ದಿನಾಂಕ:12-08-2026 (ಹಾಯ್ ಉಡುಪಿ ನ್ಯೂಸ್)
ಶಿರ್ವ :ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ನಡೆದ ‘ಪ್ರಿನ್ಸ್ ಎಂಟರ್‌ಪ್ರೈಸಸ್’ ಮಾಲಕ ಡೇವಿಡ್ ಡಿಸೋಜಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಶಿರ್ವ ಠಾಣಾ ಪೊಲೀಸರು, ಕೃತ್ಯಕ್ಕೆ ಸಹಕರಿಸಿದ ಮತ್ತಿಬ್ಬರು ಆರೋಪಿಗಳನ್ನು ಆಗಸ್ಟ್ 12ರಂದು ಬಂಧಿಸಿದ್ದಾರೆ.
ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳ ಪೈಕಿ ಹಿಂಬದಿ ಸವಾರನು ಡೇವಿಡ್ ಡಿಸೋಜಾ ಅವರ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದನು. ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಈಗಾಗಲೇ ದಸ್ತಗಿರಿ ಮಾಡಿದ್ದರು.
ಹಣಕಾಸು ನೆರವು ನೀಡಿದ್ದ ಆರೋಪಿಗಳ ಬಂಧನ:
ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಹೆಚ್ಚಿನ ವಿಚಾರಣೆ ಹಾಗೂ ತನಿಖೆ ನಡೆಸಿದ ವೇಳೆ, ಕೊಲೆ ಕೃತ್ಯಕ್ಕೆ ಹಣ ವರ್ಗಾವಣೆ ಮಾಡಲು ಸಹಾಯ ಮಾಡುವ ಮೂಲಕ ಪ್ರಮುಖ ಆರೋಪಿಗಳಿಗೆ ಸಹಕರಿಸಿದ ಇಬ್ಬರು ವ್ಯಕ್ತಿಗಳ ಪಾತ್ರ ಬೆಳಕಿಗೆ ಬಂದಿದೆ.
ಬಂಧಿತರನ್ನು ಚಿರಾಗ್ ಪೂಜಾರಿ (26),
ಮೊಹಮ್ಮದ್ ಇರ್ಷಾದ್ (43 ವರ್ಷ) ಎಂದು ಗುರುತಿಸಲಾಗಿದೆ.
ಪ್ರಸ್ತುತ ಬಂಧಿತರಾಗಿರುವ ಇಬ್ಬರೂ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಪ್ರಕರಣದ ಹಿಂದಿರುವ ಸಂಪೂರ್ಣ ಜಾಲವನ್ನು ಭೇದಿಸಲು ಶಿರ್ವ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ. ಬಂಧಿತರಿಬ್ಬರೂ ಕಾಪು ತಾಲೂಕಿನ ತೆಂಕ ಗ್ರಾಮದ ಎರ್ಮಾಳ್ ತೆಂಕ ಪ್ರದೇಶದ ನಿವಾಸಿಗಳಾಗಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
