ಉಡುಪಿ : ದಿನಾಂಕ:28-05-2026 (ಹಾಯ್ ಉಡುಪಿ ನ್ಯೂಸ್) ಕುಂದಾಪುರ ತಾಲೂಕು, ವಂಡ್ಸೆ ಹೋಬಳಿ , ಹೊಸೂರು ಗ್ರಾಮದ ಸರ್ವೆ ನಂಬರ್ 141 ರ ಸರ್ಕಾರಿ ಜಮೀನು ಅತಿಕ್ರಮಣಕ್ಕೆ ಸಹಕರಿಸಿದ ಕಂದಾಯ ನಿರೀಕ್ಷಕ (FDA) ರಾಘವೇಂದ್ರ ಮತ್ತು ಕುಂದಾಪುರ ತಹಶೀಲ್ದಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಹಾಗೂ ಅಕ್ರಮ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಹೋರಾಟಗಾರ್ತಿ ನಾಗರತ್ನ ಎಂಬವರು ಕುಂದಾಪುರ ಸಹಾಯಕ ಕಮಿಷನರ್ ಅವರ ಕಛೇರಿಯ ಮುಂದೆ ಒಲೆ ಹಚ್ಚಿ ಅನ್ನ ಬೇಯಿಸುವ ಮೂಲಕ ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ಮತ್ತು ಗಾಢ ನಿದ್ರೆ ಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುವ ಪ್ರಯತ್ನ ವಾಗಿ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿ ಹೊಸೂರು ಗ್ರಾಮದ ಸರ್ವೆ ನಂಬರ್ 141 ರ ಸರ್ಕಾರಿ ಜಮೀನನ್ನು ಉಳಿಸಲು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಸಹಾಯಕ ಕಮಿಷನರ್ ಅವರ ಗಮನಕ್ಕೆ ಧರಣಿ ನಿರತರು ತಂದಿದ್ದಾರೆ.
1. *ಹಿನ್ನೆಲೆ ಮತ್ತು ಸ್ಥಳೀಯರ ಬೇಡಿಕೆ:
ಹೊಸೂರು ಗ್ರಾಮದ ಸರ್ವೆ ನಂಬರ್ 141 ರ ಜಮೀನಿನಲ್ಲಿ ಸ್ಥಳೀಯ ನಿವಾಸಿಗಳ ಹಿತದೃಷ್ಟಿಯಿಂದ ಸರ್ಕಾರಿ ಸ್ಮಶಾನ ನಿರ್ಮಿಸಿಕೊಡಬೇಕೆಂದು ಸಾರ್ವಜನಿಕರು ಬಹಳ ಹಿಂದಿನಿಂದಲೇ ಕಂದಾಯ ಇಲಾಖೆಗೆ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ.
2. ಅಕ್ರಮ ಅತಿಕ್ರಮಣ ಮತ್ತು ಸ್ಥಳೀಯರ ಪ್ರತಿರೋಧ :
ಸದರಿ ಸರ್ಕಾರಿ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಗಣಪು ಶೆಡ್ತಿ ಮತ್ತು ಮಂಜುಳಾ ಶೆಡ್ತಿ ಎಂಬುವವರು ಜಾಗಕ್ಕೆ ಬೇಲಿ ನಿರ್ಮಿಸಲು ಮುಂದಾದರು. ಈ ಬಗ್ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ, ಬೇಲಿ ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದರು.
ತದನಂತರ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರೂ, ಅತಿಕ್ರಮಣದಾರರು ಅದೇ ಒತ್ತುವರಿ ಜಾಗದಲ್ಲಿ ಎರಡು ಪ್ರತ್ಯೇಕ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಗ್ರಾಮಸ್ಥರ ತೀವ್ರ ಪ್ರತಿಭಟನೆಯ ನಂತರ ಅಧಿಕಾರಿಗಳು ಬಂದು ಇದೊಂದು “ಸರ್ಕಾರಿ ಜಾಗ” ಎಂದು ನೋಟೀಸು ಅಂಟಿಸಿದ್ದರು.
ಆದರೆ, ಅತಿಕ್ರಮಣದಾರರು ಕಾನೂನಿಗೆ ಕಿಂಚಿತ್ತೂ ಗೌರವ ನೀಡದೆ, ಅಧಿಕಾರಿಗಳು ಅಂಟಿಸಿದ್ದ ಸರ್ಕಾರಿ ನೋಟೀಸನ್ನು ಕಿತ್ತು ಬಿಸಾಡಿ, ಕಟ್ಟಡ ಕಾಮಗಾರಿಯನ್ನು ಮುಂದುವರಿಸಿ ಇತ್ತೀಚೆಗೆ ಗೃಹಪ್ರವೇಶವನ್ನೂ ನೆರವೇರಿಸಿದ್ದಾರೆ.
3. ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ( FDA) ರಾಘವೇಂದ್ರ ರವರ ಭ್ರಷ್ಟಾಚಾರ ಮತ್ತು ಬೆದರಿಕೆ :
ಈ ಅಕ್ರಮ ಕಾಮಗಾರಿ ನಡೆಯುತ್ತಿರುವಾಗ ಹಂತ ಹಂತವಾಗಿ ಪ್ರತಿಯೊಂದು ಬಾರಿಯೂ ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕರಾದ FDA ರಾಘವೇಂದ್ರ ಅವರ ಗಮನಕ್ಕೆ ತರಲಾಗಿತ್ತು. ಆದರೆ ಅವರು ಕೇವಲ ಸ್ಥಳಕ್ಕೆ ಬಂದಂತೆ ನಟಿಸಿ, ಅಕ್ರಮ ಕಟ್ಟಡದ ಪ್ರಾರಂಭದಿಂದ ಕೊನೆಯವರೆಗೂ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಅತಿಕ್ರಮಣದಾರರಿಗೆ ನೀಡಿದ್ದಾರೆ.
ಅಕ್ರಮವನ್ನು ಪ್ರಶ್ನಿಸಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸುತ್ತಿದ್ದ ನಮ್ಮ (ಹೋರಾಟಗಾರರ) ಮೊಬೈಲ್ ಸಂಖ್ಯೆಗಳನ್ನು ಇವರು ಬ್ಲಾಕ್ ಲಿಸ್ಟ್‌ಗೆ ಹಾಕಿದ್ದಾರೆ. ಸರ್ಕಾರಿ ಜಾಗ ಉಳಿಸುವ ಸಾರ್ವಜನಿಕರ ಮನವಿಗೆ ಸ್ಪಂದಿಸದೆ, ಅತಿಕ್ರಮಣದಾರರ ಬೆನ್ನಿಗೆ ನಿಂತು ಗೃಹಪ್ರವೇಶ ಆಗುವವರೆಗೂ ಸಹಕರಿಸಿದ್ದಾರೆ.
ಈ ಬಗ್ಗೆ ಕೇಳಲು ಕಚೇರಿಗೆ ಹೋದರೆ, “ನಿಮ್ಮ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು ಹಾಕಿ ಜೈಲಿಗೆ ಕಳಿಸುತ್ತೇನೆ” ಎಂದು ನಮಗೆ ನೇರ ಬೆದರಿಕೆ ಒಡ್ಡಿದ್ದಾರೆ. ಜೊತೆಗೆ ತಮ್ಮ ಮೇಲಾಧಿಕಾರಿಗಳಿಗೆ ಈ ಪ್ರಕರಣದ ಕುರಿತು ತಪ್ಪು ಮಾಹಿತಿ ನೀಡಿ, ಪ್ರಕರಣದ ಗಂಭೀರತೆಯನ್ನು ಮರೆಮಾಚುವ ಕೆಲಸ ಮಾಡಿದ್ದಾರೆ.
4. ಕುಂದಾಪುರ ತಹಶೀಲ್ದಾರ್ ರವರ ಕರ್ತವ್ಯ ಲೋಪ ಮತ್ತು ಕಾನೂನು ದುರುಪಯೋಗ :
ಅತಿಕ್ರಮಣಗೊಂಡ ಜಾಗದಲ್ಲಿ ಯಾವುದೇ ಕೃಷಿ ಚಟುವಟಿಕೆಗಳು ಇಲ್ಲದೇ ಇರುವುದನ್ನು ಖುದ್ದು ಕುಂದಾಪುರ ತಹಶೀಲ್ದಾರ್ ರವರೇ ಸ್ಥಳ ಮಹಜರು ಮಾಡಿ ದೃಢಪಡಿಸಿಕೊಂಡಿದ್ದರು.
ಆದಾಗ್ಯೂ, ಮಂಜುಳಾ ಶೆಡ್ತಿ ಮತ್ತು ಗಣಪು ಶೆಡ್ತಿ ರವರು “ಅಕ್ರಮ ಸಕ್ರಮ ಅಡಿಯಲ್ಲಿ ಮಂಜೂರಾತಿ ವಿಳಂಬವಾಗುತ್ತಿದೆ” ಎಂದು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದಾಗ, ಮಾನ್ಯ ನ್ಯಾಯಾಲಯವು ಕುಂದಾಪುರ ತಹಶೀಲ್ದಾರ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಾವೈಸ್ ರಿಪೋರ್ಟ್ (Para-wise Report) ನೀಡುವಂತೆ ನೋಟೀಸ್ ಜಾರಿ ಮಾಡಿತ್ತು.
ಆದರೆ ಕುಂದಾಪುರ ತಹಶೀಲ್ದಾರ್ ರವರು ಮಾನ್ಯ ಉಚ್ಛ ನ್ಯಾಯಾಲಯ ನಿಗದಿಪಡಿಸಿದ ದಿನಾಂಕದೊಳಗೆ ವರದಿ ಸಲ್ಲಿಸದೇ, ಸರ್ಕಾರಿ ಭೂಮಿ ಅತಿಕ್ರಮಣದಾರರ ಪರವಾಗಿ ನಿಂತು ಅವರು ಭೂಮಿ ಕಬಳಿಸಲು ಪರೋಕ್ಷವಾಗಿ ಸಹಕರಿಸಿದ್ದಾರೆ.
ಮುಖ್ಯ ಕೋರಿಕೆ / ಹಕ್ಕೋತ್ತಾಯಗಳು:
ಸರ್ಕಾರಿ ಭೂಮಿಯನ್ನು ಉಳಿಸಿ ಸಾರ್ವಜನಿಕ ಯೋಜನೆಗಳಿಗೆ ಬಳಸಿಕೊಳ್ಳಬೇಕಾದ ಜವಾಬ್ದಾರಿಯುತ ಅಧಿಕಾರಿಗಳೇ ಕಾನೂನಿನ ವಿರುದ್ಧವಾಗಿ ನಡೆದುಕೊಂಡಿರುವುದು ಖಂಡನೀಯ. ಆದ್ದರಿಂದ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತೇವೆ:
ಸರ್ಕಾರಿ ಜಮೀನು ಅತಿಕ್ರಮಣ ಮಾಡಲು ಸಂಪೂರ್ಣ ಸಹಕಾರ ನೀಡಿ, ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ FDA ರಾಘವೇಂದ್ರ ರವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು.
ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಸಕಾಲದಲ್ಲಿ ವರದಿ ನೀಡದೆ ಅತಿಕ್ರಮಣದಾರರಿಗೆ ಸಹಕರಿಸಿದ ಕುಂದಾಪುರ ತಹಶೀಲ್ದಾರ್ ರವರ ಮೇಲೆ ಸೂಕ್ತ ಕಾನೂನು ಹಾಗೂ ಶಿಸ್ತು ಕ್ರಮ ಜರುಗಿಸಬೇಕು.
ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹೊಸೂರು ಗ್ರಾಮದ ಸರ್ವೆ ನಂಬರ್ 141 ರಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗಣಪ ಶೆಡ್ತಿ ಮತ್ತು ಮಂಜುಳಾ ಶೆಡ್ತಿ ಯವರ ಎರಡೂ ಅಕ್ರಮ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ, ಸದರಿ ಜಾಗವನ್ನು ಸರ್ಕಾರಿ ಸ್ವಾಧೀನಕ್ಕೆ ಪಡೆಯಬೇಕು.
ಈ ನ್ಯಾಯಯುತ ಬೇಡಿಕೆಗಳು ತಕ್ಷಣವೇ ಈಡೇರದಿದ್ದಲ್ಲಿ ನಮ್ಮ ವಿಭಿನ್ನ ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ದಲಿತ ನಾಯಕಿ ನಾಗರತ್ನ
ಎಚ್ಚರಿಸಿದ್ದಾರೆ.

