IMG_20260713_235437.jpg
Spread the love

ರಾಮನಗರ: ದಿನಾಂಕ:12-07-2026(ಹಾಯ್ ಉಡುಪಿ ನ್ಯೂಸ್) ಬಿಡದಿ ಸಮೀಪದ ಮಂಡಲಹಳ್ಳಿಯಲ್ಲಿ ಸ್ಥಳೀಯ ರೈತರ ತೀವ್ರ ಆಕ್ಷೇಪಣೆಗಳ ನಡುವೆಯೂ, ಅವರ ಭೂಮಿಯ ಹಕ್ಕುಗಳನ್ನು ಕಡೆಗಣಿಸಿ ನಡೆಸಲಾಗುತ್ತಿರುವ ಬಲವಂತದ ಜಂಟಿ ಭೂಮಾಪನ (JMC Survey) ಪ್ರಕ್ರಿಯೆ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಹೇಳಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಅನ್ನದಾತನ ಫಲವತ್ತಾದ ಕೃಷಿ ಭೂಮಿಯನ್ನು ಅವರ ಒಪ್ಪಿಗೆಯಿಲ್ಲದೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು, ಕಾಂಗ್ರೆಸ್ ಸರ್ಕಾರದಿಂದ ಜನಾಭಿಪ್ರಾಯದ ಅವಗಣನೆ ಮತ್ತು ಅದರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಈ ಹಿಂದೆ ನಮ್ಮ ಪಕ್ಷದ ನಿಯೋಗ, ಆ ಭಾಗದ ಬಾಧಿತ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಪಷ್ಟಪಡಿಸಿದಂತೆ, ರೈತರ ಜೀವನೋಪಾಯಕ್ಕೆ ಕುತ್ತು ತರುವ ಹಾಗೂ ಅವರ ಹಿತಾಸಕ್ತಿಯನ್ನು ಬಲಿಗೊಡುವ ಬಲವಂತದ ಯೋಜನೆಗಳಿಗೆ ನಮ್ಮ ಒಪ್ಪಿಗೆಯಿಲ್ಲ. ನಮ್ಮ ಅನ್ನದಾತರ ರೈತರ ಮೇಲೆ ದಬ್ಬಾಳಿಕೆ ಎಂದಿಗೂ ಒಪ್ಪಲಾಗದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭೂಮಿಯ ನಿಜವಾದ ಒಡೆಯರಾಗಿರುವ ರೈತರ ಧ್ವನಿಯನ್ನು ಆಲಿಸುವುದು ಮತ್ತು ಅವರ ಆತಂಕಗಳನ್ನು ಪರಿಹರಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಆಡಳಿತಾತ್ಮಕ ಬಲಪ್ರಯೋಗದ ಮೂಲಕ ಮುನ್ನಡೆಯಲು ಪ್ರಯತ್ನಿಸುವುದು ತಪ್ಪು ಗ್ರಹಿಕೆಗಳಿಗೆ ಹಾಗೂ ಇಂತಹ ಆಕ್ರೋಶದ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರ ತಕ್ಷಣವೇ ಮಂಡಲಹಳ್ಳಿ ಸೇರಿದಂತೆ ಇಡೀ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು, ಹಾಗೆಯೇ ವಶಕ್ಕೆ ಪಡೆದಿರುವ ಪ್ರತಿಭಟಿಸುತ್ತಿದ್ದ ನೊಂದ ರೈತರನ್ನು ಬಿಡುಗಡೆ ಮಾಡಬೇಕು, ಅನ್ನದಾತರೊಂದಿಗೆ ತಕ್ಷಣವೇ ಮುಕ್ತ ಮಾತುಕತೆ ನಡೆಸಬೇಕು, ರೈತರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

error: No Copying!