HLVJ3fwbAAAzrBX.jpg
Spread the love

ಬೆಂಗಳೂರು: ದಿನಾಂಕ:21-06-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆದ ಕೆಪಿಸಿಸಿಯ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ, ನೂತನ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಭ ಹಾರೈಸಿದರು.

ಈ ಭವ್ಯ ಸಂಕಲ್ಪ ಸಮಾವೇಶದಲ್ಲಿ ಪಕ್ಷದ ಇನ್ನಿತರ ಹಿರಿಯ ನಾಯಕರು, ಸಚಿವ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಹಲವಾರು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು – ನಾನು ಕೆಪಿಸಿಸಿ ಅಧ್ಯಕ್ಷನಾದ ದಿನದಿಂದ ಇಲ್ಲಿಯವರೆಗೆ ನನ್ನ ಶಕ್ತಿ ಮೀರಿ, ನನ್ನ ಕಾರ್ಯಕರ್ತರಿಗೋಸ್ಕರ ಕೆಲಸ ಮಾಡಿದ್ದೇನೆ ಎನ್ನುವ ವಿಶ್ವಾಸ ನನಗಿದೆ. ನನ್ನ ಕೈಲಾದ ಮಟ್ಟಿಗೆ ಪಕ್ಷವನ್ನು ಸಂಘಟಿಸಿ, ಸಮಾಜದ ಎಲ್ಲಾ ವರ್ಗದ ಹಾಗೂ ನಮ್ಮ ಕಾರ್ಯಕರ್ತರ ಮನೆಯ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಇಂದು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದೇನೆ.

ನಾನು ಆಗಾಗ ಒಂದು ಮಾತು ಹೇಳುತ್ತಿರುತ್ತೇನೆ; ಕಾಂಗ್ರೆಸ್ ಶಕ್ತಿಯೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಂತೆ ಎಂಬುದು ನನ್ನ ದೃಢ ನಂಬಿಕೆ.

2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಕಳೆದ ಆರು ವರ್ಷಗಳ ನನ್ನ ಈ ಸುದೀರ್ಘ ಪಯಣವು ಕೋವಿಡ್ ಸಂಕಷ್ಟದ ಕಾಲದಿಂದ ಆರಂಭವಾಯಿತು. ಈ ಅವಧಿಯಲ್ಲಿ 75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಕಾಂಗ್ರೆಸ್‌ ಕುಟುಂಬಕ್ಕೆ ಜೋಡಿಸಿದ ತೃಪ್ತಿ ನನಗಿದೆ.

ಕರ್ನಾಟಕದ ಹಿತರಕ್ಷಣೆಗಾಗಿ ನಾವು ಹಮ್ಮಿಕೊಂಡ ಐತಿಹಾಸಿಕ ʻಮೇಕೆದಾಟು ಪಾದಯಾತ್ರೆʼ, ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದ ʻಭಾರತ್ ಜೋಡೋ ಯಾತ್ರೆʼ, ʻನಮ್ಮ ಮತ – ನಮ್ಮ ಹಕ್ಕು – ನಮ್ಮ ಹೋರಾಟʼ ಮತ್ತು ಇತ್ತೀಚಿನ ʻನರೇಗಾ ಬಚಾವೋ ಸಂಗ್ರಾಮʼದವರೆಗೆ ರಾಜ್ಯದ ಮಹಾಜನತೆಯ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ರಕ್ಷಿಸುವುದಕ್ಕೆ ನಾವೆಲ್ಲರೂ ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದೇವೆ.

ಈ ಆರು ವರ್ಷಗಳ ಕಾಲ ನಡೆದ ಹೋರಾಟ ಮತ್ತು ಸಾಧನೆಗಳು ಕೇವಲ ನನ್ನೊಬ್ಬನದಲ್ಲ; ಇದೆಲ್ಲವೂ ನಿಮ್ಮೆಲ್ಲರ ನಿರಂತರ ಶ್ರಮದಿಂದ ಮಾತ್ರ ಸಾಧ್ಯವಾಗಿದ್ದು. ಇದೆಲ್ಲದರ ಫಲವಾಗಿಯೇ 2023ರಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.

ನಾನು ಮತ್ತು ಹರಿಪ್ರಸಾದ್ ಇಬ್ಬರೂ ವಿದ್ಯಾರ್ಥಿ ನಾಯಕರಾಗಿ ಬೆಳೆದು ಬಂದವರು. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು. ಅವರು ನನಗಿಂತ ಕೆಲವು ವರ್ಷ ಸೀನಿಯರ್. ಅವರು 1983ರಲ್ಲಿ ಹಾಗೂ ನಾನು 1985ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೆವು. ಇಂದು ಒಬ್ಬ ಸಮರ್ಥ ವಿದ್ಯಾರ್ಥಿ ನಾಯಕನಿಗೆ, ನಿಷ್ಠಾವಂತ ಕಾರ್ಯಕರ್ತನಿಗೆ ಹಾಗೂ ಇಡೀ ದೇಶದಲ್ಲಿ ಕಾಂಗ್ರೆಸ್ ಸಂಘಟನೆಗಾಗಿ ದುಡಿದ ಧೀಮಂತ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿರುವುದು ನನಗೆ ಅಪಾರ ಸಮಾಧಾನ ತಂದಿದೆ.

ಇಡೀ ಸರ್ಕಾರ ಮತ್ತು ಇಡೀ ಪಕ್ಷ ಹರಿಪ್ರಸಾದ್ ಅವರ ಜೊತೆಯಲ್ಲಿರುತ್ತದೆ. ಇಂದು ನಾನು ಮುಖ್ಯಮಂತ್ರಿಯಾಗಿರಬಹುದು, ಆದರೆ ಮೂಲತಃ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಆ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೈಜೋಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಸಂಕಲ್ಪ ಮಾಡಿ, ಶ್ರಮವಹಿಸಿ ದುಡಿದು 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಹಾಗೂ 2029ರಲ್ಲಿ ಶ್ರೀ ರಾಹುಲ್ ಗಾಂಧಿ ಅವರನ್ನು ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿಯನ್ನಾಗಿ ಮಾಡಲು ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸೋಣ ಎಂದು ಡಿಕೆ ಶಿವಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

error: No Copying!