ಸತ್ಯಮೇವ ಜಯತೆ……
ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಆಗಸ್ಟ್ ತಿಂಗಳ ಮೊದಲ ವಾರ ಪ್ರವೇಶಿಸುತ್ತಿರುವ ಸಮಯದಲ್ಲಿ…….
ಉಕ್ಕಿ ಹರಿಯುವ ದೇಶಪ್ರೇಮ………..
ಎಲ್ಲೆಲ್ಲೂ ರಾಷ್ಟ್ರಗೀತೆ – ರಾಷ್ಟ್ರಧ್ವಜ…….
ಜೈ ಭಾರತ್ ಘೋಷಣೆ……
ತುಂಬಾ ಸಂತೋಷ……
ಆದರೆ,
ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ………
ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು…..
ಇದೇ ಕಣ್ಣುಗಳೇ ಸಾವುಗಳನ್ನು ಸಂಭ್ರಮಿಸಿ ಕ್ರೂರತೆ ಮೆರೆಯುವುದು….
ಇದೇ ಕೈಗಳೇ ಭ್ರಷ್ಟ ಲಂಚದ ಹಣಕ್ಕೆ ಕೈಚಾಚುವುದು…..
ಇದೇ ಕಾಲುಗಳೇ ಹಣ, ಹೆಂಡ ಪಡೆದು ಮತದಾನ ಕೇಂದ್ರಕ್ಕೆ ಸಾಗುವುದು….
ಇದೇ ತೋಳುಗಳೇ ಅತ್ಯಾಚಾರಕ್ಕೆ ಬಳಸಲ್ಪಡುವುದು….
ಇದೇ ಮನಸ್ಸುಗಳೇ ಇಂದು ದೇಶದಲ್ಲಿ ಅರಾಜಕತೆ ಅಸಹಿಷ್ಣತೆ ಉಂಟು ಮಾಡುತ್ತಿರುವುದು………..
ಜನರನ್ನು ಟೀಕಿಸಿದ್ದಕ್ಕೆ ಬೇಸರವಾಗುತ್ತಿದೆಯೇ ?
ಬನ್ನಿ ನನ್ನೊಂದಿಗೆ…..
ಇಡೀ ದೇಶದ ಸರ್ಕಾರಿ ಕಚೇರಿಗಳಲ್ಲಿ, ಆಸ್ಪತ್ರೆಯಿಂದ ವಿಧಾನಸಭೆಗಳವರೆಗೆ,
ಜಮೀನು ನೋಂದಣಿ ಕಚೇರಿಯಿಂದ ಮರಣ ನೋಂದಣಿ ಕಚೇರಿಯವರೆಗೆ ಲಂಚವಿಲ್ಲದೆ ಕೆಲಸವಾಗುವುದು ಅಪರೂಪ.
ಒಡವೆ ಧರಿಸಿದ ಒಂಟಿ ಹೆಣ್ಣು ಇಲ್ಲಿ ಸುರಕ್ಷಿತ ಎಂದು ಹೇಳುವ ಒಂದೇ ಒಂದು ಜನನಿಬಿಡ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣವನ್ನು ತೋರಿಸಿ.
ಕಾನೂನು ತಜ್ಞರ ಸಲಹೆ ಪಡೆಯದೆ ಕೇವಲ ನಂಬಿಕೆಯ ಆಧಾರದ ಮೇಲೆ ಮನೆ ಅಥವಾ ಜಮೀನು ಖರೀದಿಸುವ ಧೈರ್ಯ ಎಷ್ಟು ಜನರಿಗಿದೆ.
ಒಂದು ಕಡೆ ಡ್ರಗ್ ಮಾಫಿಯಾ, ಇನ್ನೊಂದು ಕಡೆ ಲ್ಯಾಂಡ್ ಮಾಫಿಯಾ, ಕ್ಯಾಪಿಟೇಷನ್ ಮಾಫಿಯಾ, ಶುಗರ್ ಮಾಫಿಯಾ, ಗಣಿ ಮಾಫಿಯಾ, ವಾಟರ್ ಮಾಫಿಯಾ ಜೊತೆಗೆ ಜಾತಿ, ಧರ್ಮ ಮುಂತಾದ ವಿಭಜಕ ಶಕ್ತಿಗಳು ಇಡೀ ಆಡಳಿತ ಯಂತ್ರವನ್ನು ನಿಯಂತ್ರಿಸುತ್ತಿವೆ.
ಆದರೆ ದೇಶಭಕ್ತಿ ಮಾತ್ರ ಉಕ್ಕಿ ಹರಿಯುತ್ತದೆ.
ದೇಶಭಕ್ತಿ ಕೇವಲ ಘೋಷಣೆಯಲ್ಲ. ಅದು ನಡವಳಿಕೆ.
ದುರುಳ ನಾಯಕರಿಂದ ಮಕ್ಕಳಿಗೆ ಶಾಲೆಯಲ್ಲಿ ನೀತಿ ಪಾಠ ಹೇಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರೆ ಆ ಕಪಟತನದ ಮುಖವಾಡ ಮುಂದಿನ ದಿನಗಳಲ್ಲಿ ಮಕ್ಕಳಿಗೆ ತಿಳಿಯುವುದಿಲ್ಲವೇ ?
ನುಡಿದಂತೆ ನಡೆಯಿರಿ
ಇಲ್ಲವೇ
ನಡೆದಂತೆ ನುಡಿಯಿರಿ
ಅದೇ ದೇಶಪ್ರೇಮ.
ಸರಳತೆ ಸಭ್ಯತೆ ಪ್ರೀತಿ ವಿಶ್ವಾಸವಿಲ್ಲದ ಪೇಪರ್ ಟೈಗರ್ ಗಳೋ, ಟಿವಿ ಟೈಗರ್ ಗಳೋ ಆಗಿ ಒಣ ವೇದಾಂತ ಹೇಳುತ್ತಾ ಪ್ರಚಾರದ ಹಂಗಿಗೆ ಬಿದ್ದು ಬುದ್ದಿವಂತರೆಂಬ ಭ್ರಮೆಗೆ ಒಳಗಾಗಿ ವ್ಯಕ್ತಿತ್ವವೇ ಇಲ್ಲದ ಟೊಳ್ಳು ದೇಶಪ್ರೇಮ ಅಪಾಯಕಾರಿ.
ಮಾತಿನರಮನೆಯಲ್ಲಿ ಅರಳುವುದು ಮುಖವಾಡ.
ನರನಾಡಿಗಳಲ್ಲಿ ಸಮಾನತೆ ಸೌಹಾರ್ಧತೆ ಅಡಗಿರುವುದು ದೇಶಪ್ರೇಮ.
ನಮ್ಮ ನಡವಳಿಕೆ – ವರ್ತನೆ – ದಿನನಿತ್ಯದ ಒಳ್ಳೆಯ, ಮೌಲ್ಯಯುತ ಚಟುವಟಿಕೆಗಳೇ ನಮ್ಮ ದೇಶಪ್ರೇಮ.
ಕೇವಲ ಜೈ ಭಾರತ್ ಘೋಷಣೆಯಲ್ಲ……
ಒಳ್ಳೆಯವರಾಗಿ,
ಒಳ್ಳೆಯದನ್ನು ಪ್ರೋತ್ಸಾಹಿಸಿ,
ಕೆಟ್ಟದ್ದನ್ನು ತಿರಸ್ಕರಿಸಿ…….
ಧೈರ್ಯದಿಂದ ಮಾತನಾಡಿ..,…..
ಇದು ಪಾಕಿಸ್ತಾನ ಅಲ್ಲ ಭಾರತ,
ಇದು ಜಿನ್ನಾ ಕಟ್ಟಿದ ದೇಶವಲ್ಲ,
ಮಹಾತ್ಮ ಗಾಂಧಿ ಹುಟ್ಟಿದ ದೇಶ,
ಇದು ಹಿಟ್ಲರ್ ಆಳಿದ ಸರ್ವಾಧಿಕಾರಿ ದೇಶವಲ್ಲ,
ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ದೇಶ,
ಇದು ಹಿಂಸೆಯ ಸಿರಿಯಾ ಅಲ್ಲ,
ಇದು ಮಹಾವೀರರ ಅಹಿಂಸೆಯ ಇಂಡಿಯಾ,
ಇದು ಭಯೋತ್ಪಾದಕ ಆಫ್ಘಾನಿಸ್ತಾನವಲ್ಲ,
ಇದು ಶಾಂತಿಯುತ ಹಿಂದೂಸ್ತಾನ,
ಇದು ಬಿನ್ ಲಾಡೆನ್ ಕಾರ್ಯಸ್ಥಾನವಲ್ಲ,
ಇದು ಬುದ್ದರ ವಾಸಸ್ಥಾನ,
ಇದು ಉಸಿರು ಕಟ್ಟಿಸುವ ಉತ್ತರ ಕೊರಿಯಾ ಅಲ್ಲ,
ಇದು ಉಸಿರು ನೀಡುವ
ಜನ್ಮ ಭೂಮಿ,
ಇದು ನಿಮ್ಮ ಧ್ವನಿಯನ್ನು ಧಮನಿಸುವ ಚೀನಾ ಅಲ್ಲ,
ಇದು ನಿಮ್ಮ ಧ್ವನಿಗೆ ಧ್ವನಿ ಸೇರಿಸುವ ಇಂಡಿಯಾ……………
ಹೆದರಬೇಡಿ, ಭಯಪಡಬೇಡಿ,
ಸಂಕೋಚ ಪಡಬೇಡಿ…..
ಮಾತನಾಡಿ, ನಿಮಗೆ ಕಂಡ ಸತ್ಯವನ್ನು ದೃಢವಾಗಿ ಹೇಳಿ..
ಜನಪ್ರಿಯತೆಯೇ ಸತ್ಯವಲ್ಲ….
ಚುನಾವಣೆಯಲ್ಲಿ ಕೊಲೆಗಡುಕರು ಗೆದ್ದಿದ್ದಾರೆ, ಅತ್ಯಾಚಾರಿಗಳು ಗೆದ್ದಿದ್ದಾರೆ,
ಭ್ರಷ್ಟರು, ವಂಚಕರು, ದರೋಡೆಕೋರರು ಗೆದ್ದಿದ್ದಾರೆ. ಆದ್ದರಿಂದ ಸತ್ಯಕ್ಕೆ ಚುನಾವಣೆಯೇ ಮಾನದಂಡವಲ್ಲ. ಪ್ರಜಾಪ್ರಭುತ್ವ ಒಂದು ಉತ್ತಮ ಆಡಳಿತ ವ್ಯವಸ್ಥೆ. ಆದರೆ ಅದೇ ಸತ್ಯವಲ್ಲ.
ಸುಳ್ಳುಗಾರರು, ಮೋಸಗಾರರು, ಆತ್ಮವಂಚಕರು,
ದೇಶ ದ್ರೋಹಿಗಳು, ಮುಖವಾಡಗಳನ್ನು ಧರಿಸಿರುವವರು ಲಜ್ಜೆಗೆಟ್ಟು ಮಾತನಾಡುವಾಗ,
ತಿಳಿದಿರುವ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಂಕೋಚವೇಕೆ. ಕೆಟ್ಟವರ ಮಾತಿಗಿಂತ ಒಳ್ಳೆಯವರ ಮೌನ ಇನ್ನೂ ಅಪಾಯಕಾರಿ……..
ಮೀಸಲಾತಿಯೇ ಇರಲಿ, ರಾಮಮಂದಿರವೇ ಇರಲಿ,
ಮಹಿಳಾ ಸ್ವಾತಂತ್ರ್ಯವೇ ಇರಲಿ, ಜಾತ್ಯಾತೀತತೆಯೇ ಇರಲಿ,
ದೇಶ ಭಕ್ತಿಯೇ ಇರಲಿ,
ಧರ್ಮ ದೇವರುಗಳ ಚರ್ಚೆಗಳೇ ಇರಲಿ,
ಬ್ರಾಹ್ಮಣ್ಯದ ಅಸಮಾನತೆ ಇರಲಿ,
ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಿ.
ನೀವು ಹಿಂದುವಾಗಿರಿ, ಮುಸ್ಲಿಂ ಆಗಿರಲಿ, ಕ್ರಿಶ್ಚಿಯನ್ ಆಗಿರಲಿ,
ಸಿಖ್ ಬೌದ್ಧ ಜೈನ್ ಪಾರ್ಸಿ ಯಾರೇ ಆಗಿರಲಿ, ಯಾವ ಜಾತಿ, ಭಾಷೆ ಪ್ರದೇಶದವರೇ ಆಗಿರಲಿ, ಯಾವ ವೃತ್ತಿಯವರೇ ಆಗಿರಲಿ, ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಎಲ್ಲರಂತಯೇ ಸಮನಾಗಿ ಇದೆ.
ಆ, ಇದಕ್ಕೆ ಪ್ರತಿಕ್ರಿಯೆಯಾಗಿ ನಿಮಗೆ ನಿಂದನೆ, ನೋವು, ಹಿಂಸೆ, ಬೆದರಿಕೆ, ಹಲ್ಲೆ, ವ್ಯಂಗ್ಯ ಎಲ್ಲವೂ ಅನುಭವ ಆಗಬಹುದು. ಅದಕ್ಕೆ ಮಾನಸಿಕ ಸಿದ್ದತೆಯ ಅವಶ್ಯಕತೆ ಇದೆ. ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೆ ಇದು ನಿಮಗೆ ಸಮಸ್ಯೆಯೇ ಅಲ್ಲ.
ಆದರೆ ಒಂದು ಮಾತ್ರ ನೆನಪಿರಲಿ…..
ನೀವು ನಾಗರಿಕ ಸಮಾಜದಲ್ಲಿ ವಾಸಿಸುತ್ತಿರುವಿರಿ. ಇಲ್ಲಿ ಕಾನೂನು ಮತ್ತು ನೈತಿಕತೆ ಅಸ್ತಿತ್ವದಲ್ಲಿದೆ. ಸಂಯಮ, ಸಭ್ಯತೆ, ಪ್ರೀತಿ, ವಿಶ್ವಾಸ ಮೀರದಂತೆ ಸದಾ ಎಚ್ಚರಿಕೆ ವಹಿಸಬೇಕು. ಇನ್ನೊಬ್ಬರ ವೈಯಕ್ತಿಕ ನಿಂದನೆ, ಸುಳ್ಳು ಆರೋಪ, ಉದ್ದೇಶ ಪೂರ್ವಕವಾದ ಮಾನ ಹಾನಿ ಮಾಡಬಾರದು. ಅದು ಅಪರಾಧ ಸಹ.
ಮಾತಿನ ಮೇಲೆ ಹಿಡಿತವಿರಲಿ,
ಭಾಷೆಯ ಮೇಲೆ ನಿಯಂತ್ರಣವಿರಲಿ,
ಹೃದಯ ಒಳಗೆ ಕರುಣೆ ಇರಲಿ,
ಮನಸ್ಸಿನಲ್ಲಿ ಕ್ಷಮಾಗುಣವಿರಲಿ,
ಈ ನೆಲದ ಬಗ್ಗೆ ಅಭಿಮಾನವಿರಲಿ….
ಏಕೆಂದರೆ ಇದು ಭಾರತ,
ಸರ್ವಧರ್ಮ ಸಮನ್ವಯದ ನಾಡು,
ಭಗವದ್ಗೀತೆ, ಖುರಾನ್, ಬೈಬಲ್ ಗಳು ಪ್ರತಿನಿತ್ಯ ಪಠಿಸುವ ದೇಶ. ಸಂವಿಧಾನವೆಂಬ ಧರ್ಮವನ್ನು ಆನುರಿಸುವ ನಾಡು….
ಅಂಜದಿರಿ, ಅಳುಕದಿರಿ,
ಸತ್ಯಮೇವ ಜಯತೇ….
ಇದು ಇಂಡಿಯಾ,
ಇದೇ ಇಂಡಿಯಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
