IMG_20260622_154610.jpg
Spread the love

ದಿನಾಂಕ:22-06-2026(ಹಾಯ್ ಉಡುಪಿ ನ್ಯೂಸ್)

ಉಡುಪಿ: ಒಂದು ತಿಂಗಳ ಹೆಣ್ಣು ಮಗುವೊಂದನ್ನು ಅಕ್ರಮವಾಗಿ  ದತ್ತು ನೀಡಿದ ಆರೋಪದಡಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಗರದ ಖ್ಯಾತ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಹಾಗೂ ಮಗುವನ್ನು ಸಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು, ಉಡುಪಿ ತಾಲೂಕಿನ ಸಂತೆಕಟ್ಟೆ-ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಯಾವುದೇ ಕಾನೂನಾತ್ಮಕ ಪ್ರಕ್ರಿಯೆ ಅನುಸರಿಸದೆ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಸಾಕುತ್ತಿರುವ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಐಸಿಡಿಎಸ್ ಅಧಿಕಾರಿಗಳು ದಂಪತಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ದಂಪತಿ ಮಗುವಿನ ಬಗ್ಗೆ ಅನುಮಾನಾಸ್ಪದ ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
ವಿಚಾರಣೆಯಲ್ಲಿ, 11 ವರ್ಷಗಳಿಂದ ಮಕ್ಕಳಾಗದ ಕಾರಣ ದಂಪತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಪರಿಚಯದ ಮೂಲಕ ಉಡುಪಿ ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಮಗು ಇರುವ ಮಾಹಿತಿ ತಿಳಿದು ವೈದ್ಯ ಡಾ. ಕೆ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ಪಡೆದಿರುವುದಾಗಿ ತಿಳಿದುಬಂದಿದೆ. ಮಗುವಿನ ಜನನ ಪ್ರಮಾಣಪತ್ರವನ್ನೂ ಆರೋಪಿತ ವೈದ್ಯರ ಮೂಲಕವೇ ಮಾಡಿಸಿಕೊಡಲಾಗಿದ್ದು, ಮಗುವಿನ ಹೆತ್ತ ಪೋಷಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದಂಪತಿ ಹೇಳಿಕೆ ನೀಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅಕ್ರಮ ಲಾಭದ ಉದ್ದೇಶದಿಂದ ಒಳಸಂಚು ರೂಪಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಗುವನ್ನು ಅಕ್ರಮವಾಗಿ ಹಸ್ತಾಂತರಿಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 41/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 143(4), 61, 318(2) ಜೊತೆಗೆ 3(5) ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯ ಕಲಂ 81ರಡಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76) ಹಾಗೂ ನೇಜಾರು ಸಂತೆಕಟ್ಟೆಯ ಎಸ್. ಪ್ರಕಾಶ್ (50) ಅವರನ್ನು ಬಂಧಿಸಲಾಗಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

error: No Copying!