images-6.jpeg
Spread the love

ಬೆಂಗಳೂರು: ದಿನಾಂಕ:21-06-2026(ಹಾಯ್ ಉಡುಪಿ ನ್ಯೂಸ್) ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕದ ನ್ಯಾಯಸಮ್ಮತ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳುನಾಡು ವಿಧಾನಸಭೆ ಏಕಪಕ್ಷೀಯವಾಗಿ ವಿರೋಧ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿರುವುದು ತೀರಾ ಖಂಡನೀಯ ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ. ಈ ಯೋಜನೆ ನಮ್ಮ ರಾಜ್ಯದ ಪಾಲಿನ ನೀರಿನ ಸದ್ಬಳಕೆ ಹಾಗೂ ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಕುಡಿಯುವ ನೀರು ಒದಗಿಸುವ ನಮ್ಮ ಹಕ್ಕು. ಈ ವಿಚಾರದಲ್ಲಿ ನೆರೆರಾಜ್ಯದ ಅನಗತ್ಯ ರಾಜಕೀಯ ಹಸ್ತಕ್ಷೇಪ ಹಾಗೂ ಹಠಮಾರಿ ಧೋರಣೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ.

ಕನ್ನಡ ನೆಲ, ಜಲ ಮತ್ತು ಭಾಷೆಯ ವಿಷಯ ಬಂದಾಗ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ತಮಿಳುನಾಡು ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾವೇರಿ ವಿಚಾರವನ್ನು ಪದೇ ಪದೇ ಬಳಸಿಕೊಳ್ಳುವುದನ್ನು ನಿಲ್ಲಿಸಲಿ. ನಮ್ಮ ಅನ್ನದಾತರ ಹಿತ ಹಾಗೂ ಕನ್ನಡಿಗರ ಕುಡಿಯುವ ನೀರಿನ ಹಕ್ಕನ್ನು ರಕ್ಷಿಸಲು ನಾವು ಯಾವ ಹಂತದ ಹೋರಾಟಕ್ಕೂ ಸಿದ್ಧ.

ಆದರೆ ದುರ್ದೈವವೆಂದರೆ, ಒಂದೆಡೆ ರಾಜ್ಯದಲ್ಲಿ ಕಾವೇರಿ ಹಕ್ಕಿಗಾಗಿ ಹೋರಾಡುವಂತೆ ನಟಿಸುತ್ತಾ ಬಂದ ಕಾಂಗ್ರೆಸ್ ಪಕ್ಷ, ಮತ್ತೊಂದೆಡೆ ತಮಿಳುನಾಡಿನಲ್ಲಿ ಅಲ್ಲಿನ ಮೇಕೆದಾಟು ವಿರೋಧಿ ನಿರ್ಣಯ ಮಂಡಿಸಿದ ಸರ್ಕಾರದಲ್ಲಿ ಇದೇ ಕಾಂಗ್ರೆಸ್ ಭಾಗಿಯಾಗಿದೆ. ರಾಜ್ಯದ ಹಿತಾಸಕ್ತಿಗೆ ಬೇಷರತ್ ಬೆಂಬಲ ಸೂಚಿಸಿರುವುದು ಕಾಂಗ್ರೆಸ್ ಪಕ್ಷದ ಇಬ್ಬಂದಿ ನೀತಿ ಮಾತ್ರವಲ್ಲ, ಕನ್ನಡಿಗರಿಗೆ ಬಗೆದ ದ್ರೋಹಕ್ಕೆ ಸಾಕ್ಷಿಯಾಗಿದೆ. ಅಧಿಕಾರದ ಆಸೆಗಾಗಿ ಹಾಗೂ ತಮ್ಮ ಮೈತ್ರಿಕೂಟದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕನ್ನಡಿಗರ ಕುಡಿಯುವ ನೀರಿನ ಹಕ್ಕನ್ನು ನೆರೆರಾಜ್ಯದ ಪಾದದಡಿ ಅಡವಿಟ್ಟಿರುವ ಈ ಕಾಂಗ್ರೆಸ್ ಸರ್ಕಾರದ ನಾಟಕಗಳು, ಅತ್ಯಂತ ನಾಚಿಕೆಗೇಡಿನ ಸಂಗತಿ.

ಈ ವಿಚಾರದಲ್ಲಿ ಕರ್ನಾಟಕ ಪಕ್ಷಾತೀತ ಹೋರಾಟ ನಡೆಸಬೇಕು. ನೀರಿನ ವಿಚಾರದಲ್ಲಿ ರಾಜಕೀಯ ಮಾಡಲು ಬಿಜೆಪಿ ಬಯಸುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕರ್ನಾಟಕದ ವಿಚಾರದಲ್ಲಿ ಯಾವಾಗಲೂ ವಿರೋಧಿ ನೀತಿಯನ್ನೇ ಅನುಸರಿಸುತ್ತಾ ಬಂದಿದೆ. ತನ್ನ ಹೈಕಮಾಂಡ್ ನ ಅಧಿಕಾರದ ಹಪಾಹಪಿಗೆ ರಾಜ್ಯದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ. ಕಾಂಗ್ರೆಸ್ಸಿನ ಐತಿಹಾಸಿಕ ತಪ್ಪುಗಳು ಮತ್ತೆ ಮರುಕಳಿಸಬಾರದು ಎಂಬುದಷ್ಟೇ ನಮ್ಮ ಆಶಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

error: No Copying!