ದಿನಾಂಕ:27-08-2026(ಹಾಯ್ ಉಡುಪಿ ನ್ಯೂಸ್)
ಉಡುಪಿ : ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ, ವಿದೇಶಿ ಕರೆನ್ಸಿ, ನಗದು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಅರುಣ್ ಎಸ್.ವಿ. (43), ಪೆರಂಪಳ್ಳಿ ಕುಂಜಿಬೆಟ್ಟು ನಿವಾಸಿ ಹಾಗೂ ಕೌಶಿಕ್ (19), ತೆಂಕನಿಡಿಯೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮದ ಭಗವತಿ ಲೇಔಟ್ ನಿವಾಸಿ ಸನಂ (39) ಅವರು ದುಬೈಯಿಂದ ಊರಿಗೆ ಬಂದಿದ್ದು, ಪತಿ ವಿದೇಶಕ್ಕೆ ತೆರಳಿದ ಬಳಿಕ ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ಬೆಳಗ್ಗೆ 11.30ಕ್ಕೆ ಮನೆಗೆ ವಾಪಸ್ ಬಂದಾಗ ಮನೆಯ ಟೆರೇಸ್ ಬಾಗಿಲನ್ನು ಆಯುಧದಿಂದ ಬಲವಂತವಾಗಿ ತೆರೆದಿರುವುದು ಕಂಡುಬಂದಿತ್ತು. ಮನೆಯ ಕಪಾಟಿನ ಡ್ರಾವರ್‌ನಲ್ಲಿದ್ದ 10,000 ಎಇಡಿ ವಿದೇಶಿ ಕರೆನ್ಸಿ ಹಾಗೂ ₹14,000 ನಗದು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಗಳು ಹಾಗೂ ಕಳವಾದ ಸೊತ್ತುಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ (ತನಿಖೆ) ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 23ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಸುಮಾರು 88.400 ಗ್ರಾಂ ಚಿನ್ನ, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣ, 1.45 ಗ್ರಾಂ ಚಿನ್ನದ ನಾಣ್ಯಗಳು, ವಿದೇಶಿ ಕರೆನ್ಸಿ, ₹33,000 ನಗದು, ಎರಡು ಮೊಬೈಲ್ ಫೋನ್‌ಗಳು, ವಿದೇಶಿ ಕೈಗಡಿಯಾರ, ಆಟೋರಿಕ್ಷಾ ಹಾಗೂ ಕೃತ್ಯಕ್ಕೆ ಬಳಸಿದ್ದ ಕಳವುಗೈದ ಪಲ್ಸರ್ ಬೈಕ್ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ₹23,56,230 ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಕಳವು ಮಾಡಿದ ಪಲ್ಸರ್ ಬೈಕ್‌ನಲ್ಲಿ ಸಂಚರಿಸಿ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಕೆಳಗಿನ ಪ್ರಕರಣಗಳು ದಾಖಲಾಗಿವೆ: ಉಡುಪಿ ಕೊಡಂಕೂರು ಗ್ರಾಮದ ಶಶಿರೇಖಾ ಅವರ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ.ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಅವರ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ.
ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಮಸೀದಿ ಬಳಿಯ ಗ್ಯಾರೇಜ್‌ನಿಂದ ಸಂದೇಶ್ ಅವರ ಪಲ್ಸರ್ ಬೈಕ್ ಕಳವು ಮಾಡಿದ ಪ್ರಕರಣ.ಮಲ್ಪೆ ಠಾಣಾ ವ್ಯಾಪ್ತಿಯ ಕೆಳಾರ್ಕಳಬೆಟ್ಟುವಿನಲ್ಲಿ ತೃಪ್ತಿ ಅವಿನಾಶ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ. ಅದೇ ಪ್ರದೇಶದಲ್ಲಿ ರವಿ ಉಪಾಧ್ಯ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ.
ಬಂಧಿತ ಆರೋಪಿಗಳ ಪೈಕಿ ಅರುಣ್ ಆಚಾರಿ ಈ ಹಿಂದೆ ಮಣಿಪಾಲ ಠಾಣೆಯ ಪೋಕ್ಸೋ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿದ್ದು, 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ ಪ್ರಕಾಶ್, ಪ್ರಸನ್ನ.ಸಿ., ಜೀವನ್‌ಕುಮಾರ್, ಕೃಷ್ಣದೇವಾಡಿಗ, ಆನಂದ ಗಾಣಿಗ, ಆನಂದ.ಎಸ್., ಓಬಳೇಶ್ ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್‌ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
