IMG-20251107-WA0003.jpg
Spread the love

ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ…….,

ಭವಿಷ್ಯದ ಕನಸುಗಳೇ ಮಸುಕಾಗುತ್ತಿರುವ ಭಾವನೆಗಳ ಸಂದರ್ಭದಲ್ಲಿ…….,

ಹೊಸ ಸವಾಲುಗಳು ನಮ್ಮ ಮುಂದಿವೆ……….

ಇದೀಗ ನಮ್ಮ ಬದುಕಿನ ಅಗ್ನಿ ಪರೀಕ್ಷೆ ಎದುರಾಗಿದೆ…..,

ಗೋಡೆ ಬರಹಗಳು ಈಗ ವಾಸ್ತವವಾಗಬೇಕಿದೆ……,

ಪುಸ್ತಕಗಳು ಈಗ ಬದುಕಿನ ಭಾಗವಾಗಬೇಕಿದೆ……,

ಮಹಾತ್ಮರ ಚಿಂತನೆಗಳು ಈಗ ನಮ್ಮ ಜೀವನದ ನಡವಳಿಕೆಗಳಾಗಬೇಕಿದೆ…..,

ಅನುಭವದ ಸಂದೇಶಗಳು ಅರ್ಥವಾಗಬೇಕಿದೆ…..,

ಉಪನ್ಯಾಸ, ಚರ್ಚೆ, ಸಂವಾದಗಳು ನಮ್ಮನ್ನು ಬಡಿದೆಬ್ಬಿಸಬೇಕಿದೆ…….,

ಹಿರಿಯರು ಗುರುಗಳು ಚಿಂತಕರ ಮಾತುಗಳು ದಾರಿ ದೀಪವಾಗಬೇಕಿದೆ……,

ನಮ್ಮೆಲ್ಲರ ಸಾಮರ್ಥ್ಯ ಈಗ ಹೊರ ಬರ ಬೇಕಾಗಿದೆ…..,

ನಮ್ಮೊಳಗೆ ಅಡಗಿರುವ ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಕೊಳ್ಳೋಣ…….,

ಮಾನಸಿಕ ಏಕಾಗ್ರತೆಯನ್ನು ಗಟ್ಟಿಗೊಳಿಸಿಕೊಳ್ಳೋಣ…..,

ಕಣ್ಣ ಮುಂದಿನ ಕಷ್ಟ, ನೋವು ಸಾವುಗಳಿಗೆ ವಿಚಲಿತರಾಗದಿರೋಣ……,

ಏಕೆಂದರೆ ಈಗ ಹೆಚ್ಚು ಕಡಿಮೆ ದೂರದ ಸುದ್ದಿಗಳು ಹತ್ತಿರವಾಗುತ್ತಿವೆ…….,

ಮಾಧ್ಯಮಗಳು ಇನ್ನಷ್ಟು ಭಯ ಸೃಷ್ಟಿಸುತ್ತಿವೆ………..,

ಮೌನ ಮತ್ತು ಏಕಾಂತ ಮಗದಷ್ಟು ಅಸಹನೀಯತೆ ಉಂಟುಮಾಡುತ್ತದೆ…….,

ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ…….,

ಎಲ್ಲವನ್ನೂ ಒಳಗೊಂಡ ಸಮಗ್ರ ಮತ್ತು ವಿಶಾಲ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ……..,

ಸ್ಥಿತಪ್ರಜ್ಞತೆ ಮೈಗೂಡಿಸಿಕೊಳ್ಳಬೇಕಿದೆ…..,

ದುರಂತ ಸುದ್ದಿಗಳನ್ನು ಕೇಳಿಯೂ ಒಳ್ಳೆಯ ಸುದ್ದಿಗಳ ಭರವಸೆಯನ್ನು ಕಲ್ಪಿಸಿಕೊಳ್ಳಬೇಕಿದೆ…….,

ಅನಿರೀಕ್ಷಿತ ಘಟನೆಗಳು ಸಹ ನಿರೀಕ್ಷಿತವೇ ಎಂದು ಭಾವಿಸಿ ಮುಂದಿನ ಜವಾಬ್ದಾರಿ ನಿರ್ವಹಿಸಬೇಕಿದೆ…….,

ಎಲ್ಲೆಲ್ಲೂ ದುಗುಡ ತುಂಬಿದ ಮಾತು ಚರ್ಚೆ ಮನಸ್ಸುಗಳೇ ತುಂಬಿರುವಾಗ ನಾವು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ…….,

ಬದುಕಿರುವುದೇ ಒಂದು ಸಾಧನೆ ಎಂದು ಭಾವಿಸಿ ನಮ್ಮನ್ನು ನಾವು ಉಳಿಸಿಕೊಳ್ಳುವ, ಇತರರನ್ನು ಉಳಿಸುವ, ಪ್ರೇರೇಪಿಸುವ, ಆತ್ಮವಿಶ್ವಾಸ ತುಂಬುವ,
ಮನದ ಕಲ್ಮಶಗಳನ್ನು ಅಳಿಸಿ ಹಾಕುವ, ಮಾನವೀಯ ಮೌಲ್ಯಗಳನ್ನು ಮೆಲುಕು ಹಾಕುವ, ಒಳ್ಳೆಯತನವನ್ನು ಬೆಳೆಸುವ, ಕೆಟ್ಟ ಪರಿಸ್ಥಿತಿಯನ್ನು ಒಳ್ಳೆಯ ಸಮಯವಾಗಿ ಪರಿವರ್ತಿಸುವ ಎಲ್ಲಾ ಪ್ರಯತ್ನ ಮಾಡೋಣ………

ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ…. ‌

ಸಂಗೀತವೆಂಬ ಮಾಂತ್ರಿಕತೆ,
ಸಾಹಿತ್ಯವೆಂಬ ಭಾವುಕತೆ,
ಧರ್ಮವೆಂಬ ಆಧ್ಯಾತ್ಮಿಕತೆ,
ಸೇವೆಯೆಂಬ ದೈವಿಕತೆ,
ವಿಜ್ಞಾನವೆಂಬ ವೈಚಾರಿಕತೆ,
ಕ್ರೀಡೆಯೆಂಬ ಸ್ಪರ್ಧಾತ್ಮಕತೆ,
ರಾಜಕೀಯವೆಂಬ ನಿಸ್ವಾರ್ಥತೆ,……

ಇವೆಲ್ಲವನ್ನೂ ಮೀರಿದ್ದು ಮಾನವೀಯತೆ…….

ಬದುಕಿನ ಸಾರ್ಥಕತೆಗೆ ಮುಕುಟಪ್ರಾಯವೇ ಜೀವಪರ ನಿಲುವಿನ ಮನುಷ್ಯತ್ವ.

ನೀವು ಯಾವ ಕ್ಷೇತ್ರದಲ್ಲಿ ಎಷ್ಟೇ ಎತ್ತರದ ಸಾಧನೆ ಮಾಡಿ, ಅದೆಲ್ಲಕ್ಕಿಂತ ಮುಖ್ಯ ನಿಮ್ಮ ಮಾನವೀಯತೆಯ ನಡವಳಿಕೆ.

ಕೆಲವರು ತಮ್ಮ ಕ್ಷೇತ್ರಗಳಲ್ಲಿ ಅದ್ಬುತ ಪ್ರತಿಭೆ ಹೊಂದಿದ್ದು ಸಾಧನೆಯ ಶಿಖರದ ತುಟ್ಟ ತುದಿಯನ್ನು ಏರಿರುತ್ತಾರೆ. ಆ ಕ್ಷೇತ್ರದ ದಂತಕಥೆಯಾಗಿಯೇ ಉಳಿದಿರುತ್ತಾರೆ. ಆದರೆ ಅವರ ನಡವಳಿಕೆ ಸಹಜ ಸ್ವಾಭಾವಿಕ ಮಾನವೀಯ ಮೌಲ್ಯಗಳನ್ನು ಹೊಂದಿಲ್ಲದ್ದಿದ್ದರೆ, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಅವರು ಎಷ್ಟೇ ಪ್ರತಿಭಾವಂತರಾದರು ವ್ಯರ್ಥ ಮತ್ತು ಅಪಾಯಕಾರಿ.

ಒಬ್ಬ ವಿಜ್ಞಾನಿಯೋ, ಸಿನಿಮಾ ನಟನೋ, ಉದ್ಯಮಿಯೋ, ಸಾಹಿತಿಯೋ ಅತ್ಯಂತ ಜನಪ್ರಿಯನಾಗಿದ್ದು ಆತ ತನ್ನ ವರ್ತನೆಯಲ್ಲಿ ಸಣ್ಣತನ ಪ್ರದರ್ಶಿಸಿದರೆ ಆತನನ್ನು ಆರಾಧಿಸುವ ಮತ್ತು ಆದರ್ಶ ಎಂದು ಪರಿಗಣಿಸುವ ಒಂದು ವರ್ಗ ಗಲಿಬಿಲಗೊಳಗಾಗುತ್ತದೆ ಮತ್ತು ಆ ತಪ್ಪನ್ನು ಉದಾಹರಣೆಯಾಗಿ ಉಪಯೋಗಿಸಿಕೊಂಡು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಪ್ರಾರಂಭಿಸುತ್ತಾರೆ.

ಒಳ್ಳೆಯ ಗುಣಗಳಿಗಿಂತ ಕೆಟ್ಟ ಗುಣಗಳೇ ಹೆಚ್ಚು ಆಕರ್ಷಣೀಯವಾಗಿರುತ್ತದೆ.
ಮಾತುಗಳು, ಬರಹಗಳು, ಭಾಷಣಗಳು, ಅಂಕಣಗಳು, ಲಲಿತಕಲೆಗಳು ಮುಂತಾದ ಪ್ರಕಾರಗಳಲ್ಲಿ ನಾವು ನಮಗಿರುವ ಅದ್ಬುತ ಜ್ಞಾನದ ಬಲದಿಂದ ಬಹಳಷ್ಟು ಸೃಷ್ಟಿಸಬಹುದು ಮತ್ತು ಎಲ್ಲರನ್ನೂ ಮೆಚ್ಚಿಸಬಹುದು. ಆದರೆ ಇವೆಲ್ಲಕ್ಕಿಂತ ಮಾನವೀಯವಾಗಿ ಬದುಕುವುದು ಮುಖ್ಯ. ನಿಮ್ಮ ಒಟ್ಟು ವ್ಯಕ್ತಿತ್ವದಲ್ಲಿ ಬದುಕುವ ರೀತಿಯೇ ಪ್ರಧಾನವಾಗಬೇಕು.
ಪ್ರತಿಭೆಗೆ ಎರಡನೆಯ ಸ್ಥಾನ.

ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಬದುಕಿಗಿಂತ ಆತನ ಜಪ್ರಿಯತೆಯೇ ಮುಖ್ಯವಾಗಿದೆ. ಅದು ಎಲ್ಲಾ ಮಾನವೀಯ ಮೌಲ್ಯಗಳನ್ನು ಅಪೋಶನ ತೆಗೆದುಕೊಳ್ಳುತ್ತಿದೆ.

ಪ್ರತಿಭೆಗಳನ್ನು ಸಾಮರ್ಥ್ಯವನ್ನು ಸಾಧನೆಯನ್ನು ಗೌರವಿಸೋಣ, ಪ್ರೋತ್ಸಾಹಿಸೋಣ, ಆದರೆ ಅವರ ಒಟ್ಟು ವ್ಯಕ್ತಿತ್ವದಲ್ಲಿ ಮಾನವೀಯ ಗುಣಗಳನ್ನು ಮಾತ್ರ ಪ್ರೀತಿಸೋಣ, ಅನುಸರಿಸೋಣ,
ಆತ ಎಂತಹ ದೊಡ್ಡ ವ್ಯಕ್ತಿಯೇ ಆಗಿರಲಿ,
ಸಣ್ಣ ವ್ಯಕ್ತಿಯೇ ಆಗಿರಲಿ……

ಬೆಳಗಿನ ಸೂರ್ಯ ಕಿರಣಗಳು ನಿಮ್ಮ ಮನಸ್ಸನ್ನು ಚೇತೋಹಾರಿಯಾಗಿ ಮಾಡಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!