ಅಪ್ರಾಮಾಣಿಕ ಹೋರಾಟಗಾರರು – ಕುತಂತ್ರಿ ಮತ್ತು ದುಷ್ಟ ಮಾಧ್ಯಮಗಳು – ಮೌನ ರೋದನದಲ್ಲಿ ಗಾಂಧಾರಿ ದೃಷ್ಟಿಯ ಹಿಡನ್ ಕ್ಯಾಮರಾಗಳು – ಗೊಂದಲದಲ್ಲಿ ಜನಸಾಮಾನ್ಯರು…..
ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳು ಶಿಥಿಲವಾಗುತ್ತಿರುವಾಗ – ಎಲ್ಲವೂ ವಾಣಿಜ್ಯೀಕರಣವಾಗುತ್ತಿರುವ ಸನ್ನಿವೇಶದಲ್ಲಿ ಸಾಮಾಜಿಕ ಹೋರಾಟಗಳು ಸಹ ಅದರ ಸುಳಿಯೊಳಗೆ ಸಿಲುಕುತ್ತಿವೆ. ಇಲ್ಲಿ ಯಾವುದನ್ನೂ ಪ್ರತ್ಯೇಕಿಸಿ ನೋಡಲು ಸಾಧ್ಯವಾಗುತ್ತಿಲ್ಲ.
ಕಾರ್ಪೊರೇಟ್ ಜಗತ್ತು ನಮ್ಮ ಬದುಕುಗಳನ್ನು ನಿಯಂತ್ರಿಸಲು ಪ್ರಾರಂಭವಾದ ಮೇಲೆ ನಾವು ಅದರೊಳಗಿನ ಬಂಧಿಗಳಾಗಿದ್ದೇವೆ.
ಆರೋಗ್ಯ ಶಿಕ್ಷಣ ಕೊನೆಗೆ ಆಧ್ಯಾತ್ಮವೂ ಒಂದು ವ್ಯಾಪಾರದ ಪರಿಧಿಯೊಳಗೆ ಇರುವಾಗ ಸಮಾಜ ಸೇವೇಯೂ ಇದರಿಂದ ಮುಕ್ತವಾಗಿ ಉಳಿಯಲಿಲ್ಲ.
ಒಳ್ಳೆಯವರು ಯಾರು, ಕೆಟ್ಟವರು ಯಾರು, ಹೊಟ್ಟೆ ಪಾಡಿನ ಹೋರಾಟಗಾರರು ಯಾರು, ರೋಲ್ ಕಾಲ್ ಹೋರಾಟಗಾರರು ಯಾರು, ಪ್ರಾಮಾಣಿಕ ಚಳುವಳಿಯ ನೇತಾರರು ಯಾರು, ಅತ್ಯಂತ ಪ್ರಭಾವಿ ಮತ್ತು ನಿಸ್ವಾರ್ಥ ನೈಜ ಹೋರಾಟಗಾರರು ಯಾರು, ಬ್ಲಾಕ್ ಮೇಲ್ ಪ್ರತಿಭಟನಾಕಾರರು ಯಾರು, ರಾಜಕೀಯ ಸ್ವಾರ್ಥದ ನಾಯಕರು ಯಾರು, ಉಡಾಫೆ ಮತ್ತು ಟೈಂ ಪಾಸ್ ಲೀಡರುಗಳು ಯಾರು, ರಾಜಕೀಯ ಮಹತ್ವಾಕಾಂಕ್ಷೆಯ ವ್ಯಕ್ತಿಗಳು ಯಾರು ಎಂಬುದೇ ಒಂದು ಗೋಜಲು ವಿಷಯವಾಗಿದೆ.
ಹೋರಾಟಗಾರರು, ಚಳುವಳಿಗಾರರು, ಪ್ರತಿಭಟನಾಕಾರರು, ಬಂಡಾಯಗಾರರು, ಸಾಮಾಜಿಕ ಕಾರ್ಯಕರ್ತರು ಸಮಾಜ ಸೇವಕರು ಮುಂತಾದವರು ಹೆಸರುಗಳಿಂದ ಕರೆಯಲಾಗುವವರದು ಒಂದು ವೃತ್ತಿಯಲ್ಲ, ಒಂದು ಹುದ್ದೆಯಲ್ಲ, ಒಂದು ಅರ್ಹತೆಯಲ್ಲ. ಅದೊಂದು ಮಾನವೀಯ ಸ್ಪಂದನೆ, ಕಳಕಳಿಯ ಪ್ರತಿಕ್ರಿಯೆ, ಒಳ ಮನಸ್ಸಿನ ತುಡಿತದ ಅಭಿವ್ಯಕ್ತಿ, ಒಂದು ಜವಾಬ್ದಾರಿ ಮತ್ತು ಕರ್ತವ್ಯ ಎಂಬ ಭಾವ.
ಇದನ್ನು ವೈಯಕ್ತಿಕ ನೆಲೆಯಲ್ಲಿ ಅಥವಾ ಸಂಘಟನಾತ್ಮಕವಾಗಿ ಮಾಡಲಾಗುತ್ತದೆ. ಇದನ್ನು ಮಾಡುವವರು ಸಹ ಸಮಾಜದ ಸಹಜ ಪ್ರಜೆಗಳು. ಅವರಿಗೂ ಆಸೆ ಆಕಾಂಕ್ಷೆಗಳು, ವೈಯಕ್ತಿಕ ಮತ್ತು ಸಂಸಾರಿಕ ಬದುಕುಗಳು ಸಹ ಇರುತ್ತದೆ. ಅದರ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇರುತ್ತದೆ.
ಇದನ್ನು ನಿಭಾಯಿಸುವುದು ಒಂದು ಸವಾಲಿನ ಕೆಲಸ. ಸಾರ್ವಜನಿಕರ ಕಣ್ಣು ಸದಾ ಇವರ ಚಲನವಲನದ ಮೇಲೆ ಇದ್ದೇ ಇರುತ್ತದೆ. ಕಾಲು ಎಳೆಯುವವರೂ ಸಾಕಷ್ಟು ಜನರಿರುತ್ತಾರೆ. ತೊಂದರೆ ಕೊಡುವವರು ಇರುತ್ತಾರೆ.
ಬೇರೆ ಯಾವುದೋ ಉದ್ಯೋಗ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಈ ರೀತಿಯ ಹೋರಾಟ ಮಾಡುವವರದು ಒಂದು ವರ್ಗ. ಇವರುಗಳು ದೊಡ್ಡ ಮಟ್ಟದ ಸಂಘಟನೆ ಮಾಡುವುದು ಕಷ್ಟ. ಏಕೆಂದರೆ ಇದಕ್ಕಾಗಿ ಸಾಕಷ್ಟು ಸಮಯ ಬೇಕಾಗುತ್ತದೆ. ಹಣವೂ ಬೇಕಾಗುತ್ತದೆ. ಜೀವನದ ಸಂಪೂರ್ಣ ಸಮಯವನ್ನು ಇದಕ್ಕಾಗಿ ಮೀಸಲಿಡುವವರದು ಇನ್ನೊಂದು ವರ್ಗ. ಇವರದು ಕತ್ತಿಯ ಮೇಲಿನ ನಡಿಗೆ. ರಾಜಕೀಯ ಪಕ್ಷಗಳು ಅಥವಾ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ ಸಾಕಷ್ಟು ಹಣ ಇರುತ್ತದೆ. ಕಾರ್ಮಿಕ ಹೋರಾಟಗಳಲ್ಲಿ ಕಾರ್ಮಿಕರಿಂದ ಹಣ ಸಂಗ್ರಹಿಸಲಾಗುತ್ತದೆ. ಇನ್ನೂ ಕೆಲವು ಸಾಮಾಜಿಕ ಶೈಕ್ಷಣಿಕ ಪರಿಸರ ಹೋರಾಟಗಳಲ್ಲಿ ವಿದೇಶಗಳು ಸೇರಿ ಬೇರೆ ಬೇರೆ ಮೂಲಗಳಿಂದ ಹಣ ಜಮಾವಣೆಯಾಗುತ್ತದೆ. ಮತ್ತೆ ಕೆಲವು ಸಂಘಟನೆಗಳಿಗೆ ಉದ್ಯಮಿಗಳು ರಾಜಕೀಯ ನೇತಾರರು ಪರೋಕ್ಷವಾಗಿ ಹಣ ಸಹಾಯ ಮಾಡುತ್ತಾರೆ. ಜಾತಿ ಸಂಘಟನೆಗಳಿಗೆ ಅವರದೇ ಜಾತಿಯ ಶ್ರೀಮಂತರು ಹಣ ನೀಡುತ್ತಾರೆ.
ಆದರೆ ರೈತಪರ, ಕನ್ನಡಪರ, ಶೋಷಿತರ ಪರ, ಮಹಿಳೆಯರ ಪರ, ಮೌಡ್ಯಗಳ ವಿರುದ್ಧ ಮುಂತಾದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಅನೇಕ ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಳಿಗೆ ಹಣಕಾಸು ವ್ಯವಸ್ಥೆ ಒಂದು ದೊಡ್ಡ ಸವಾಲು. ಹೋರಾಟಗಾರರ ನಿಜವಾದ ನೈತಿಕತೆ ಇಲ್ಲಿ ಅಗ್ನಿಪರೀಕ್ಷೆಗೆ ಒಳಗಾಗುತ್ತದೆ. ಪ್ರಾರಂಭದ ಉತ್ಸಾಹದ ದಿನಗಳಲ್ಲಿ ಹೇಗೋ ಒಂದಷ್ಟು ಪ್ರಾಮಾಣಿಕತೆ ಸಾಧ್ಯವಾಗಬಹುದು. ಆದರೆ ದೀರ್ಘಕಾಲದಲ್ಲಿ ಬದುಕು ಕಲಿಸುವ ಪಾಠ, ಕೌಟುಂಬಿಕ ಜವಾಬ್ದಾರಿ, ಸಹವರ್ತಿಗಳ ನಿರೀಕ್ಷೆ, ರಾಜಕೀಯ ನಾಯಕರ ಪ್ರಲೋಭನೆ, ಸಮಾಜದ ಇತರ ಹಿತೈಷಿಗಳ ಒತ್ತಡ, ಹತ್ತಿರದ ಸಂಬಂಧಿಗಳ ಅನೈತಿಕ ಬೆಳವಣಿಗೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ತಂದೆ ತಾಯಿಗಳ ಅನಾರೋಗ್ಯ ಎಲ್ಲವೂ ಹಣದ ಅನಿವಾರ್ಯತೆ ತಂದೊಡ್ಡುತ್ತದೆ. ಆಗ ಬಹುತೇಕ ಹೋರಾಟಗಾರರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತದೆ.
ಇಂದಿನ ಸಮಾಜದಲ್ಲಿ ಹಣವೇ ಮನುಷ್ಯ ಬದುಕಿನ ಅತಿಹೆಚ್ಚು ಮಹತ್ವ ಪಡೆದಿರುವುದರಿಂದ ಎಲ್ಲಾ ಬೆಲೆಗಳು ಗಗನಕ್ಕೆ ಏರಿರುವುದರಿಂದ ಕಾರ್ಪೊರೇಟ್ ಸಂಸ್ಥೆಗಳು ಸಾಮಾನ್ಯ ಜನರನ್ನು ಅವರ ಬಲೆಯೊಳಗೆ ಬೀಳಿಸಿಕೊಂಡಿರುವುದರಿಂದ ಹೋರಾಟಗಾರರು ಸಹ ಹಣದ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೆ ಮಾಡಿದ ಬಲಿಷ್ಠ ಮತ್ತು ಪ್ರಾಮಾಣಿಕ ಹೋರಾಟಗಳು ಲೆಕ್ಕಕ್ಕೇ ಬರದೇ ಕೇವಲ ಹಣಕಾಸಿನ ಅವ್ಯವಹಾರಗಳು ಮಾತ್ರ ಮುಖ್ಯವಾಗುತ್ತಿವೆ.
ಮುಖ್ಯವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರ್ಪೊರೇಟ್ ಶೈಲಿಯಲ್ಲಿ ತಾವು ಮಹಾ ಸಾಹಸಿಗಳಂತೆ ವ್ಯಕ್ತಿಗಳ ಖಾಸಗಿ ಬದುಕಿನಲ್ಲಿ ಪ್ರವೇಶಿಸಿ ನಂಬಿಕೆ ದ್ರೋಹ ಮಾಡಿ ಹಿಡನ್ ಕ್ಯಾಮರಾಗಳ ಮೂಲಕ ಎಲ್ಲವನ್ನೂ ಬೆತ್ತಲು ಗೊಳಿಸುತ್ತಿವೆ. ಇದು ಕೆಲವೊಮ್ಮೆ ಮೇಲ್ನೋಟಕ್ಕೆ ಉತ್ತಮ ಕೆಲಸ ಎನಿಸಿದರೂ ದೀರ್ಘಕಾಲದಲ್ಲಿ ಮನುಷ್ಯ ಸಂಬಂಧಗಳಿಗೆ ಸಾಕಷ್ಟು ಹಾನಿ ಮಾಡುತ್ತದೆ.
ಸಹಜವಾಗಿ ಮಾತನಾಡುವ ಖಾಸಗಿ ಕ್ಷಣಗಳು ಸಾರ್ವಜನಿಕ ವೀಕ್ಷಣೆಗೆ ಅರ್ಹವಲ್ಲ. ಅದು ಆ ಕ್ಷಣದ ಸ್ವಾಭಾವಿಕ ಮಾತುಗಳು. ಆದರೆ ಅದು ಧ್ವನಿಮುದ್ರಿತವಾಗಿ ಪ್ರಸಾರವಾದರೆ ಬೇರೆಯದೇ ಅರ್ಥ ಕೊಡುತ್ತದೆ. ಸಾರ್ವಜನಿಕರಿಗೆ ಈ ಸೂಕ್ಷ್ಮತೆ ಅರ್ಥವಾಗುವುದಿಲ್ಲ.
ಜೊತೆಗೆ ಸಂಘಟನೆಗಳ ನಡುವೆ ಪೈಪೋಟಿ ಸಹ ಇದ್ದು ವಿರುದ್ಧ ಸಂಘಟನೆಗಳ ನಾಯಕರ ನಡುವಿನ ವೈಮನಸ್ಯಗಳನ್ನು ಈ ಕಾರ್ಪೊರೇಟ್ ಮಾಧ್ಯಮಗಳು ದುರುಪಯೋಗ ಪಡಿಸಿಕೊಳ್ಳುತ್ತವೆ. ಮಾಧ್ಯಮಗಳು ಸಂಘಟನೆಗಳನ್ನು ದುರ್ಬಲ ಗೊಳಿಸಿ ತಾವು ತಮ್ಮ ಸ್ವ ಹಿತಾಸಕ್ತಿಗಳ ಜನಾಭಿಪ್ರಾಯ ರೂಪಿಸುವ ಹುನ್ನಾರಗಳು ಇದರ ಹಿಂದಿವೆ.
ಇದರ ಅರ್ಥ ಹೋರಾಟಗಾರರ ಅಪ್ರಾಮಾಣಿಕತೆಯ ಸಮರ್ಥನೆಯಲ್ಲ. ಸಾರ್ವಜನಿಕ ಸೇವೆ ಎಂಬುದು ಒಂದು ಧ್ಯಾನಸ್ಥ ಮನಸ್ಥಿತಿ. ತ್ಯಾಗದ ಸಂಕೇತ. ಭಾರತದ ಸ್ವಾತಂತ್ರ್ಯ ಹೋರಾಟದ ಬಲಿದಾನಗಳು ನಮ್ಮ ಕಣ್ಣ ಮುಂದಿವೆ. ಹೊಟ್ಟೆ ಪಾಡಿಗಾಗಿ ಅಥವಾ ಯಾವುದೋ ಹಣ ಹೆಸರು ಮಾಡಲು ಸಾರ್ವಜನಿಕ ಸೇವೆಗೆ ಬರಬಾರದು. ಅದಕ್ಕಾಗಿ ಬೇರೆ ಉದ್ಯೋಗ ಮಾಡಬೇಕು. ಹೋರಾಟಕ್ಕೆ ಬರಬೇಕಾದರೆ ಎಲ್ಲವನ್ನೂ ತ್ಯಾಗ ಮಾಡಿ ಪ್ರಾಮಾಣಿಕವಾಗಿ ನೈತಿಕವಾಗಿ ಎಲ್ಲಾ ನೋವು ಸಂಕಷ್ಟಗಳನ್ನು ಎದುರಿಸಿಲು ಸಿದ್ದರಾಗಿ ಬರಬೇಕು. ಎಲ್ಲಾ ಆಸೆ ಆಮಿಷಗಳನ್ನು ಗೆಲ್ಲುವ ಮನೋಭಾವ ಹೊಂದಿರಬೇಕು. ಹೌದು ಇಲ್ಲಿ ಅನೇಕ ಸುಳ್ಳು ಆರೋಪಗಳು ಬರಬಹುದು, ಬೇಕಂತಲೇ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಅದೆಲ್ಲವನ್ನೂ ನಿರೀಕ್ಷಿಸಿಯೇ ಇಲ್ಲಿಗೆ ಪ್ರವೇಶಿಸಬೇಕು.
ಏನಾದರಾಗಲಿ ಸಾರ್ವಜನಿಕ ಹೋರಾಟಗಳಲ್ಲಿ ಶುದ್ದತೆ ಮತ್ತು ಪಾವಿತ್ರ್ಯತೆ ಮುಖ್ಯ. ಪ್ರೀತಿ ನಿಸ್ವಾರ್ಥ ತಾಳ್ಮೆ ಮುಖಾಂತರ ಇಂದಲ್ಲಾ ನಾಳೆ ಜನ ನೈಜ ಹೋರಾಟಗಾರರನ್ನು ಖಂಡಿತ ಬೆಂಬಲಿಸುತ್ತಾರೆ. ಆದರೆ ನಾವು ನೈಜ ಹೋರಾಟಗಾರರಾಗಿರಬೇಕಷ್ಟೇ.
ಮಾಧ್ಯಮಗಳ ಬಣ್ಣ ಸಹ ಶೀಘ್ರದಲ್ಲೇ ಬಯಲಾಗಲಿದೆ……
ಗೆಳೆಯರೇ ಯಾವುದೇ ವಿಷಯದಲ್ಲಿ ತಕ್ಷಣಕ್ಕೆ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳುವುದಕ್ಕಿಂತ ಸ್ವಲ್ಪ ವಿವೇಚನೆ ಬಳಸಿ ಸಮಗ್ರವಾಗಿ ಚಿಂತಿಸಿ ನಿಧಾನವಾಗಿ ಪ್ರತಿಕ್ರಿಯಿಸಿ. ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ನಿಮ್ಮನ್ನು ಹಾದಿ ತಪ್ಪಿಸದಿರಲಿ. ಹೋರಾಟಗಾರರ ಮುಖವಾಡ ಕಳಚಲಿ. ನಕಲಿಗಳು ಬೆತ್ತಲಾಗಲಿ. ಪ್ರಾಮಾಣಿಕರು ತ್ಯಾಗ ಜೀವಿಗಳು ಮುನ್ನಲೆಗೆ ಬರಲಿ ಎಂದು ಆಶಿಸುತ್ತಾ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……