ಉಡುಪಿ: ಜೂನ್ ೭(ಹಾಯ್ ಉಡುಪಿ ನ್ಯೂಸ್) ನಗರದ ಪೆಟ್ರೋಲ್ ಪಂಪ್ ಒಂದರಲ್ಲಿ ಅಳತೆಗಿಂತ ಕಮ್ಮಿ ಪೆಟ್ರೋಲ್, ಡೀಸೆಲ್ ನೀಡಿ ಗ್ರಾಹಕರನ್ನು ವಂಚಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಪೆಟ್ರೋಲ್ ಪಂಪ್ ಒಂದರಲ್ಲಿ ಗ್ರಾಹಕರೋರ್ವರು ಕ್ಯಾನ್ ಒಂದರಲ್ಲಿ ಎರಡು ಲೀಟರ್ ಡೀಸೆಲ್ ಕೇಳಿ ಪಡೆದಿರುತ್ತಾರೆ. ಪೆಟ್ರೋಲ್ ಪಂಪ್ ನೌಕರ ನೀಡಿದ ಎರಡು ಲೀಟರ್ ಪೆಟ್ರೋಲ್ ಕ್ಯಾನ್ ನಲ್ಲಿ ಕಡಿಮೆ ಕಂಡು ಸಂಶಯಗೊಂಡ ಗ್ರಾಹಕರು ಇದರಲ್ಲಿ ಎರಡು ಲೀಟರ್ ಇದ್ದ ಹಾಗೆ ಇಲ್ಲವಲ್ಲ ಎಂದಾಗ : ಪೆಟ್ರೋಲ್ ಪಂಪ್ ನೌಕರ ಇಲ್ಲ ಸರಿ ಇದೆ ಎಂದು ಮೀಟರ್ ನಲ್ಲಿ ಎರಡು ಲೀಟರ್ ಬಂದಿದೆ ಎಂದು ತೋರಿಸಿ ಸುಮ್ಮನಾಗುತ್ತಾನೆ.
ಆದರೂ ತೂಕದಲ್ಲಿ ಬಲವಾದ ಸಂಶಯ ಬಂದ ಗ್ರಾಹಕರು ಕ್ಯಾನ್ ನಲ್ಲಿ ಪಡೆದ ಡೀಸೆಲ್ ಅನ್ನು ತೂಕ ಮಾಡಿದಾಗ ಎರಡು ಲೀಟರ್ ಗೆ ನಾಲ್ಕುನೂರು ಗ್ರಾಂ ಕಡಿಮೆ ಬಂದಿದ್ದು ಪೆಟ್ರೋಲ್ ಪಂಪ್ ನವರ ವಂಚನೆ ಬಯಲಾಗಿದೆ. ಮೀಟರ್ ನಲ್ಲಿ ಎಡ್ಜಸ್ಟ್ ಮೆಂಟ್ ಮಾಡಿಕೊಂಡು ಸತತವಾಗಿ ಗ್ರಾಹಕರನ್ನು ವಂಚಿಸಲಾಗುತ್ತಿದೆ. ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡು ಹೋಗುವ ಗ್ರಾಹಕರಿಗೆ ಈ ವಂಚನೆ ಗೊತ್ತಾಗುವುದೇ ಇಲ್ಲ. ವಾಹನ ಮ್ಯೆಲೇಜ್ ನೀಡುತ್ತಿಲ್ಲ ಎಂದೇ ಭಾವಿಸುತ್ತಾರೆ. ಆದರೆ ನಿಜವಾಗಿಯೂ ವಾಹನಕ್ಕೆ ಹಾಕಲಾಗಿರುವ ಪೆಟ್ರೋಲ್, ಡೀಸೆಲ್ ನಲ್ಲೇ ಖೋತಾ ಆಗಿರುವುದು ಗ್ರಾಹಕರ ಗಮನಕ್ಕೆ ಬರುವುದಿಲ್ಲ.
ದುಬಾರಿ ಬೆಲೆಯ ಪೆಟ್ರೋಲ್, ಡೀಸೆಲನ್ನು ಈ ರೀತಿ ಗ್ರಾಹಕರನ್ನು ವಂಚಿಸುತ್ತಿರುವ ಕೆಲವು ಪೆಟ್ರೋಲ್ ಪಂಪ್ ಗಳವರ ಮೇಲೆ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.
ಉಡುಪಿ ಜಿಲ್ಲೆಯ ಜನ ಯಾವುದಕ್ಕೂ ಪ್ರತಿಭಟಿಸುವವರಲ್ಲ, ಪ್ರಶ್ನೆ ಮಾಡುವವರಲ್ಲ ಎಂದು ಇಲ್ಲಿಯ ವಂಚಕರಿಗೆ ಗೊತ್ತಿದ್ದು ; ಇದೇ ಕಾರಣದಿಂದ ಲಂಗುಲಗಾಮಿಲ್ಲದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಪ್ರಶ್ನಿಸ ಬೇಕಾದ ಕೆಲವರು ಸಿಕ್ಕಷ್ಟು ಕಿಸೆಗೆ ಇಳಿಸಿಕೊಂಡು ರಾಜಿ ಮಾಡಿಕೊಂಡು ತೆಪ್ಪಗಿದ್ದಾರೆ.
ಪೆಟ್ರೋಲ್, ಡೀಸೆಲ್ ಗ್ರಾಹಕರೇ ಜಾಗ್ರತರಾಗಿ. ತಮ್ಮ ವಾಹನಗಳಿಗೆ ಡೀಸೆಲ್, ಪೆಟ್ರೋಲ್ ತುಂಬಿಸಿ ಕೊಳ್ಳುವಾಗ ಒಮ್ಮೆ ಕ್ಯಾನಿನಲ್ಲೂ ತುಂಬಿಸಿಕೊಳ್ಳಿ.ವಂಚನೆಯನ್ನು ಪತ್ತೆ ಹಚ್ಚಿರಿ.
ಜಿಲ್ಲಾಡಳಿತ ಎಚ್ಚೆತ್ತು ಕೊಂಡು ಜಿಲ್ಲೆಯಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಪೆಟ್ರೋಲ್ ಪಂಪ್ ಗಳ ಮೇಲೆ ಸತತ ದಾಳಿ ನಡೆಸಿ ಗ್ರಾಹಕರಿಗಾಗುತ್ತಿರುವ ವಂಚನೆಯನ್ನು ತಡೆದು ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.