ಉಡುಪಿ: ದಿನಾಂಕ:31-07-2026 (ಹಾಯ್ ಉಡುಪಿ ನ್ಯೂಸ್) ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ನೀಡಿರುವ ಪ್ರಚೋದನಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ದ್ವೇಷಪೂರಿತ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಸಿಟಿ ಬಸ್ ನಿಲ್ದಾಣದ ಜಟ್ಕಾ ಸ್ಟ್ಯಾಂಡ್ ಬಳಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಕೋ-ಆರ್ಡಿನೇಟರ್ ಶ್ರೀ ಸುಧೀರ್ ಕುಮಾರ್ ಮುರಳಿ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿತ್ ರಾಜ್ ಮೌರ್ಯ ಭಾಗವಹಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಶಾಸಕ ಯಶಪಾಲ್ ಸುವರ್ಣ ರಿಗೆ ಧಿಕ್ಕಾರ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರು ಹತ್ತು ತಲೆಯ ರಾವಣ ರೂಪದ ಯಶಪಾಲ ಸುವರ್ಣ ರ ವಿಶಿಷ್ಟ ಪ್ರತಿಕೃತಿ ಮಾಡಿ ಇಟ್ಟು ಅದಕ್ಕೆ ಮೊಟ್ಟೆ ಬಿಸಾಡಿ ಕೊನೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಮ್ಮ ಹೋರಾಟ ನಿರಂತರವಾಗಿರುತ್ತದೆ. ದ್ವೇಷದ ರಾಜಕಾರಣಕ್ಕೆ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.









