Spread the love

ಕರ್ನಾಟಕದ ಬಿಜೆಪಿ ಸರಕಾರ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನಾಗಿ ರೋಹಿತ್ ಭಟ್ ಚಕ್ರತೀರ್ಥ, ಕುಂಜಿಬೆಟ್ಟು, ಉಡುಪಿ ಅವರನ್ನು ನೇಮಕ ಮಾಡಿದ್ದು, ಇವರು ಪರಿಷ್ಕರಣೆ ಮಾಡಿದ ಪಠ್ಯ ಪುಸ್ತಕ ನಾಡಜನತೆಯ ತೀವ್ರ ಅಸಮಾಧಾನಕ್ಕೆ, ಖಂಡನೆಗೆ ಗುರಿಯಾಗಿದೆ.

ರೋಹಿತ್ ಭಟ್ ರ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರು ಪತ್ರಿಕಾಗೋಷ್ಟಿ ಮೂಲಕ ನೀಡಿದ ವಿವರಗಳಲ್ಲಿ ಕೆಲವು ಮುಖ್ಯ ಮಾಹಿತಿಗಳು ಸುಳ್ಳು ಎಂಬುದು ಈಗಾಗಲೇ ಸ್ಪಷ್ಟವಾಗಿದೆ.

ಶಿಕ್ಷಣ ಸಚಿವರು ತಿಳಿಸಿದಂತೆ ತಾನು ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಅಲ್ಲವೆಂದು ಸ್ವತಹಾ ರೋಹಿತ್ ಭಟ್ಟರವರೇ ಸ್ಪಷ್ಟನೆ ನೀಡಿದ್ದಾರೆ. ಸಿಇಟಿ ಎಂಬುದು ಒಂದು ಕಾಲೇಜಾಗಲೀ, ವಿಶ್ವವಿದ್ಯಾನಿಲಯವಾಗಲಿ ಅಲ್ಲವೆಂಬ ಕನಿಷ್ಟ ತಿಳುವಳಿಕೆಯೂ ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ಇಲ್ಲ ಎನ್ನುವುದು ಈ ಮೂಲಕ ರಾಜ್ಯದ ಸಮಸ್ತ ಜನತೆಯ ಅರಿವಿಗೆ ಬಂದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರಾಗಲು ಶೈಕ್ಷಣಿಕ ಅರ್ಹತೆಯೇ ಮುಖ್ಯವಲ್ಲ. ಆದರೆ ಕನಿಷ್ಟ ತಿಳುವಳಿಕೆ ಇಲ್ಲದವರು ಸಚಿವರಾದರೆ ನಮ್ಮ ನಾಡಿನ ಭವಿಷ್ಯ, ಭಾವೀ ಪ್ರಜೆಗಳ ಭವಿಷ್ಯ ಪಾತಾಳಕ್ಕೆ ಕುಸಿಯುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಒಂದು ರಾಜ್ಯದ, ದೇಶದ ಸಚಿವರಾಗಲು ಶೈಕ್ಷಣಿಕ ಅರ್ಹತೆ ಮುಖ್ಯವಲ್ಲವಾದರೂ, ಒಂದು ರಾಜ್ಯದ ಕೊಟ್ಯಂತರ ಮಕ್ಕಳ ಭವಿಷ್ಯವನ್ನು ರೂಪಿಸುವ, ಮಕ್ಕಳ ಪ್ರಭುದ್ಧತೆಯ, ಜ್ಞಾನದ ಮಟ್ಟವನ್ನು ಅಗಾಧವಾಗಿ ವಿಸ್ತರಿಸಲಿಕ್ಕಿರುವ ಮೆಟ್ಟಿಲಾದ ಪಠ್ಯ ಪುಸ್ತಕಗಳನ್ನು ತಯಾರಿಸುವ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಿಗೆ ಕೆಲವೊಂದು ಕನಿಷ್ಟ ಅರ್ಹತೆ, ಯೋಗ್ಯತೆ, ಮಾನದಂಡಗಳು ಇರಲೇಬೇಕು. ರಾಜ್ಯ ಸರಕಾರ ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರ ಯೋಗ್ಯತೆ ಎಷ್ಟು ಕೆಳಮಟ್ಟದ್ದು ಎಂಬುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಬಯಲುಪಡಿಸಿದ್ದರೆ, ಬಿಜೆಪಿ ಸರಕಾರದ ಶಿಕ್ಷಣ ಸಚಿವರೇ ಅದ್ಯಕ್ಷರ ಅರ್ಹತೆಯನ್ನು ಬಹಿರಂಗಪಡಿಸುವ ಮೂಲಕ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ.

ಇನ್ನಾದರೂ ಸರಕಾರ ರೋಹಿತ್ ಅವರು, ಯಾವ ಕಾಲೇಜಿನಲ್ಲಿ, ಯಾವ ವರ್ಷ ಯಾವ ಪದವಿಯಲ್ಲಿ ಉತ್ತೀರ್ಣರಾದರು ಎಂಬ ಕುರಿತು ದಾಖಲೆಗಳ ಸಹಿತ ಬಹಿರಂಗಪಡಿಸಬೇಕು. ಮಾಡಿದ ಅಕ್ಷಮ್ಯ ತಪ್ಪಿಗೆ ರಾಜ್ಯದ ಸಮಸ್ತ ಜನತೆಯ, ಮಕ್ಕಳ, ಹೆತ್ತವರ, ಪೋಷಕರ, ಶಿಕ್ಷಕ – ಶಿಕ್ಷಕಿಯರ ಕ್ಷಮಾಪಣೆ ಕೇಳಬೇಕು. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಸರಕಾರ ನೂತನ ಪಠ್ಯವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಸಮಿತಿಯ ಅಧ್ಯಕ್ಷರನ್ನು ವಜಾಗೊಳಿಸಿ ರಾಜ್ಯದ ಗೌರವ, ಘನತೆಯನ್ನು ಕಾಪಾಡಬೇಕು ಎಂದು ಜನಪರ ಕಾರ್ಯಕರ್ತ ಶ್ರೀರಾಮ ದಿವಾಣ ಆಗ್ರಹಿಸಿದ್ದಾರೆ.

error: No Copying!