20260620_000856.jpg
Spread the love

ಬೆಂಗಳೂರು: ದಿನಾಂಕ:20-06-2026 (ಹಾಯ್ ಉಡುಪಿ ನ್ಯೂಸ್) ಕರಾವಳಿಯಲ್ಲೇ ಕ್ಯಾಬಿನೆಟ್; ಪ್ರವಾಸೋದ್ಯಮ ಮತ್ತು ಆರ್ಥಿಕ ವಿಕಾಸಕ್ಕೆ ನಮ್ಮ ಸರ್ಕಾರ ಹೆಜ್ಜೆ ಯನ್ನಿಡುತ್ತದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ವಿಧಾನ ಸೌಧದಲ್ಲಿ ನಿನ್ನೆ ಕರಾವಳಿಯ ಅಭಿವೃದ್ಧಿ ಕುರಿತು ಸಚಿವರು ,ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.

ಕರ್ನಾಟಕದ ಕರಾವಳಿ ತೀರವು ದೇಶದಲ್ಲೇ ಅತ್ಯಂತ ಸುಂದರ ಹಾಗೂ ಸುದೀರ್ಘವಾದ ಇತಿಹಾಸ ಹೊಂದಿದೆ. ಇಲ್ಲಿನ ಪರಿಸರಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ಭಾಗವನ್ನು ಪ್ರವಾಸೋದ್ಯಮದ ಹಬ್‌ ಆಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಸೂಚನೆಗಳು:

– ಕರಾವಳಿಯಲ್ಲೇ ಸಂಪುಟ ಸಭೆ: ಕರಾವಳಿಯ ಸ್ಥಳೀಯ ಸಮಸ್ಯೆಗಳನ್ನು ಅರಿತು ತಕ್ಷಣದ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲೇ ಕರಾವಳಿ ಭಾಗದಲ್ಲೇ ಕ್ಯಾಬಿನೆಟ್ ಸಭೆ ನಡೆಸಲಾಗುವುದು.

– ತಾಂತ್ರಿಕ ತಕರಾರುಗಳಿಗೆ ಬ್ರೇಕ್: ಸಿಆರ್‌ಝಡ್ (CRZ) ಮತ್ತು ಅರಣ್ಯ ಇಲಾಖೆಯಿಂದ ಯೋಜನೆಗಳಿಗೆ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳಿಗೆ 15-20 ದಿನಗಳ ಒಳಗಾಗಿ ಪರಿಹಾರದ ವರದಿ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

– ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ: ಹೂಡಿಕೆದಾರರಿಗೆ ಇಲಾಖೆಗಳಿಂದ ಆಗುವ ಕಿರಿಕಿರಿಗಳನ್ನು ತಪ್ಪಿಸಿ, ಸುಗಮ ವ್ಯವಹಾರಕ್ಕಾಗಿ ಏಕ ಗವಾಕ್ಷಿ ಪದ್ಧತಿ ಜಾರಿಗೆ ಒಲವು ತೋರಲಾಗಿದೆ. ಉದ್ಯಮಿಗಳ ಬೇಡಿಕೆಯಂತೆ ಹೆಲಿ ಟೂರಿಸಂಗೆ ಉತ್ತೇಜನ.

– ಉದ್ಯೋಗ ಸೃಷ್ಟಿಗೆ ಆದ್ಯತೆ: ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಈಗಾಗಲೇ ₹718.63 ಕೋಟಿ ಅಂದಾಜು ಹೂಡಿಕೆಯ 45 ಬೃಹತ್ ಯೋಜನೆಗಳನ್ನು ಅನುಮೋದಿಸಲಾಗಿದ್ದು, ಇದರಿಂದ 4,500 ಯುವಕರಿಗೆ ಉದ್ಯೋಗ ಸಿಗಲಿದೆ. ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು.

– ಜಾಗತಿಕವಾಗಿ ನಮ್ಮ ಕರಾವಳಿ : ಕರಾವಳಿಯ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡಲಾಗುವುದು. 

– ಕಲೆ ಮತ್ತು ಸಿನಿಮಾಗೆ ಪ್ರೋತ್ಸಾಹ: ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲಿ ಕರಾವಳಿಯ ಸಿನಿಮಾ, ಜನಪದ ಕಲೆ, ಸಂಗೀತಕ್ಕೆ ಪ್ರಾಶಸ್ತ್ಯ ನೀಡುವ ಬಗ್ಗೆ ಚರ್ಚಿಸಲಾಯಿತು.

ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಧಿಸಲು ಮತ್ತು ಬಂಡವಾಳಗಳನ್ನು ಆಕರ್ಷಿಸಲು ಹೂಡಿಕೆದಾರರಿಗೆ ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಭೆಯಲ್ಲಿ ತಿಳಿಸಿದರು.

error: No Copying!