ಬೆಂಗಳೂರು: ದಿನಾಂಕ:03-07-2026(ಹಾಯ್ ಉಡುಪಿ ನ್ಯೂಸ್)
ಬೆಂಗಳೂರಿನ ಪಾದಾಚಾರಿ ಮಾರ್ಗಗಳನ್ನು ನಾಗರಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸಲು ಹಾಗೂ ಬೀದಿಬದಿ ವ್ಯಾಪಾರಿಗಳ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ನಮ್ಮ ಈ ನಿರ್ಧಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯವರ ದ್ವಿಮುಖ ನೀತಿ ಖಂಡನೀಯ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಳೆದ ಮಾರ್ಚ್ 20, 2026 ರಂದು ವಿಧಾನಸೌಧದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರಿನ ʻಐದು ನಗರ ಪಾಲಿಕೆಗಳ 2026-27ನೇʼ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಜನಪ್ರತಿನಿಧಿಗಳು ಹಾಜರಿದ್ದರು. ಆ ಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹೊಸ ನಿಯಮಗಳನ್ನು ತರಲು ನಾವೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದೆವು.
ಪಾದಾಚಾರಿಗಳಿಗೆ ತೊಂದರೆಯಾಗದಂತೆ ನೊಂದಾಯಿತ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ, ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ನಿಷೇಧ, ರಾತ್ರಿ ವೇಳೆ ರಸ್ತೆಯಲ್ಲೇ ನಿಲ್ಲಿಸುವ ಗಾಡಿಗಳ ತೆರವು ಹಾಗೂ ಗುರುತಿನ ಚೀಟಿ ಕಡ್ಡಾಯಗೊಳಿಸುವ ಈ ಎಲ್ಲಾ ನಿಯಮಗಳಿಗೆ ಅಂದು ಸಭೆಯಲ್ಲಿದ್ದ ಬಿಜೆಪಿ ಸೇರಿದಂತೆ ಎಲ್ಲಾ ಶಾಸಕರು ಮತ್ತು ಸಚಿವರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದರು.
ಅಂದು ನಾಲ್ಕು ಗೋಡೆಗಳ ಮಧ್ಯೆ ಸಭೆಯಲ್ಲಿ ತಲೆಯಾಡಿಸಿ ಒಪ್ಪಿಗೆ ಕೊಟ್ಟು, ಇಂದು ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿರುವ ಬಿಜೆಪಿಯ ಇಬ್ಬಂದಿ ತನವನ್ನು ಜನ ಗಮನಿಸುತ್ತಿದ್ದಾರೆ. ಸ್ವಾರ್ಥ ರಾಜಕಾರಣ ಅವರದ್ದಾದರೆ, ಜನಪರ ಹಾಗೂ ವ್ಯವಸ್ಥಿತ ಬೆಂಗಳೂರು ನಿರ್ಮಾಣವೇ ನಮ್ಮ ಧ್ಯೇಯ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.


