ಕೋಟ: ದಿನಾಂಕ: 11-07-2026 (ಹಾಯ್ ಉಡುಪಿ ನ್ಯೂಸ್) ಅನಿಮಲ್ ರೆಸ್ಕ್ಯೂ ಸೆಂಟರ್ ಹೆಸರಲ್ಲಿ ಪ್ರಾಣಿ ಗಳನ್ನು ಅಮಾನವೀಯ ವಾಗಿ ಹಿಂಸಿಸುತ್ತಿದ್ದ ಸಾಲಿಗ್ರಾಮ ನಿವಾಸಿ ಸುಧೀಂದ್ರ ಐತಾಳ್ ಎಂಬವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲಿಗ್ರಾಮ ನಿವಾಸಿ ಆರೋಪಿ ಸುಧೀಂದ್ರ ಐತಾಳ್ ಎಂಬವರು ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಹಿಂಭಾಗದಲ್ಲಿರುವ “Animal Rescue Centre” ಎಂಬಲ್ಲಿ ಪ್ರಾಣಿಗಳನ್ನು ಅತ್ಯಂತ ಕಳಪೆ, ಅಮಾನವೀಯ ಮತ್ತು ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸಿರುವ ಬಗ್ಗೆ ದೂರುಗಳು ಬಂದ ಕಾರಣ ದಿನಾಂಕ 07.07.2026 ರಂದು PETA India ಸಂಸ್ಥೆ ಯ ಮಹೇಶ ಉಡುಪ (31) ಇವರು ಬಂದು ಪರಿಶೀಲಿಸಿದಾಗ ಮೇಲಿನ ಸ್ಥಳದಲ್ಲಿ ಆರೋಪಿ ಸುಧೀಂದ್ರ ಐತಾಳ್ ನು ಸಾಕು ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸದೇ ಅದರಿಂದ ಮಾನವ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸದೇ ಸಾಕು ಪ್ರಾಣಿಗಳಾದ ನಾಯಿಗಳು ಮತ್ತು ಬೆಕ್ಕುಗಳನ್ನು ಅತ್ಯಂತ ಚಿಕ್ಕ ಹಗ್ಗಗಳಿಂದ ಕಟ್ಟಿಹಾಕಿ ಸಾಕಿರುತ್ತಾನೆ ಅಲ್ಲದೇ ಸ್ಥಳದಲ್ಲಿ ಒಂದು ದನದ ಕರುವಿನ ಮೃತದೇಹ ಪತ್ತೆಯಾಗಿದ್ದು ಈ ದನದ ಕರುವು ಸುಮಾರು ದಿನಗಳ ಹಿಂದೆ ಮೃತಪಟ್ಟಿರುವಂತೆ ಕಂಡುಬಂದಿದ್ದು ಅದನ್ನು ತೆರವುಗೊಳಿಸದೆ ಕೊಳೆಯಲು ಬಿಟ್ಟಿರುವುದು ಕಂಡುಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ:291 BNS 11(1),(A)11(1)(E),11(1)(F), 11(1)(J), 11(1) )(H) 11(1)(K), 11(1)(H) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರಂತೆ ಪ್ರಕರಣ ದಾಖಲಾಗಿದೆ.
