ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ……
ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 80 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ ವಿವಾದ ಇನ್ನೂ ಬಗೆಹರಿಸಲು ಸಾಧ್ಯವಾಗದೇ ಇರುವುದರ ವಿಫಲತೆಯ ಹೊಣೆ ಯಾರದು……
ಇಡೀ ಭಾರತ ದೇಶವೇ ಒಂದು ಎಂದು ಹೇಳುವ ನಾವು, ಸ್ವಾಭಾವಿಕವಾಗಿ ಪ್ರಕೃತಿಯ ಮಡಿಲಲ್ಲಿ ಇರುವ ನೀರನ್ನು, ಕೇವಲ ಭಾಷೆಯ ಆಧಾರದಲ್ಲಿ ರಚಿತವಾಗಿರುವ ನಮ್ಮದೇ ಬೇರೆ ಬೇರೆ ಪ್ರದೇಶಗಳ ಭಿನ್ನತೆಯನ್ನು ಮೀರಿ ಹಂಚಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರೆ ನಾಚಿಕೆಯಾಗಬೇಕಿರಿವುದು ಯಾರಿಗೆ………
ಮಹಾನ್ ರಾಜಕಾರಣಿಗಳು, ಆಡಳಿತಗಾರರು, ಪ್ರಕಾಂಡ ಪಂಡಿತರು, ಬುದ್ಧಿಜೀವಿಗಳು, ನ್ಯಾಯವಾದಿಗಳು, ನೀರಾವರಿ ತಜ್ಞರುಗಳು ಇದ್ದರೂ,
ಸಹಜ ನ್ಯಾಯದ, ಸಾಮಾನ್ಯ ಜ್ಞಾನದ ಮಾದರಿ ತಿಳಿದಿದ್ದರೂ,
ಮನುಷ್ಯನ ಮೂಲಭೂತ ಅವಶ್ಯಕತೆ ಕುಡಿಯುವ ನೀರು ಎಂದು ಅರಿವಿದ್ದರೂ, ಕೊಡು ಕೊಳ್ಳುವ ಸಣ್ಣ ಹಂಚಿಕೆ ಮತ್ತು ಮಾತುಕತೆಯ ಮುಖಾಂತರ ಇದನ್ನು ಬಗೆಹರಿಲು, ಸಾಧ್ಯವಾಗದ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂದರೆ ಅವಮಾನವಾಗಬೇಕಿರುವುದು ಯಾರಿಗೆ…………
ನಾವೇ ಚುನಾಯಿಸಿದ, ನಮ್ಮದೇ ಜನ ಪ್ರತಿನಿಧಿಗಳು ನಮ್ಮನ್ನು ಆಳುತ್ತಿರುವಾಗ, ನಮ್ಮದೇ ಸಮಸ್ಯೆಗಳನ್ನು, ಪರಿಹರಿಸುವ ಬದ್ಧತೆಯನ್ನು ಪ್ರದರ್ಶಿಸದ ಇವರನ್ನು ಏನೆಂದು ಕರೆಯಬೇಕು…....
ನೀರು ಯಾರ ಸ್ವಂತ ಆಸ್ತಿಯೂ ಅಲ್ಲ, ಅದಕ್ಕೆ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಕೇರಳ, ಗೋವ ಎಂಬ ಮನುಷ್ಯ ನಿರ್ಮಿತ ರಾಜ್ಯಗಳ ಗಡಿ ಗೆರೆಗಳೇ ಗೊತ್ತಿಲ್ಲ……..
ಹುಟ್ಟಿದ ಕ್ಷಣದಿಂದ, ಹುಟ್ಟಿದ ಸ್ಥಳದಿಂದ, ತನ್ನ ಸಹಜ ಧರ್ಮಕ್ಕೆ ಅನುಗುಣವಾಗಿ, ಹರಿಯುತ್ತಾ ಸಾಗುತ್ತದೆ. ಅದರ ದಿಕ್ಕು ಮತ್ತು ಲಭ್ಯತೆಯ ಆಧಾರದಲ್ಲಿ ಸಂಪೂರ್ಣ ಉಪಯೋಗ ಪಡೆಯುವ ಜವಾಬ್ದಾರಿ ನಮ್ಮದು………..
ಕನಿಷ್ಠ ನಮ್ಮ ನಿಯಂತ್ರಣಕ್ಕೆ ಒಳಪಟ್ಟ, ನಮ್ಮದೇ ದೇಶದ ಒಳಗಡೆ ಅದರ ಗರಿಷ್ಠ ಉಪಯೋಗ ನಮ್ಮದಾಗಬೇಕು, ಭಾಷೆ ಪ್ರದೇಶದ ಹಂಗಿಲ್ಲದೆ………
ಆದರೆ ಇದಕ್ಕೆ ರಾಜಕೀಯ ಆಡಳಿತವೇ ಒಂದು ಬೃಹತ್ ಸಮಸ್ಯೆ ಆಗಿದೆಯೆಂದರೆ ಅದಕ್ಕೆ ಹೊಣೆ ಯಾರು……..
ಜನರು ಮತ್ತೆ ” ಬಲವೇ ನ್ಯಾಯ ” ( Might is right ) ಎಂಬ ಅನಾಗರಿಕತೆಯತ್ತ ಮುಖ ಮಾಡಬೇಕೆ……….
ಹಾಗಾದರೆ ಮಾನವನ ಇಲ್ಲಿಯವರೆಗಿನ ನಾಗರಿಕ ಅನುಭವ ವ್ಯರ್ಥವೇ. ನಮ್ಮ ಜ್ಞಾನವನ್ನು ಸ್ವಾರ್ಥ, ದುರಾಸೆ, ಮರೆಮಾಚಿದೆಯೇ……
ಇಲ್ಲ, ಹಾಗಾಗಲು ಬಿಡಬಾರದು. ಮಾತುಕತೆಯಿಂದ ಪರಿಹರಿಸಲಾಗದ ಸಮಸ್ಯೆ ಇದಲ್ಲ. ವ್ಯವಸ್ಥೆಯ ಲೋಪ ದೋಷ ಸರಿಪಡಿಸಿಕೊಳ್ಳುವ ಸುಸಮಯ ಇದು. ಇನ್ನಷ್ಟು ಹದಗೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ………
ಇಲ್ಲವೇ ನಾವೆಲ್ಲರೂ ಹೊಸ ವ್ಯವಸ್ಥೆಯತ್ತ ಹೆಜ್ಜೆಗಳನ್ನು ಇಡಬೇಕಾಗುತ್ತದೆ………..
ಕೊಡಗಿನ ಕಾವೇರಿ – ಒಡಲಿನ ದಳ್ಳುರಿ……..
” ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ ಹೆಚ್ಚುವರಿ ನೀರನ್ನು ಅನುಕೂಲಕ್ಕೆ ತಕ್ಕಂತೆ ಇತರ ಪ್ರದೇಶಗಳು ಉಪಯೋಗಿಸಿಕೊಳ್ಳಬಹುದು “…….
ಇದು ವಿಶ್ವಸಂಸ್ಥೆಯು ವಿಶ್ವದ ಎಲ್ಲಾ ನದಿಗಳ ನೀರಿನ ಹಂಚಿಕೆಯ ವಿಷಯದಲ್ಲಿ ತೆಗೆದುಕೊಂಡು ಸಹಜ ಸ್ವಾಭಾವಿಕ ತೀರ್ಮಾನ…..
ಕಾವೇರಿ ನದಿಗೂ ಕೂಡ ಇದು ಅನ್ವಯಿಸುತ್ತದೆ. ಇದರ ಆಧಾರದ ಮೇಲೆ ನ್ಯಾಯಾಲಯವೇ ಆಗಲಿ, ಆಡಳಿತವೇ ಆಗಲಿ, ನೀರಾವರಿ ತಜ್ಞರೇ ಆಗಲಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಗೆ ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಮತ್ತು ಅದನ್ನು ಚಾಚೂ ತಪ್ಪದೆ ಅನುಸರಿಸಬೇಕು. ನೀರಿನ ಲಭ್ಯವಿರುವ ಪ್ರಮಾಣದ ಆಧಾರ ಸಹಜವಾಗಿಯೇ ಗಣನೆಗೆ ಬರುತ್ತದೆ. ಅದರ ಅಂಕಿ ಸಂಖ್ಯೆಗಳು ಸಹ ಅಧಿಕೃತವಾಗಿ ಲಭ್ಯವಿರುತ್ತದೆ…….
ಅತೀವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಇರಲಿ ಅದರ ಎರಡೂ ಪರಿಣಾಮಗಳನ್ನು ಅದಕ್ಕೆ ಸಂಬಂಧಿಸಿದವರು ಸಮನಾಗಿ ಅನುಭವಿಸಲೇ ಬೇಕು ಮತ್ತು ಒಂದಷ್ಟು ಸಾಧ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು…….
ಇಷ್ಟು ಸರಳ ವಿಷಯವನ್ನು ಸಂಕೀರ್ಣ ಮಾಡಿಕೊಂಡು ಅನೇಕ ವರ್ಷಗಳಿಂದ ಮತ್ತೆ ಮತ್ತೆ ಕೋರ್ಟ್ ಮೆಟ್ಟಿಲೇರುತ್ತಾ ಹೊಡೆದಾಡಿ ಬಡಿದಾಡುತ್ತಾ ಇರುವ ಸಮಾಜದ – ಸರ್ಕಾರಗಳ ಬಗ್ಗೆ ಏನನ್ನಬೇಕು…..
ಅಜ್ಞಾನವೇ, ಅಹಂಕಾರವೇ, ರಾಜಕೀಯವೇ ಅಥವಾ ವ್ಯವಸ್ಥೆ ಇರುವುದೇ ಹೀಗೆಯೇ……
ಪ್ರಕೃತಿ ಮನುಷ್ಯನ ನಿಯಂತ್ರಣದಲ್ಲಿ ಇಲ್ಲ. ಅದು ತನ್ನ ಪಾಡಿಗೆ ತಾನು ತನ್ನದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೆಲವೊಮ್ಮೆ ಜಾಸ್ತಿ ಮಳೆ, ಕೆಲವೊಮ್ಮೆ ಕಡಿಮೆ ಮಳೆ ಸುರಿಯಬಹುದು. ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವುದು ಮನುಷ್ಯನ ಕರ್ತವ್ಯ….
ನದಿಗಳು, ಕೆರೆ ಕಟ್ಟೆಗಳು, ಜಲಾಶಯಗಳು ಮಳೆ ನೀರಿನ ಸಂಗ್ರಹದ ಮೂಲಗಳು. ಆದರೆ ಮನುಷ್ಯನ ಜನಸಂಖ್ಯೆ ಹೆಚ್ಚಾದಂತೆ ಆರ್ಥಿಕ ದುರಾಸೆಗೆ ಬಿದ್ದು ಕೆರೆ ಕಟ್ಟೆಗಳನ್ನು ನಾಶ ಮಾಡುತ್ತಾ 30/40 – 40/60 ಸೈಟುಗಳಾಗಿ ಪರಿವರ್ತಿಸಿ ಜಲ ಸಂಗ್ರಹ ಮತ್ತು ಜಲಮೂಲಗಳನ್ನೇ ನಾಶಪಡಿಸಿ ಈಗ ನೀರಿಗಾಗಿ ಪರಿತಪಿಸಿದರೆ ಹೇಗೆ….
ಉದಾಹರಣೆಗೆ ಬೆಂಗಳೂರು ಕಾವೇರಿ ಜಲಾನಯನ ಪ್ರದೇಶದಿಂದ ಸುಮಾರು 100/130 ಕಿಲೋಮೀಟರ್ ದೂರವಿದೆ. ಇಲ್ಲಿನ ಜನಸಂಖ್ಯೆ ಸುಮಾರು 1.5 ಕೋಟಿ. ಇಲ್ಲಿ ಕೆಲವು ದಶಕಗಳ ಹಿಂದೆ ದಕ್ಷಿಣ ಪಿನಾಕಿನಿ, ವೃಷಭಾವತಿ ನದಿಗಳು ಸೇರಿ 3 ಸಾವಿರಕ್ಕೂ ಹೆಚ್ಚು ಕೆರೆಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದವು. ತಿಪ್ಪಗೊಂಡನಹಳ್ಳಿ ಮತ್ತು ಹೆಸರುಘಟ್ಟ ಕೆರೆಗಳಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಈಗ ಬಹುತೇಕ ಕೆರೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಿವೆ. ಇರುವ ಕೆಲವು ಕೆರೆಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಾವೇರಿ ಒಂದೇ ನದಿ ಎಲ್ಲಾ ಜನರ ಅವಶ್ಯಕತೆ ಪೂರೈಸಲು ಸಾಧ್ಯವಾಗುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನೀಡಬಹುದೇ ಹೊರತು ಮಳೆ ಸುರಿಸಲು ಆಗುವುದಿಲ್ಲ. ಮನುಷ್ಯರ ನಡುವೆ ಹೊಂದಾಣಿಕೆಯ ಹಂಚಿಕೆ ಮಾತ್ರ ಇದಕ್ಕೆ ಪರಿಹಾರ ಅಥವಾ ಹೊಡೆದಾಡುತ್ತಾ ಬದುಕುವುದು ಉಳಿದಿರುವ ದಾರಿ……
ಇದಕ್ಕೆ ಇರುವ ಕೆಲವು ಪರಿಹಾರಗಳು……
1) ಕೇಂದ್ರದ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಹೊಂದಾಣಿಕೆಯ ಸೂತ್ರ ರೂಪಿಸಿಕೊಳ್ಳುವುದು. ಇಂದಿನ ರಾಜಕೀಯ ವ್ಯವಸ್ಥೆ ಮತ್ತು ಜನರ ಮಾನಸಿಕತೆಯ ಮಟ್ಟದಲ್ಲಿ ಇದು ಬಹುಶಃ ಅಸಾಧ್ಯ.
2) ಕೋರ್ಟ್ ಮತ್ತು ಕಾವೇರಿ ನಿಯಂತ್ರಣ ಪ್ರಾಧಿಕಾರದ ಆದೇಶಗಳನ್ನು ಯಾವುದೇ ಪ್ರತಿರೋಧ ಒಡ್ಡದೆ ಪಾಲಿಸುವುದು. ಇದು ಜನರ ಆಕ್ರೋಶಕ್ಕೆ ಗುರಿಯಾಗುತ್ತದೆ. ಮುಖ್ಯವಾಗಿ ಬರಗಾಲದ ಸಮಯದಲ್ಲಿ ನೀರಿಗೆ ಹಾಹಾಕಾರವಾದಾಗ ಯಾವುದೇ ತೀರ್ಪುಗಳನ್ನು ಜನ ಒಪ್ಪುವುದಿಲ್ಲ.
3) ದಶಪಥ ರಸ್ತೆ, ಮೆಟ್ರೋ, ಸುರಂಗ ಮಾರ್ಗ, ಫ್ಲೈ ಓವರ್, ಟೌನ್ ಶಿಪ್ ಗಳು ಹೀಗೆ ಕೇವಲ ನಗರದ ಟ್ರಾಫಿಕ್ ನಿಯಂತ್ರಿಸಲು ಕೋಟಿಗಟ್ಟಲೆ ಹಣ ಮತ್ತು ಸಮಯ ವಿನಿಯೋಗಿಸುವುದನ್ನು ಕಡಿಮೆ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕಾಗಿ ಅತ್ಯಂತ ವೈಜ್ಞಾನಿಕ ಯೋಜನೆಗಳನ್ನು ರೂಪಿಸುವುದು. ಮಳೆಯ ಪ್ರಮಾಣ ಕಡಿಮೆಯಾದರೂ ಸಹ ಕೃಷಿ ಮತ್ತು ಕುಡಿಯುವ ನೀರಿಗೆ ವರ್ಷಪೂರ್ತಿ ತೊಂದರೆಯಾಗದಂತೆ ಸಂಗ್ರಹದ ವಿವಿಧ ವಿಧಾನಗಳನ್ನು ಕಂಡುಹಿಡಿಯುವುದು….
4) ನಗರ ಪ್ರದೇಶಗಳಲ್ಲಿ ನೀರಿನ ದುರುಪಯೋಗ ಸಾಕಷ್ಟು ಆಗುತ್ತದೆ. ಅದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು…..
5) ಹೀಗೆ ಸಲಹೆಗಳೆನೋ ಸಾಕಷ್ಟು ಇರುತ್ತದೆ. ಆದರೆ ಅದರ ಅನುಷ್ಠಾನವೇ ದೊಡ್ಡ ಸಮಸ್ಯೆ. ನಗರಗಳನ್ನು ಅಡ್ಡಾದಿಡ್ಡಿಯಾಗಿ ಬೆಳೆಯಲು ಬಿಟ್ಟು ಈಗ ಪರಿಹಾರದ ಬಗ್ಗೆ ಯೋಚಿಸಿದರೇ ಅದು ಮಿತಿ ಮೀರಿ ಹೋಗಿರುತ್ತದೆ……
ಅಂತಿಮವಾಗಿ ಬರುವುದನ್ನು ಅನುಭವಿಸಬೇಕಷ್ಟೇ ಎಂಬ ಸಿದ್ದಾಂತಕ್ಕೆ ಅಂಟಿಕೊಳ್ಳಬೇಕಾಗುತ್ತದೆ.
ಕಾರಣ ಎಲ್ಲವೂ ನಿಯಂತ್ರಣ ಮೀರುತ್ತಿದೆ, ಕಾವೇರಿ ವಿವಾದ ಸಹ………..
ಸ್ವಲ್ಪ ಹಿಂದೆ ತಮಿಳು ನಟ ಸಿಂಬು ಎನ್ನುವವರು, ಈಗ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಬಹಳ ದಿನಗಳ ನಂತರ, ಅಪರೂಪವೆಂಬಂತೆ ,
ಕಾವೇರಿ ನದಿ ವಿಷಯದ ಬಗ್ಗೆ ಎರಡು ರಾಜ್ಯಗಳ ಮಾತುಕತೆಯ ಬಗ್ಗೆ ಒಲವು ತೋರಿದ್ದಾರೆ.
ವಾಸ್ತವವಾಗಿ ಮತ್ತು ವಿಶಾಲ ದೃಷ್ಟಿಯಿಂದ ಇದನ್ನು ಗಮನಿಸಿದರೆ ಸ್ಪಷ್ಟವಾಗಿ ಅವರು ಬೆಂಬಲಿಸಿರುವುದು ” ಪ್ರೀತಿ, ವಿಶ್ವಾಸ, ಸಹಕಾರ, ಶಾಂತಿ, ಸೌಹಾರ್ದತೆ ಮತ್ತು ಅಹಿಂಸೆ.”
ಯಾವುದೇ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರೀತಿ, ವಿಶ್ವಾಸ, ಸಹಕಾರದಿಂದ ಬಗೆಹರಿಸಕೊಳ್ಳೋಣ ಎಂಬ ಆತ್ಮೀಯ ಸಂದೇಶ ಕೊಟ್ಟಿದ್ದಾರೆ.
ಈಗ ನಿಜವಾದ ಜವಾಬ್ದಾರಿಯುತ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗಿರುವುದು ಎಲ್ಲರ ಕರ್ತವ್ಯ.
ಜಾತಿ, ಧರ್ಮ, ಭಾಷೆ ವಿಷಯದಲ್ಲಿ ಜನರನ್ನು, ಅದರಲ್ಲೂ ರೈತರನ್ನು ಒಡೆಯುವುದು ಬಿಡಿ. ನಾವೆಲ್ಲರೂ ಒಂದೇ. ಸ್ವಾಭಾವಿಕ ಸಂಪನ್ಮೂಲ ನೀರಿನ ವಿಷಯದಲ್ಲಿ ಕನ್ನಡ ತಮಿಳುಗಳೆಂಬ ಬೇದ ಭಾವ ಬೇಡ ಎಂಬ ಅತ್ಯಮೂಲ್ಯ ಸಲಹೆಯನ್ನು ಇಂದಿನ ಸಂಧರ್ಭದಲ್ಲಿ ಧೈರ್ಯವಾಗಿ ನಾವು ಬೆಂಬಲಿಸೋಣ.
ಹಾಗೆಯೇ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಇರುವ ದ್ವೇಷವನ್ನು ಕಡಿಮೆ ಮಾಡಿಕೊಂಡು ಅತ್ಯಂತ ಪ್ರೀತಿಯ ವಾತಾವರಣದಲ್ಲಿ ಕಾವೇರಿ ವಿವಾದ ಬಗೆಹರಿಸಲು ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸೋಣ.
ಈ ಎರಡೂ ಭಾಷೆಯ ಅನೇಕ ಸಿನಿಮಾ ನಟರು, ರಾಜಕಾರಣಿಗಳಿಗೆ ವಿಷಯದ ಆಳ ಅಗಲಗಳ ಪರಿಚಯವೇ ಇರುವುದಿಲ್ಲ. ಕೇವಲ ತೋರಿಕೆಗಾಗಿ – ಭಾವನಾತ್ಮಕವಾಗಿ ಜನರಿಗೆ ನಾವೇನೋ ಮಹಾ ಉಪಕಾರ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳಲು ಮಾಧ್ಯಮಗಳ ಒತ್ತಡದಿಂದ ಕೇವಲ ಒಂದು ದಿನ ಪ್ರತಿಭಟನೆ ಮಾಡುತ್ತಾರೆ.
ಸರ್ಕಾರ ಮತ್ತು ರೈತರ ವಿವೇಚನೆ , ನ್ಯಾಯಾಲಯದ ಮಧ್ಯಪ್ರವೇಶ ಮತ್ತು ಪ್ರೀತಿ ವಿಶ್ವಾಸಗಳಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕೆ ಹೊರತು ಆಗಾಗ ಎರಡೂ ರಾಜ್ಯಗಳು ಬಂದ್ ಮಾಡುವುದರಿಂದ ರಾಜಕಾರಣಿಗಳಿಗೆ ಲಾಭ, ಸಾಮಾನ್ಯರಿಗೆ ನಷ್ಟ ಅಷ್ಟೇ ಆಗುವುದು. ಎಲ್ಲರೂ ಸ್ವಲ್ಪ ವಿವೇಚನೆಯಿಂದ ಯೋಚಿಸಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
