ಬೆಂಗಳೂರು: ದಿನಾಂಕ: 26-06-2026(ಹಾಯ್ ಉಡುಪಿ ನ್ಯೂಸ್) ವಿಧಾನಸೌಧದಲ್ಲಿ ಇಂದು ನಡೆದ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಪಾಲ್ಗೊಂಡು, ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.
- ದಾಖಲೆ ಇಲ್ಲದ ವಾಹನಗಳಿಗೆ ಗಡಿಯಲ್ಲೇ ತಡೆ: ಯಾವುದೇ ಸರಕು ಸಾಗಣೆ ವಾಹನಗಳು ಸೂಕ್ತ ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್ ಅಥವಾ ರಾಜ್ಯದ ಗಡಿಯನ್ನು ದಾಟುವಂತಿಲ್ಲ. ತೆರಿಗೆ ವಂಚನೆ ಹಾಗೂ ಬೋಗಸ್ ಕಂಪನಿಗಳ ಸೃಷ್ಟಿಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ನೆರೆ ರಾಜ್ಯಗಳೊಂದಿಗೆ ಜಂಟಿ ಕಾರ್ಯಾಚರಣೆ: ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಮಾಹಿತಿ ಹಂಚಿಕೆಯ ಮೂಲಕ ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬೇಕು.
- ರಿಟರ್ನ್ಸ್ ಸಲ್ಲಿಕೆಗೆ ಕ್ರಮ: ತೆರಿಗೆ ರಿಟರ್ನ್‌ಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸದವರನ್ನು ಗುರುತಿಸಿ, ಅವರಿಂದ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಕೆ ಮಾಡಿಸಲು ಜಂಟಿ ಆಯುಕ್ತರುಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
- ನಾಗರಿಕ ಸ್ನೇಹಿ ಆಡಳಿತ: ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕವೇ ತ್ವರಿತವಾಗಿ ಬಗೆಹರಿಸಿ, ಘನತೆಯಿಂದ ನಡೆಸಿಕೊಳ್ಳಬೇಕು.
- ತಂತ್ರಜ್ಞಾನಗಳ ಬಳಕೆ: ಹೈದರಾಬಾದ್ IIT ಸಹಯೋಗದ ‘GST Analytical Portal’ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ 12 ಲಕ್ಷ ತೆರಿಗೆದಾರರ ಮಾಹಿತಿ ವಿಶ್ಲೇಷಿಸಿ, 360 ಡಿಗ್ರಿ ದೃಷ್ಟಿಕೋನದಲ್ಲಿ ತೆರಿಗೆ ಸೋರಿಕೆಯನ್ನು ತಡೆಯಲಾಗುತ್ತಿದೆ.
- ಜಿಎಸ್‌ಟಿ ಸಂಗ್ರಹದಲ್ಲಿ ಸಾಧನೆ: ಮೇ 2026ರ ವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಶೇ.9 ರಷ್ಟು ಪ್ರಗತಿ ಸಾಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಮಹಾರಾಷ್ಟ್ರಗಳಿಗಿಂತ ನಮ್ಮ ಸಾಧನೆ ಉತ್ತಮವಾಗಿದ್ದು, ಮೊದಲ ಸ್ಥಾನಕ್ಕೇರಲು ಅಗತ್ಯ ಕ್ರಮ ವಹಿಸಲಾಗುವುದು.
- ನೆಪಗಳಿಗೆ ಆಸ್ಪದವಿಲ್ಲ – ಫಲಿತಾಂಶ ಮುಖ್ಯ: ಮೈಸೂರು ಸೇರಿದಂತೆ ಕಾರ್ಯಕ್ಷಮತೆ ಕುಸಿದಿರುವ ವಿಭಾಗಗಳು ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿಕೊಂಡು ನಿಗದಿತ ಗುರಿ ತಲುಪಬೇಕು. ಬಾಕಿ ಇರುವ ಮೇಲ್ಮನವಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.



