IMG_-__-_6205_13-1-2020__2_1_20EF2N89.jpg
Spread the love

ದಿನಾಂಕ:02-06-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು: ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಕರ್ನಾಟಕ ಹೈಕೋರ್ಟ್‌ಗೆ ಮುಚ್ಚಳಿಕೆ ಕೊಟ್ಟಿದ್ದಾರೆ. ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಮುಚ್ಚಳಿಕೆ ಕೊಡಲಾಗಿದೆ.

ಉಪ್ಪಳಿಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜನವಾದಿ ಮಹಿಳಾ ಸಂಘಟನೆಯ ಮುಖಂಡೆ ಈಶ್ವರಿ ಪದ್ಮುಂಜ ಅವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಿಸಿದ್ದರು. ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕಲ್ಲಡ್ಕ ಪ್ರಭಾಕರ್ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರಂಭದಲ್ಲಿ, ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆಯನ್ನೂ ನೀಡಿತ್ತು.

ಆ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಲ್ಲಿ ದೂರುದಾರೆಯ ಪರ ಹಿರಿಯ ವಕೀಲ ಎಸ್‌ ಬಾಲನ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಬಾಲನ್, ಕಲ್ಲಡ್ಕ ಪ್ರಭಾಕರ ಭಟ್ ನಿರಂತರವಾಗಿ ಒಂದು ಸಮುದಾಯದ ವಿರುದ್ಧ ದ್ವೇಷಭಾಷಣ ಮಾಡುತ್ತಿದ್ದಾರೆ. ನ್ಯಾಯಾಲಯ ನೀಡಿರುವ ರಕ್ಷಣೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿದರು.

“ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ಧಕ್ಕೆ ತರುವ ರೀತಿಯ ಭಾಷಣಗಳನ್ನು ಅವರು ಪದೇ ಪದೇ ಮಾಡುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ 12 ಎಫ್‌ಐಆರ್‌ಗಳು ದಾಖಲಾಗಿವೆ. ತಡೆಯಾಜ್ಞೆ ಇದ್ದರೂ ವಿವಾದಾತ್ಮಕ ಹೇಳಿಕೆಗಳು ಮುಂದುವರಿದಿವೆ” ಎಂದು ಬಾಲನ್ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಮುಂದುವರೆದು, ಪ್ರಭಾಕರ ಭಟ್ ಅವರ ದ್ವೇಷ ಭಾಷಣದ ಕೆಲವು ಭಾಗಗಳನ್ನು ಓದಿದ ಬಾಲನ್, “ಭಟ್ ವಿರುದ್ಧದ ಪ್ರಕರಣಕ್ಕೆ ನೀಡಲಾಗಿರುವ ತಡೆಯಾಜ್ಞೆಯನ್ನು ರದ್ದುಗೊಳಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೆ ಪ್ರಭಾಕರ ಭಟ್ ದ್ವೇಷಭಾಷಣ ಮಾಡದಂತೆ ನಿರ್ಬಂಧ ವಿಧಿಸಬೇಕು” ಎಂದು ಮನವಿ ಮಾಡಿದರು.

ಪ್ರತಿವಾದ ಮಂಡಿಸಿದ ಕಲ್ಲಡ್ಕ ಪ್ರಭಾಕರ್ ಪರ ವಕೀಲ ಅರುಣ್ ಶ್ಯಾಮ್, “ಪ್ರಭಾಕರ ಭಟ್ ಅವರಿಗೆ 83 ವರ್ಷ ವಯಸ್ಸಾಗಿದೆ. ಈ ಹಂತದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸುವ ಅಗತ್ಯವಿಲ್ಲ. ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಕೊಟ್ಟಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರಭಾಕರ ಭಟ್ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ಮಾಹಿತಿಯನ್ನು ಅರ್ಜಿಯೊಂದಿಗೆ ಜೋಡಿಸುವಂತೆ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.

error: No Copying!