ದಿನಾಂಕ:26-05-2026(ಹಾಯ್ ಉಡುಪಿ ನ್ಯೂಸ್)
ಮಂಗಳೂರು: ಆಧ್ಯಾತ್ಮ ಜಗತ್ತಿನ ಸಂತರುಗಳ ಪೈಕಿ ಪ್ರಮುಖರಾದ ಅಮ್ಮ ಖ್ಯಾತಿಯ “ಮಾತಾ ಅಮೃತಾನಂದಮಯಿ ದೇವಿ” ಅವರು ಬರೋಬ್ಬರಿ ಏಳು ವರ್ಷದ ನಂತರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೇ 28 ಹಾಗೂ 29ರಂದು ಎರಡು ದಿನಗಳ ಕಾಲ “ಅಮೃತ ಸಂಗಮ 2026” ಇದರ ಅಡಿಯಲ್ಲಿ ಅನೇಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಕೊಳ್ಳಲಿದ್ದಾರೆಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಬೋಳೂರು ಸುಲ್ತಾನ್ ಬತ್ತೇರಿಯಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ನಲವತ್ತಕ್ಕೂ ಹೆಚ್ಚು ದೇಶಗಳಿಂದ ಸುಮಾರು 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಅಮ್ಮನವರ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ದೇಶದ ಅನೇಕ ಕಡೆಯಿಂದ ಭಕ್ತರು ಹಾಗೂ ಆಧ್ಯಾತ್ಮಿಕ ಒಲವು ಹೊಂದಿರುವಂತವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ತಂಡೋಪತಂಡವಾಗಿ ಆಗಮಿಸಲಿದ್ದಾರೆ. ಒಟ್ಟಾರೆ, ಎರಡು ದಿನದಲ್ಲಿ ಸುಮಾರು 50,000 ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಎರಡು ದಿನಗಳ ಕಾಲ, ಮುಂಜಾನೆ 5:45 ರಿಂದ ಪ್ರಾರಂಭವಾಗುವ ಕಾರ್ಯಕ್ರಮಗಳು ನಿರಂತರವಾಗಿ ಸಂಜೆ 8 ಗಂಟೆಯವರೆಗೆ ವಿವಿಧ ಧಾರ್ಮಿಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ. ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದ ಸಮಿತಿಯ ಪದಾಧಿಕಾರಿಗಳು, ಎರಡು ದಿನಗಳ ಕಾಲ ಮಧ್ಯಾಹ್ನ ಹಾಗೂ ಸಂಜೆ ಊಟದ ವ್ಯವಸ್ಥೆಯು ಇಲ್ಲಿರಲಿದೆ. ಬರುವ ಭಕ್ತಾದಿಗಳಿಗೆ ಯಾವುದೇ ಅನಾನುಕೂಲತೆ ಆಗದ ಹಾಗೆ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಬಸ್ಸಿನ ವ್ಯವಸ್ಥೆ ಹಾಗೂ ದೂರದಿಂದ ಬರುವವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಪದಾಧಿಕಾರಿಗಳು ಸ್ಪಷ್ಟಪಡಿಸಿದರು.
ಒಟ್ಟು 22 ಬ್ರಹ್ಮ ಸ್ಥಾನಗಳನ್ನು ಭಾರತದಲ್ಲಿ ಅಮ್ಮನವರು ಸ್ಥಾಪಿಸಿದ್ದಾರೆ ಆ 22ರಲ್ಲಿ 19ನೇ ಬ್ರಹ್ಮ ಸ್ಥಾನವೇ ಮಂಗಳೂರಿನಲ್ಲಿರುವ ಈ ಬ್ರಹ್ಮ ಸ್ಥಾನ ಎಂದು ಹೇಳಿದ ಸಮಿತಿಯ ಪದಾಧಿಕಾರಿಗಳು, ಇಲ್ಲಿ ವಿಶೇಷ ಪೂಜೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು. ಅದರಲ್ಲೂ ಹೆಚ್ಚಾಗಿ 28ರಂದು ರಾಹು ದೋಷ ನಿವಾರಣ ಪೂಜೆ ನಡೆಯಲಿದೆ. 29ರಂದು ಶನಿ ದೋಷ ನಿವಾರಣಾ ಪೂಜೆ ನಡೆಯಲಿದೆ. ಬ್ರಹ್ಮ ಸ್ಥಾನದಲ್ಲಿ ನಡೆಯುವ ದೋಷ ನಿವಾರಣ ಪೂಜೆಯು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಹಾಗಾಗಿ ಭಕ್ತರು ಇಲ್ಲಿ ನಡೆಯುವ ದೋಷ ನಿವಾರಣ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯವಾಗಿ ಅಮ್ಮನವರ ಆಶೀರ್ವಾದ ಪಡೆಯಲು ಪ್ರಪಂಚಾದ್ಯಂತದ ಭಕ್ತರು ಹಾತೊರೆಯುತ್ತಾರೆ. ನಾವು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ ಟೋಕನ್ ಸಿಸ್ಟಮ್ ಮಾಡಿದ್ದೇವೆ. ಯಾರು ಮೊದಲಿಗೆ ಬಂದು ಎಂಟ್ರಿ ಮಾಡಿಸುತ್ತಾರೋ, ಆ ಒಂದು ಸರತಿಯಂತೆ ಅಮ್ಮನವರ ದರ್ಶನಕ್ಕೆ ಟೋಕನ್ ದೊರಕಲಿದೆ. ಮೊದಲ ಬಾಂಧವರಿಗೆ ಮೊದಲ ದರ್ಶನ ಆ ರೀತಿಯ ಪ್ರಕಾರ ಅಮ್ಮನವರ ದರ್ಶನ ಹಾಗೂ ಆಶೀರ್ವಾದ ಪಡೆಯಲು ಭಕ್ತರಿಗೆ ಅನುಕೂಲತೆಯನ್ನು ಒದಗಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ಸುರೇಶ್ ಅಮೀನ್, ಉಪಾಧ್ಯಕ್ಷರಾದ ಡಾಕ್ಟರ್ ಜೀವರಾಜ್ ಸೊರಕೆ, ಸಿಎ ವಾಮನ್ ಕಾಮತ್, ವಸಂತ್ ಕುಮಾರ್ ಪೆರ್ಲ, ಸಿಎ ರಾಮನಾಥ್ ಹಾಗೂ ಅಡ್ವಕೇಟ್ ಸ್ವಸ್ತಿ ಶೆಟ್ಟಿ ಉಪಸ್ಥಿತರಿದ್ದರು.
