ಬೆಂಗಳೂರು: ದಿನಾಂಕ: 12-07-2026 (ಹಾಯ್ ಉಡುಪಿ ನ್ಯೂಸ್)
ಪೊಲೀಸ್ ಇಲಾಖೆಯ ಬಲವರ್ಧನೆಯ ಪ್ರಕ್ರಿಯೆಯಲ್ಲಿ ಮಹತ್ವದ ಹೆಜ್ಜೆ. ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರು ಜಿಲ್ಲಾ ಪೊಲೀಸ್ ಘಟಕಗಳಿಗೆ ಹಂಚಿಕೆ ಮಾಡಲಾಗಿರುವ 75 ಬೊಲೆರೋ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
₹28 ಕೋಟಿ ವೆಚ್ಚದಲ್ಲಿ ಖರೀದಿಸಲಾದ 32 ಅತ್ಯಾಧುನಿಕ ಮೊಬೈಲ್ ಫೊರೆನ್ಸಿಕ್ ವ್ಯಾನ್‌ಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು –
ಈ ಮೊಬೈಲ್ ಫೊರೆನ್ಸಿಕ್ ವ್ಯಾನ್‌ಗಳು ಅತ್ಯಾಧುನಿಕ ವೈಜ್ಞಾನಿಕ ಪರೀಕ್ಷೆ ಸೌಲಭ್ಯ, ಡಿಜಿಟಲ್ ಟ್ರಯಾಜ್ ಮತ್ತು ಅಪರಾಧ ಸ್ಥಳ ಪರಿಶೀಲನಾ ಸೌಲಭ್ಯಗಳನ್ನು ಹೊಂದಿದ್ದು, ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 201 ತರಬೇತಿ ಪಡೆದ Scene of Crime Officers ಜೊತೆಗೆ, ಈ ವಾಹನಗಳು ಜಿಲ್ಲಾ ಮಟ್ಟದಲ್ಲಿ ವೈಜ್ಞಾನಿಕ ತನಿಖೆಗೆ ದೊಡ್ಡ ಬಲ ನೀಡಲಿವೆ.
ಅಪರಾಧ ಸ್ಥಳದಲ್ಲೇ ಸಾಕ್ಷ್ಯಗಳನ್ನು ಗುರುತಿಸುವುದು, ದಾಖಲಿಸುವುದು, ಸಂಗ್ರಹಿಸುವುದು, ಸಂರಕ್ಷಿಸುವುದು ಮತ್ತು ಸುರಕ್ಷಿತವಾಗಿ ಸಾಗಿಸುವ ಪ್ರಕ್ರಿಯೆಗಳು ಈಗ ಇನ್ನಷ್ಟು ವೇಗವಾಗಿ, ನಿಖರವಾಗಿ ಮತ್ತು ವೈಜ್ಞಾನಿಕವಾಗಿ ಸಾಧ್ಯವಾಗಲಿದೆ.
ಈ ಮೊಬೈಲ್ ಫೊರೆನ್ಸಿಕ್ ವ್ಯಾನ್ ಸೌಲಭ್ಯದಿಂದಾಗಿ ತನಿಖೆಯ ಗುಣಮಟ್ಟ ಹೆಚ್ಚಲಿದೆ,
ಸಾಕ್ಷ್ಯ ಸಂಗ್ರಹಕ್ಕೆ ಬಲ ಒದಗಲಿದೆ,
ನ್ಯಾಯಾಲಯದಲ್ಲಿ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಲು ಸಾಧ್ಯವಾಗಲಿದೆ.
ಕರ್ನಾಟಕ ಪೊಲೀಸ್ ಇಲಾಖೆಯು ನ್ಯಾಯದಾನದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ದೇಶದಲ್ಲೇ ಉತ್ತಮ ಹೆಸರನ್ನು ಪಡೆದಿದೆ, ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ 2025ನೇ ಸಾಲಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ನಂ1 ಸ್ಥಾನದಲ್ಲಿದೆ.
ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ವೃದ್ಧಿಗೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ರಕ್ಷಣೆಗೆ ಪೊಲೀಸ್ ಇಲಾಖೆಯ ಬಲವರ್ಧನೆ ಕ್ರಮ ವಹಿಸಲಾಗುತ್ತಿದೆ.
ಈಗಾಗಲೇ 3395 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ.
ಹಾಗೂ ಇಂದು ಲೋಕಾರ್ಪಣೆ ಮಾಡಲಾದ ಹೊಸ ವಾಹನಗಳು ಇಲಾಖೆಯ ಕಾರ್ಯಕ್ಷಮತೆಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.



