images-1.jpeg
Spread the love

ಉಡುಪಿ: ದಿನಾಂಕ:09-07-2026 (ಹಾಯ್ ಉಡುಪಿ ನ್ಯೂಸ್) ನಗರದ ಉದ್ಯಮಿಯೋರ್ವರನ್ನು ಮಹಿಳೆಯರು ಈರ್ವರು ಅವರೊಂದಿಗೆ ಇರುವ ವೀಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಸುಮಾರು 52ಲಕ್ಷ ರೂಪಾಯಿ ಹಣ ಪಡೆದು ಕೊಂಡು ವಂಚನೆ ನಡೆಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಬನ್ನಂಜೆ ನಿವಾಸಿ ತೇಜೇಶ್ವರ್‌ ರಾವ್‌ ಎಂಬವರು 2018 ರಿಂದ 2022 ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್ ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿಯನ್ನು ಹೊಂದಿದ್ದು, ಈ ಸಮಯದಲ್ಲಿ ತೇಜೇಶ್ವರ್ ರಾವ್ ರಿಗೆ ಆರೋಪಿತರಾದ 1. ಝೀನತ್ ಮತ್ತು 2. ಗೀತಾರಾವ್ ಎಂಬವರು ಪರಿಚಯವಾಗಿದ್ದರು.

ಮೋದಿಕೇರ್ ಕಛೇರಿಯಲ್ಲಿ 1ನೇ ಆರೋಪಿತೆ ಝೀನತ್ ಳು ತೇಜೇಶ್ವರ್ ರಾವ್ ರೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ಒಂದು ವಿಡಿಯೋ ಮಾಡಿಕೊಂಡು ಅಕ್ರಮ ಲಾಭವನ್ನು ಗಳಿಸುವ ಉದ್ದೇಶದಿಂದ ಬ್ಲ್ಯಾಕ್ ಮೇಲ್ ಮಾಡಿ ತೇಜೇಶ್ವರ ರಾವ್ ರಿಂದ ಹಂತ ಹಂತವಾಗಿ ರೂಪಾಯಿ 36,84,000/- ವನ್ನು ಮೋಸದಿಂದ ತೆಗೆದುಕೊಂಡಿರುತ್ತಾರೆ.

2ನೇ ಆರೋಪಿತೆ ಗೀತಾ ರಾವ್ ಳು ತೇಜೇಶ್ವರ್ ರಾವ್ ರನ್ನು ಬ್ಲ್ಯಾಕ್ ಮೇಲ್ ಮಾಡಿ ಹಂತ ಹಂತವಾಗಿ ರೂಪಾಯಿ 15,00,000/- ಹಣವನ್ನು ಮೋಸದಿಂದ ತೆಗೆದುಕೊಂಡಿದ್ದಲ್ಲದೆ, ಚಿನ್ನಾಭರಣಗಳನ್ನು ಸಹ ತೆಗೆದುಕೊಂಡು, ಕೆಲವು ಬ್ಲ್ಯಾಂಕ್‌ ಚೆಕ್‌ ಸಹ ತೆಗೆದುಕೊಂಡು ವಂಚನೆ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತೇಜೇಶ್ವರ್ ರಾವ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 308(6), 318(4) ಜೊತೆಗೆ 3(5) BNSS ರಂತೆ ಪ್ರಕರಣ ದಾಖಲಾಗಿದೆ.

error: No Copying!