images-25.jpeg
Spread the love

ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ.

ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ.

ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು, ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.

ಅಕ್ಷರ ಲಿಪಿಯ ಸಂಶೋದನೆಯೊಂದಿಗೆ ಓದು ಬರಹ ಸುಲಭವಾಯಿತು.

ಭಾವನೆಗಳ ವ್ಯಕ್ತಪಡಿಸುವಿಕೆ ಕಥೆ, ಕವಿತೆ, ಕಾದಂಬರಿ ಇತ್ಯಾದಿ ಅನೇಕ ರೂಪಗಳಲ್ಲಿ ಹೊರ ಹೊಮ್ಮಲ್ಪಟ್ಟಿತು.

ಸೃಷ್ಟಿಯ ಎಲ್ಲವೂ ಬರವಣಿಗೆಯ ವಸ್ತುವಾಯಿತು.

ಅನುಭವಗಳು, ಅನಿಸಿಕೆಗಳು, ವಾಸ್ತವಗಳು, ಆದರ್ಶಗಳು, ಕಲ್ಪನೆಗಳು ಎಲ್ಲವೂ ಬರಹರೂಪಕ್ಕಿಳಿಯಿತು ಮತ್ತು ಅದರಲ್ಲಿ ಅನುಸರಿಸಿದ್ದ, ಅನುಸರಿಸುತ್ತಿರುವ, ಅನುಸರಿಸಬೇಕಾದ ಎಲ್ಲಾ ಜೀವನ ವಿಧಾನಗಳು ಒಳಗೊಂಡಿರುತ್ತಿದ್ದವು. ಅದನ್ನು ಬರೆಯುತ್ತಿದ್ದವರು ತೀರಾ ಕಡಿಮೆ ಮತ್ತು ನುಡಿದಂತೆ ನಡೆಯುವ ಜನರೇ ಹೆಚ್ಚಿದ್ದರು.

ಬದುಕು ಬರಹ ಸಾಮಾನ್ಯನಾಗಿ ಒಂದೇ ಆಗಿತ್ತು ಮತ್ತು ವಾಸ್ತವವು ಆಗಿದ್ದಿತು.

ಆದರೆ ಆಧುನಿಕ ಶಿಕ್ಷಣ ಪದ್ಧತಿ ಪ್ರಾರಂಭವಾದ ಮೇಲೆ ಬದುಕು ಬರಹದ ಅಂತರ ಜಾಸ್ತಿಯಾಯಿತು.

ಬದುಕಿದಂತೆ ಬರೆಯಬೇಕಿಲ್ಲ, ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿತು.

ಬರಹಗಳ ದಂಧೆ ಶುರುವಾಯಿತು. ಅಕ್ಷರದ ಅಹಂಕಾರ ಹೆಚ್ಚಾಯಿತು.

ಹೊಟ್ಟೆ ಪಾಡನ್ನೂ ಮೀರಿ ಬರಹ ಆತ್ಮತೃಪ್ತಿಗೆ, ಕ್ರಾಂತಿಗೆ, ಬದಲಾವಣೆಗೆ ನಾಂದಿ ಹಾಡಿ
“ಖಡ್ಗಕ್ಕಿಂತ ಲೇಖನಿ ಹರಿತ “ಎಂಬಂತಾದರೂ, ಮುಂದೆ ಅಧಿಕಾರ, ಅಂತಸ್ತು, ಭಟ್ಟಂಗಿತನ, ದುಷ್ಟತನ, ಚಾಕಚಕ್ಯತೆಯಿಂದ ಸಮಾಜವನ್ನು ಒಡೆಯುವ ಸಾಧನವೂ ಆಯಿತು.

ಇನ್ನು ಇತ್ತೀಚಿನ ಆಧುನಿಕ ಮಾಧ್ಯಮಗಳಂತೂ ಮನಸ್ಸುಗಳನ್ನು ಒಡೆದು ಚೂರು ಚೂರು ಮಾಡಿ
ಭಸ್ಮಾಸುರನಂತೆ ಜನರ ಭಾವನೆಗಳನ್ನೇ ನಿಯಂತ್ರಿಸುವ, ಪ್ರಚೋದಿಸುವ ಕೊನೆಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುವಂತೆ ಬೆಳೆದು ನಿಂತಿವೆ..

ಬದುಕು ಮತ್ತು ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಗಿದೆ. ಅದನ್ನು ಸಮರ್ಥಿಸಲೂ ವಿಕೃತ ವಿಚಾರಧಾರೆಗಳು ಸೃಷ್ಡಿಯಾಗಿವೆ. ಇದು ತೀರಾ ಅಪಾಯಕಾರಿ ಬೆಳವಣಿಗೆ.

ಆತ್ಮೀಯರೆ, ಬದುಕು ಮತ್ತು ಬರಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಇಂದಿನ ಸಮಯದಲ್ಲಿ ಅತ್ಯಂತ
ತಾಳ್ಮೆಯಿಂದ ನಾವೆಲ್ಲರೂ ಅದನ್ನು ಸಾಧ್ಯವಾದ ಮಟ್ಟಿಗೆ ಹತ್ತಿರ ತರಲು ಪ್ರಯತ್ನಿಸಬೇಕಿದೆ,

ನಮ್ಮ ಬರಹ ನಮ್ಮ ಬದುಕನ್ನು ಪ್ರತಿಬಿಂಬಿಸುವುದು ಬಹಳ ಕಷ್ಟವಾದರೂ ಆದಷ್ಟು ಹತ್ತಿರ ಇರಬೇಕಿದೆ.

ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಆತ್ಮವಂಚಕ ಮನಸ್ಸುಗಳು ಸಮಾಜ ಕಂಟಕವೇ.

ಪ್ರೀತಿ, ಪ್ರೇಮ, ಕುಟುಂಬ, ದೇಶ, ಧರ್ಮ, ರಾಜಕೀಯ ಇತ್ಯಾದಿ ಯಾವ ವಿಷಯವೇ ಆಗಿರಲಿ ಬರಹ ಮತ್ತು ಬದುಕು ಹತ್ತಿವಾಗಿರಲಿ.

ರಮ್ಯತೆ, ಮನರಂಜನೆ ,ಕಾಲ್ಪನಿಕತೆಗಳೂ
ದಾರಿ ತಪ್ಪಿಸದಿರಲಿ. ಇದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ.

ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ನಿಮ್ಮ ಭಾವನೆಗಳಲ್ಲಿ ಭಕ್ತಿ, ಆಧ್ಯಾತ್ಮ, ದೈವಿಕ ಪ್ರಜ್ಞೆ ತುಂಬಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,

ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರೂ
ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,

ನಿಮ್ಮ ಬರಹಗಳಲ್ಲಿ ಅತ್ಯುತ್ತಮ ಪದ ಲಾಲಿತ್ಯ, ಭಾಷೆಯ ಸೊಗಡು, ಸಾಹಿತ್ಯ ನಲಿದಾಡುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ,

ನಿಮ್ಮ ಪ್ರತಿಭೆ ಯಾವ ಪ್ರಕಾರದ ಕಲೆಯಲ್ಲಾದರೂ ಅರಳುತ್ತಿರಲಿ
ಸತ್ಯದ ಹುಡುಕಾಟ ನಿರಂತರವಾಗಿರಲಿ,

ನಿಮ್ಮ ಜ್ಞಾನದ ಮಟ್ಟ ತುಂಬಿ ಹರಿಯುತ್ತಿದ್ದರೂ
ಸತ್ಯದ ಹುಡುಕಾಟ ನಿರಂತರವಾಗಿರಲಿ‌…….

ಏಕೆಂದರೆ,
ಸತ್ಯ ಮಾತ್ರವೇ ಸೃಷ್ಟಿಯ , ಸಮಾಜದ ತಳಹದಿ,
ಸತ್ಯವೆಂಬುದೇ ಇದೆಲ್ಲದರ ಪ್ರತ್ಯಕ್ಷ ಪರೋಕ್ಷ ಶಕ್ತಿ,

ಸತ್ಯದ ಅಗ್ನಿ ಪರೀಕ್ಷೆಯಲ್ಲಿ ಇವು ಗೆದ್ದು ಬಂದಾಗ ಮಾತ್ರವೇ ಈ ಎಲ್ಲಾ ಸಾಧನೆಗಳಿಗೆ ಅರ್ಥ ಸಿಗುವುದು.

ನಿಮ್ಮ ಆತ್ಮಾವಲೋಕನದ ಮೂಲವೂ ಸತ್ಯವೇ ಆಗಿರಲಿ,

ಸತ್ಯದ ಹುಡುಕಾಟದ ವಿಫಲತೆಯೇ ಇಂದಿನ ಸಮಾಜದ ಬಹುತೇಕ
ಸಮಸ್ಯೆಗಳ ಮೂಲ.

ಅದು ರಾಜಕೀಯವಾಗಿರಲಿ, ಆಡಳಿತವಾಗಿರಲಿ, ಧಾರ್ಮಿಕವಾಗಿರಲಿ.

ಸುಳ್ಳಿನ ಬುದ್ಧಿವಂತಿಕೆಯ ಪ್ರದರ್ಶನ ಹೆಚ್ಚಾಗಿ ಆಚರಣೆಗೆ ಬಂದು
ಮನುಷ್ಯನ ಅಸ್ತಿತ್ವವೇ ಅನುಮಾನಕ್ಕೆ ಒಳಗಾಗಿದೆ.

ಆತನ ವ್ಯಕ್ತಿತ್ವದ
ವಿಶ್ವಾಸಾರ್ಹತೆಯೇ ಪ್ರಶ್ನಾರ್ಥಕವಾಗಿದೆ.

ಇಡೀ ಸಮಾಜ ವಾಸ್ತವಿಕ ಸತ್ಯ ಒಪ್ಪಿಕೊಂಡು ಮುಂದುವರಿದಲ್ಲಿ ,
ಖಂಡಿತವಾಗಿಯೂ ಈಗ ನಮ್ಮನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳು
ತನ್ನಿಂದ ತಾನೇ ಮಾಯವಾಗುತ್ತವೆ.

ಎಲ್ಲರೂ ಸತ್ಯ ಹರಿಶ್ಚಂದ್ರರಂತೆ ಆಗದಿದ್ದರೂ ಕನಿಷ್ಠ
ಅನಾವಶ್ಯಕ ಮತ್ತು ಅಪಾಯಕಾರಿ ಸುಳ್ಳುಗಳಿಂದ ದೂರವಿದ್ದರೂ ಸಾಕು,

ಅದೇ ನಮ್ಮ ವ್ಯಕ್ತಿತ್ವ ಉತ್ತಮಗೊಳ್ಳಲು ಮತ್ತು ಸಾಕಷ್ಟು ನೆಮ್ಮದಿಯ, ಬದುಕಿಗೆ ಸಹಕಾರಿಯಾಗುತ್ತದೆ.

ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ.

ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

ಸಾರ್ವಕಾಲಿಕ ಸತ್ಯ, ತಾತ್ಕಾಲಿಕ ಸತ್ಯ, ಘಟನೆಯ ಸತ್ಯ,
ಸಾಂದರ್ಭಿಕ ಸತ್ಯ, ಅರಿವಿನ ಸತ್ಯ, ಊಹಾತ್ಮಕ ಸತ್ಯ, ವ್ಯಾವಹಾರಿಕ ಸತ್ಯ, ಭಕ್ತಿ ಭಾವಗಳ ಸತ್ಯ, ವೈಚಾರಿಕ ಸತ್ಯ, ಈ ಕ್ಷಣದ ಸತ್ಯ, ವಾಸ್ತವಿಕ ಸತ್ಯ……

ಹೀಗೆ ಸತ್ಯವೂ ಒಂದಷ್ಟು ರೂಪದಲ್ಲಿ ಸಿಗುತ್ತದೆ. ಸಮಗ್ರ ಚಿಂತನೆಯಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!