ಬೆಂಗಳೂರು: ದಿನಾಂಕ:24-06-2026(, ಹಾಯ್ ಉಡುಪಿ ನ್ಯೂಸ್) ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ “ಸ್ವಂತ ಮನೆ” ಎನ್ನುವುದು ಜೀವಮಾನದ ಅತಿ ದೊಡ್ಡ ಕನಸು. ಈ ಕನಸನ್ನು ನನಸು ಮಾಡುವುದು ನಮ್ಮ ಸರ್ಕಾರದ ಪರಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರಗತಿಯಲ್ಲಿರುವ ಯೋಜನೆಗಳ ವೇಗವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣವೇ ಸೌಲಭ್ಯ ತಲುಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದರು.
ಬಡವರಿಗೆ ಬರಿ ನಿವೇಶನ ಕೊಡುವ ಬದಲು, ತಲೆ ಮೇಲೊಂದು ಭದ್ರವಾದ ಸೂರು ಕಲ್ಪಿಸಲು ಮನೆ ಕಟ್ಟಿ ಕೊಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ವಸತಿ ಯೋಜನೆಗಳಲ್ಲಿ ಹರಾಜು ವ್ಯವಸ್ಥೆ ಅಥವಾ ಸಾರ್ವಜನಿಕವಾಗಿ ಲಾಟರಿ ಎತ್ತುವ ಮೂಲಕವೇ ಆಗಿರಲಿ, ಒಟ್ಟಿನಲ್ಲಿ ಪಾರದರ್ಶಕವಾಗಿ ಅರ್ಹರಿಗೇ ಮನೆ ತಲುಪಿಸುವ ವ್ಯವಸ್ಥೆ ತರಬೇಕು. ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಬಡವರು ಮನೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು ಎಂದು ಸೂಚಿಸಿದ್ದೇನೆ.
ಮುಂಬೈ ಮಾದರಿಯಲ್ಲಿ ನಮ್ಮ ರಾಜ್ಯದ ಸ್ಲಂಗಳ ಮರು ಅಭಿವೃದ್ಧಿಗೆ ಬೃಹತ್ ಯೋಜನೆ ಸಿದ್ಧಪಡಿಸಬೇಕಿದೆ. ನಮ್ಮ ಅಧಿಕಾರಿಗಳ ತಂಡ ಮುಂಬೈಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಅದಕ್ಕಿಂತಲೂ ಉತ್ತಮ ಹಾಗೂ ಹೆಚ್ಚಿನ ವಿಸ್ತೀರ್ಣದ ಮನೆಗಳನ್ನು ನಮ್ಮಲ್ಲಿ ಹೇಗೆ ನಿರ್ಮಿಸಬಹುದು ಎಂಬ ಬಗ್ಗೆ ಮುಂದಿನ ಕ್ಯಾಬಿನೆಟ್ ಒಳಗಾಗಿ ವರದಿ ಸಲ್ಲಿಸಲು ನಿರ್ದೇಶಿಸಿದರು .ಕೇವಲ ಮನೆ ಕಟ್ಟಿದರೆ ಸಾಲದು, ಗುಣಮಟ್ಟದ ನಿರ್ಮಾಣದ ಜೊತೆಗೆ ಆ ವಸತಿ ಸಮುಚ್ಚಯಗಳಿಗೆ ಸೂಕ್ತ ರಸ್ತೆ ಸಂಪರ್ಕ ಹಾಗೂ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕಡೆಗೂ ಸಮಾನ ಗಮನ ಹರಿಸಬೇಕು ಎಂದು ಸ್ಪಷ್ಟಪಡಿಸಿದರು.
ಹಲವು ವರ್ಷಗಳ ಹಿಂದೆಯೇ ಠೇವಣಿ ಕಟ್ಟಿ, ಇಂದಿಗೂ ಮನೆಗಾಗಿ ಕಾಯುತ್ತಿರುವ ಬಡವರ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಿ, ವಿಳಂಬವಿಲ್ಲದೆ ಮನೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಗ್ರಾಮೀಣ ವಸತಿ ಯೋಜನೆಗಳ ಚುರುಕುಗೊಳಿಸುವಿಕೆ, ಕರ್ನಾಟಕ ಗೃಹ ಮಂಡಳಿ (KHB) ಹಾಗೂ ಶಿವರಾಮ ಕಾರಂತ ಬಡಾವಣೆಯ ರಾಜೀವ್ ಗಾಂಧಿ ವಸತಿ ಯೋಜನೆಗಳ ಜವಾಬ್ದಾರಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅರ್ಜಿದಾರರನ್ನು ಇನ್ನು ಕಾಯಿಸದೇ, ನೈಜ ಫಲಾನುಭವಿಗಳಿಗೇ ಸವಲತ್ತು ತಲುಪಿಸುವುದೇ ನಮ್ಮ ಧ್ಯೇಯ ಎಂದು ಹೇಳಿದರು.
