IMG-20260731-WA0124.jpg
Spread the love

ದಿನಾಂಕ:31-07-2026(ಹಾಯ್ ಉಡುಪಿ ನ್ಯೂಸ್)

ಕುಂದಾಪುರ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಎಂಬವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ಹಾಗೂ ಇತರ ವ್ಯವಹಾರಗಳಲ್ಲಿನ ಮನಸ್ತಾಪವೇ ಕೃತ್ಯಕ್ಕೆ ಕಾರಣ ಎಂಬುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜು.30ರಂದು ರಾತ್ರಿ 11.45ರ ಸುಮಾರಿಗೆ ಡೆರಿಕ್ ಕ್ರಾಸ್ತಾ ಐವನ್ ಅವರಿಗೆ ಕರೆ ಮಾಡಿ, ಚಿಟ್ ವ್ಯವಹಾರಕ್ಕೆ ಸಂಬಂಧಿಸಿದ ಬಾಕಿ ಹಣದ ವಿಚಾರದಲ್ಲಿ ತಾನು ಮಧ್ಯಸ್ಥಿಕೆ ವಹಿಸಿ ಹಣ ಪಡೆಸಿಕೊಡುವುದಾಗಿ ಹೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ.
ಬಳಿಕ ಜು.31ರಂದು ರಾತ್ರಿ 1.30ರ ಸುಮಾರಿಗೆ ಡೆರಿಕ್ ತನ್ನ ಲೊಕೇಶನ್ ಅನ್ನು ಐವನ್ ಅವರ ಮೊಬೈಲ್‌ಗೆ ಕಳುಹಿಸಿದ್ದಾನೆ. ಅದರಂತೆ ಐವನ್ ಕುಂದಾಪುರದ ಚರ್ಚ್ ರಸ್ತೆಯ ಹೋಲಿ ರೋಸರಿ ಚರ್ಚ್ ಎದುರು ಕಾರಿನಲ್ಲಿ ಕಾಯುತ್ತಿದ್ದರು.

ಸುಮಾರು 3.15ರ ವೇಳೆಗೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಸ್ಥಳಕ್ಕೆ ಬಂದ ಡೆರಿಕ್, ಕಾರಿನಿಂದ ಇಳಿದ ಐವನ್ ಮೇಲೆ ತನ್ನೊಂದಿಗೆ ತಂದಿದ್ದ ಗನ್‌ನಿಂದ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ, ಬಳಿಕ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಗುಂಡೇಟಿನಿಂದ ತೀವ್ರ ಗಾಯಗೊಂಡ ಐವನ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 67/2026 ದಾಖಲಿಸಿಕೊಂಡು, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಡೆರಿಕ್ ಕ್ರಾಸ್ತಾ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿದಿದೆ.

error: No Copying!