬದುಕಿನಲ್ಲಿ ಜೀವಿಸಲು ನಮ್ಮ ಜೀವನದ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂಬುದು ಸತ್ಯ…….
ಎಲ್ಲಾ ಜಾತಿ ಧರ್ಮಗಳ ದೇವಮಾನರುಗಳು ಈ ಭ್ರಮೆಯಿಂದ ಹೊರ ಬಂದು, ಈ ಮಣ್ಣಿನ ದಾರ್ಶನಿಕರ ಚಿಂತನೆಗಳನ್ನು ಜನರಿಗೆ ವಾಸ್ತವ ನೆಲೆಯಲ್ಲಿ ತಲುಪಿಸಿದರೆ ಉತ್ತಮ. ಕಾರ್ಪೊರೇಟ್ ಶೈಲಿಯ ಆಧ್ಯಾತ್ಮಿಕತೆ ದಂಧೆ ಆಗಬಾರದು. ಅದು ಅರಿವಿನ ಅನುಭವ ಮಂಟಪವಾಗಬೇಕು. ಧನ್ಯವಾದಗಳು…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
