ಬೆಂಗಳೂರು: ದಿನಾಂಕ:30-08-2026(ಹಾಯ್ ಉಡುಪಿ ನ್ಯೂಸ್) “‘ರಾಜಗುರುತಿಲಕ’ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪೂಜ್ಯರು ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆ ಕಂಡವರು ಎಂದರು…
ಕಿರಿಯ ವಯಸ್ಸಿನಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆ ಕಂಡವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ನಿರತರಾದ ಮಹನೀಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.
ಜಾತಿ,ವರ್ಗಗಳ ಭೇದವಿಲ್ಲದೆ ಮಠಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ದಕ್ಷಿಣ ಭಾರತದಲ್ಲಿನ ಶಿಕ್ಷಣ ಕ್ರಾಂತಿಗೆ ಮಠಮಾನ್ಯಗಳು ಮಹತ್ತರ ಕೊಡುಗೆ ನೀಡಿವೆ. ರಾಜ್ಯದಲ್ಲಿ 46,302 ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ 24,000 ಖಾಸಗಿ ಶಾಲೆಗಳಿದ್ದು, 36 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಹಾಗೂ 57 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳು ಸರ್ಕಾರದ ಶಿಕ್ಷಣ ಕ್ರಾಂತಿಗೆ ಕೈಜೋಡಿಸದಿದ್ದರೆ, ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರವೊಂದರಿಂದಲೇ ಸಾಧ್ಯವಾಗದ ಕೆಲಸದಲ್ಲಿ ಮಠಮಾನ್ಯಗಳೂ ಕೈಜೋಡಿಸಿವೆ.
ಕೆಪಿಸಿಸಿ ಅಧ್ಯಕ್ಷನಾದಾಗ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ. ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟಕ್ಕೆ ಸುತ್ತೂರು ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಹೋರಾಟ ಯಶಸ್ವಿಯಾಯಿತು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನನ್ನ ಕಷ್ಟ-ಸುಖಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದಾರೆ.
ಶ್ರೀಮಠಗಳು ಸಮಾಜದ ಋಣವನ್ನು ತೀರಿಸುತ್ತಿವೆ. ಮನುಷ್ಯನು ತನ್ನ 4 ಋಣಗಳನ್ನು ತೀರಿಸುವಂತೆ, ಶ್ರೀಗಳು ಈ ಋಣಗಳನ್ನು ಧರ್ಮಕಾರ್ಯಗಳ ಮೂಲಕ ತೀರಿಸುತ್ತಿದ್ದಾರೆಎಂದರು.
