ಉಡುಪಿ: ದಿನಾಂಕ :30-06-2026(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳ ಮತ್ತು ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ನಿಯಂತ್ರಿಸಿ ನಿರ್ಗತಿಕರಿಗೆ ಪರ್ಯಾಯ ಆಶ್ರಯ ಕಲ್ಪಿಸಿ ಕೊಡುವ ಬಗ್ಗೆ “ನಮ್ಮ ಕರ್ನಾಟಕ ಸೇನೆ” ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ನೇತೃತ್ವದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತ ರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರ ಈಗ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇತ್ತೀಚೆಗೆ ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರು ಮತ್ತು ನಿರ್ಗತಿಕರ ಹಾವಳಿ ಹೆಚ್ಚಾಗಿದೆ. ಅವರು ಅಲ್ಲಿಯೇ ಮಲಗಿ ಕುಡಿದುಕೊಂಡು ಗಲಾಟೆ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರವಾಸಿಗರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಹ ಅಸಹ್ಯಪಡುವಂತಾಗಿದೆ. ನಿರ್ಗತಿಕರು ಯಾವುದೇ ಪರ್ಯಾಯ ಸ್ಥಳ ಇಲ್ಲದ ಕಾರಣ ಇದನ್ನೇ ಆಶ್ರಯತಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ತಕ್ಷಣ ಪರ್ಯಾಯ ಆಶ್ರಯತಾಣ ಒದಗಿಸಬೇಕಾಗಿದೆ. ಅಲ್ಲದೆ ಕುಡುಕರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಹಾಕಿ ಇಲ್ಲಿಂದ ತೆರವು ಮಾಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಒಂದು ವೇಳೆ ನಗರಸಭೆಗೆ ಈ ಕ್ರಮ ಕೈಗೊಳ್ಳಲಾಗದಿದ್ದಲ್ಲಿ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಾವೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ವತಿಯಿಂದ ಪೌರಾಯುಕ್ತರಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮೀಶ ಶೆಟ್ಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಸ್ ಪೂಜಾರಿ , ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಅನಿತಾ ಬಿವಿ. ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್. ಜಿಲ್ಲಾ ಸದಸ್ಯರು ಅಶೋಕ.ಸಂತೋಷ್ ಹನುಮಂತ.ಮೊದಲಾದವರು ಉಪಸ್ಥಿತರಿದ್ದರು.
