Spread the love

ಮನಸ್ಸುಗಳು ಒಡೆದಿವೆ. ಈಗ ಬಾಕಿ ಇರುವುದು ದೇಶ ಮತ್ತೊಮ್ಮೆ ವಿಭಜನೆ ಯಾವಾಗ ಎಂಬುದು ಮಾತ್ರ. ಅದು ಆಗಬಹುದೇ ?……

ಕರ್ನಾಟಕದ ಸದ್ಯದ ಬೆಳವಣಿಗೆಗಳು ಅದಕ್ಕೆ ಪೂರಕವಾಗಿವೆಯೇ ? ದೀರ್ಘಕಾಲದಲ್ಲಿ ಇದರ ಪರಿಣಾಮಗಳೇನು ?

ಇತಿಹಾಸದ ಅನುಭವದಿಂದ ಸ್ವಲ್ಪ ಆಳವಾಗಿ ಯೋಚಿಸಿ ನೋಡಿ……

ಹೆಡಗೇವಾರ್ – ಬಸವಣ್ಣ – ಲಂಕೇಶ್ – ಭಗತ್‌‌ ಸಿಂಗ್‌‌, ನಾರಾಯಣ ಗುರು……..

ಯಾರು ಹಿತವರು ನಿಮಗೆ ಇವರೊಳಗೆ…

ಅನೇಕ ವಿವಾದಗಳ ನಂತರ ಈಗ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. ಮೊದಲ ಬಾರಿಗೆ RSS ಸಂಸ್ಥಾಪಕ ಹೆಡಗೇವಾರ್ ಅವರ ಭಾಷಣವನ್ನು ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಅಳವಡಿಸಲಾಗುತ್ರಿದೆ ಮತ್ತು ಇಲ್ಲಿಯವರೆಗೆ ಇದ್ದ ಕೆಲವು ಪ್ರಸಿದ್ಧ ಚಿಂತಕರ ಬರಹಗಳನ್ನು ಕೈ ಬಿಡಲಾಗುತ್ತಿದೆ.

ಕಟ್ಟಾ ಹಿಂದುತ್ವವಾದಿಗಳು ಇದನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಹಿಂದೂಗಳಿಗೆ ಸಿಗಬೇಕಾದ ಮಾನ್ಯತೆ ಈಗ ದೊರೆಯುತ್ತಿದೆ. ಟಿಪ್ಪು ಸುಲ್ತಾನ್ ಅಕ್ಬರ್ ಬಾಬರ್ ಗಳನ್ನು ಓದುವಾಗ ರಾಷ್ಟ್ರಪ್ರೇಮಿಗಳ ಸಂಸ್ಥೆಯ ಸ್ಥಾಪಕರ ಭಾಷಣ ಪಠ್ಯದಲ್ಲಿ ಸೇರಿಸಿದರೆ ತಪ್ಪೇನು. ಇದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಉಂಟಾಗುತ್ತದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಹಾಗೆಯೇ ಇದನ್ನು ವಿರೋಧಿಸುವವರು ಇದು ಅತ್ಯಂತ ಅಪಾಯಕಾರಿ ಹೆಜ್ಜೆ. ಶಿಕ್ಷಣದಲ್ಲಿ ಸಮಾನತೆ ಸ್ವಾತಂತ್ರ್ಯ ವೈಚಾರಿಕತೆ ಮಾನವೀಯತೆ ಬೆಳೆಸಬೇಕೆ ಹೊರತು ಕೋಮುವಾದವಲ್ಲ. ಇತಿಹಾಸದ ಘಟನೆಗಳನ್ನು ತಿರುಚಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ದೇಶದ ಸಾಮರಸ್ಯಕ್ಕೆ ದೊಡ್ಡ ಕಂಟಕವಾಗುತ್ತದೆ. ದೇಶ ವಿಭಜನೆಯ ಬೀಜ ಬಿತ್ತಲಾಗುತ್ತಿದೆ ಎಂದು ಪ್ರತಿಭಟಿಸುತ್ತಿದ್ದಾರೆ..‌‌

ಯಾವ ಪಂಥಕ್ಕೂ ಸೇರದ ಅನೇಕರಿಗೆ ಈಗ ಗೊಂದಲವಾಗುತ್ತಿದೆ. ಹಡಗೇವಾರ್ ಕೂಡ ನಮ್ಮವರೇ ಬಸವಣ್ಣ ಕೂಡ ನಮ್ಮವರೇ, ನಾರಾಯಣ ಗುರು ಕೂಡ ನಮ್ಮವರೇ ಆದರೂ ಈ ವಿವಾದ ಏಕೆ ಎಂದು….

ಎಡಪಂಥೀಯ ಮತ್ತು ಬಲಪಂಥೀಯ ಸಂಘರ್ಷದಲ್ಲಿ ದೇಶಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ಈ ಸಮಸ್ಯೆಯ ಮೂಲ ಕೂಡ ಇದರಲ್ಲಿಯೇ ಅಡಗಿದೆ. ಇಲ್ಲಿ ‌ಪಠ್ಯ ಪುಸ್ತಕ ಅಥವಾ ಶಿಕ್ಷಣ ಅಥವಾ ದೇಶಪ್ರೇಮ ಮುಖ್ಯವಾಗುತ್ತಿಲ್ಲ. ಓಟುಗಳು, ರಾಜಕೀಯ, ಅಧಿಕಾರ ಮತ್ತು ತಮ್ಮ ಸಿದ್ದಾಂತಗಳ ಪ್ರಚಾರ ಇಷ್ಟೇ ಇದರ ನಿಜವಾದ ಉದ್ದೇಶ. ಮತ್ತೆಲ್ಲವೂ ಮುಖವಾಡ ಮಾತ್ರ.

ಒಂದು ವೇಳೆ ನಾವು ಹೆಡಗೇವಾರ್ ಅವರ ಪಠ್ಯವನ್ನು ಬೆಂಬಲಿಸಿದರೆ ಬಲಪಂಥೀಯ ಅಂತಲೂ ವಿರೋಧಿಸಿದರೆ ಎಡಪಂಥೀಯ ಅಂತಲೂ ಬ್ರಾಂಡ್‌ ಮಾಡಲಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬರಿಗೆ ಪ್ರೀತಿ ಇನ್ನೊಬ್ಬರಿಗೆ ದ್ವೇಷ. ಎರಡು ಇಲ್ಲದಿದ್ದರೆ ಅವಕಾಶವಾದಿ ಎಡಬಿಡಂಗಿ ಅಸ್ಪಷ್ಟ ಸೈದ್ಧಾಂತಿಕ ನಿಲುವಿಲ್ಲದ ನಿಷ್ಪ್ರಯೋಜಕ ಎಂದು ಕರೆಯಲಾಗುತ್ತದೆ.

ಹಾಗಾದರೆ ನಮಗೆ ಬೇರೆ ಆಯ್ಕೆಗಳು ಇಲ್ಲವೇ, ಎಲ್ಲಾ ಸಮನ್ವಯದ ಹಾದಿಗಳು ಮುಚ್ಚಲಾಗಿದೆಯೇ, ಇದು ನಿಜವೇ ಆದರೆ ಮುಂದೊಂದು ದಿನ ದೇಶ ವಿಭಜನೆಯ ಕೂಗು ಕೇಳಲಾರದೇ ?

ಪ್ರೀತಿಯ – ಸಾಮರಸ್ಯದ – ಅಭಿವೃದ್ಧಿಯ ದೇಶ ಕಟ್ಟುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವ ಎರಡೂ ಪಂಥದವರು ಸಂಘಟನೆ ಮತ್ತು ರಾಜಕೀಯ ವಿಷಯ ಬಂದಾಗ ಒಬ್ಬರಿಗೊಬ್ಬರು ಕೊಲ್ಲುವಷ್ಟು ದ್ವೇಷ ಅಸೂಯೆ ಪ್ರಕಟಿಸುತ್ತಾರೆ. ಇಬ್ಬರ ನಡುವೆ ಹೊಂದಾಣಿಕೆ ಅಸಾಧ್ಯ, ಎರಡೂ ವಿರುದ್ಧ ಧ್ರುವಗಳು ಎಂದೇ ಭಾವಿಸುತ್ತಾರೆ. ಅಧಿಕಾರದ ದೃಷ್ಟಿಯಿಂದ ಯಾರ ಕೈ ಮೇಲಾಗುತ್ತದೋ ಅವರು ತಮ್ಮ ಸಿದ್ದಾಂತಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲಾ ಕಡೆ ಹರಡಲು ಪ್ರಯತ್ನಿಸುತ್ತಾರೆ. ಇನ್ನೊಬ್ಬರು ಅದನ್ನು ಶಕ್ತಿ ಮೀರಿ ವಿರೋಧಿಸುತ್ತಾರೆ. ಅದರ ಒಂದು ಭಾಗ ಈ ಪಠ್ಯ ಪುಸ್ತಕ ಪರಿಷ್ಕರಣೆ ಮತ್ತು ಹೆಡಗೇವಾರ್ ಭಾಷಣ ಪಠ್ಯದಲ್ಲಿ ಸೇರ್ಪಡೆ ಲಂಕೇಶ್ ಮುಂತಾದವರ ಪಠ್ಯ ತಿರಸ್ಕಾರ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ……

ಮುಂದೇನು ? ಇದಕ್ಕೆ ಬಿಡುಗಡೆಯ ಭಾಗ್ಯ ಇಲ್ಲವೇ ?
ಎಡಬಲದ ಸಂಘರ್ಷ ನಿರಂತರವೇ ? ಕೆಲವು ವಿಷಯಗಳಲ್ಲಿ ಈ ಪಂಥಗಳವರು ಎಷ್ಟು ಪಕ್ಷಪಾತಿಗಳು ಮತ್ತು ನಿರ್ವೀಯರೆಂದರೆ ಬಲಪಂಥೀಯರು ಬೆಲೆ ಏರಿಕೆ, ನಿರುದ್ಯೋಗ, ಜಾತಿ ಆಧಾರಿತ ಕೊಲೆಗಳು ಮುಂತಾದ ಸಾಮಾನ್ಯ ಜನರ ಕಡು ಕಷ್ಟಗಳನ್ನು ಸಹ ಪಂಥದ ಆಧಾರದ ಮೇಲೆ ಸಮರ್ಥಿಸಿಕೊಳ್ಳುತ್ತಾರೆ. ಅದಾನಿ ಎಂಬ ವ್ಯಕ್ತಿ ಬಹಳ ಕಡಿಮೆ ಸಮಯದಲ್ಲಿ ವಿಶ್ವದ ಐದನೆಯ ಶ್ರೀಮಂತ ವ್ಯಕ್ತಿಯಾಗಿ ಬೆಳೆಯುತ್ತಿರುವುದು ಹೇಗೆ ಎಂಬುದನ್ನು ವಿಮರ್ಶಿಸದೆ ಕುರುಡಾಗಿ ಒಪ್ಪಿಕೊಳ್ಳುತ್ತಾರೆ…

ಹಾಗೆಯೇ ಕೆಲವು ವಿಷಯಗಳಲ್ಲಿ ಎಡಪಂಥೀಯರು ಸಾರ್ವತ್ರಿಕ ಸತ್ಯಗಳನ್ನು ಧೈರ್ಯವಾಗಿ ಒಪ್ಪಿಕೊಳ್ಳದೆ ಪಕ್ಷಪಾತ ತೋರಿಸುತ್ತಾರೆ. ನ್ಯಾಯದ ಮಾನದಂಡಗಳನ್ನು ನೇರವಾಗಿ ಹೇಳುವುದಿಲ್ಲ. ಜನಸಾಮಾನ್ಯರ ಭಾವನೆಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ತೀರಾ ಹಠಕ್ಕೆ ಬಿದ್ದು ಬಲಪಂಥೀಯರ ಜೊತೆ ಸಮನ್ವಯ ಸಾಧಿಸುವ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಹಿಂಸೆಗೆ ಪ್ರಚೋದಿಸುವುದು ಇದೆ.

ಇಂತಹ ಸನ್ನಿವೇಶದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಯ ಬಗ್ಗೆ ಖಚಿತ ನಿಲುವು ಹೇಗಿರಬೇಕು. ಏಕೆಂದರೆ ಕಾನೂನಾತ್ಮಕವಾಗಿ ಸರ್ಕಾರಕ್ಕೆ ಅಧಿಕಾರ ಇದೆ ಮತ್ತು ಅದಕ್ಕೆ ಜನಪ್ರಿಯತೆಯ ಬೆಂಬಲವೂ ಇದೆ. ಹಾಗೆಯೇ ಜನಪ್ರಿಯತೆಯೇ ಸತ್ಯವಲ್ಲ. ಸಾಮಾನ್ಯ ಜನರಿಗೆ ರಾಜಕೀಯದ ಒಳಮರ್ಮ ಮತ್ತು ಧಾರ್ಮಿಕ ಮತಾಂಧತೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ.

ಪಠ್ಯ ಪುಸ್ತಕ ಎಂದರೇನು ?

ಪಠ್ಯ ಪುಸ್ತಕ ಎಂಬುದು ಹಾಳೆಯ ಮೇಲಿನ ಅಕ್ಷರಗಳಲ್ಲ, ಅಂಕಗಳಿಗಾಗಿ ಇರುವ ಪಾಠಗಳಲ್ಲ, ಉದ್ಯೋಗಕ್ಕಾಗಿ ಇರುವ ಶಿಕ್ಷಣ ಕ್ರಮವಲ್ಲ.

ಪಠ್ಯ ಪುಸ್ತಕ ಎಂದರೆ,…
ಅದು ನೆಲ ಸಂಸ್ಕೃತಿಯ ವಾಹಕ, ಮಾನವೀಯತೆಯ ಬೆಳವಣಿಗೆಯ ಸಾಧನ, ದೇಶದ ಅಭಿವೃದ್ಧಿಯ ಸೂತ್ರ, ಸಮಾಜದ ಜೀವನ ವಿಧಾನ, ಶಿಕ್ಷಣದ ಅಡಿಪಾಯ, ನಮ್ಮೆಲ್ಲರ ಬದುಕಿನ ಮಾರ್ಗದರ್ಶಕ….

ಇಷ್ಟೆಲ್ಲಾ ಮಹತ್ವದ ಪಠ್ಯಪುಸ್ತಕವನ್ನು ಸಿದ್ಧಪಡಿಸುವುದು ಮತ್ತು ಪರಿಷ್ಕರಿಸಲು ಎಷ್ಟೊಂದು ಜ್ಞಾನ, ಎಷ್ಟೊಂದು ತಾಳ್ಮೆ, ಎಷ್ಟೊಂದು ವಿಶಾಲ ಮನಸ್ಸು, ಎಷ್ಟೊಂದು ಅಧ್ಯಯನ, ಎಷ್ಟೊಂದು ಚಿಂತನೆ, ಎಷ್ಟೊಂದು ದೇಶಭಕ್ತಿ, ಎಷ್ಟೊಂದು ದೂರದೃಷ್ಟಿ, ಎಷ್ಟೊಂದು ನಿಷ್ಕಲ್ಮಶ ಮನಸ್ಥಿತಿ ಇರಬೇಕು ಎಂದು ಒಮ್ಮೆ ಯೋಚಿಸಿ.

ಆದರೆ ಈಗಿನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವವರಿಗೆ ಇಡೀ ಸಮಾಜದ ಮತ್ತು ಶೈಕ್ಷಣಿಕ ವ್ಯವಸ್ಥೆಯ ಸಂಪೂರ್ಣ ಮಾಹಿತಿ ಇದೆಯೇ ? ತಾವು ಸೇರಿಸುತ್ತಿರುವ ಪಠ್ಯ ಮತ್ತು ಕೈ ಬಿಡುತ್ತಿರುವ ಪಠ್ಯಗಳ ಮತ್ತು ವ್ಯಕ್ತಿಗಳ ಮಾನವೀಯತೆ ಮತ್ತು ಹೃದಯ ವೈಶಾಲ್ಯತೆಯತೆಯ ಅರಿವು ಇದೆಯೇ ? ಇದರ ಐತಿಹಾಸಿಕ ಮಹತ್ವ ಮತ್ತು ಭವಿಷ್ಯದ ಪರಿಣಾಮವಾಗಳ ಬಗ್ಗೆ ತಿಳಿದಿದೆಯೇ ? ಸಾಮಾಜಿಕ ಜಾಲತಾಣಗಳಲ್ಲಿ ಒಂದು ಅಭಿಪ್ರಾಯ ಮತ್ತು ಕೆಲವು ದ್ವೇಷ ಪೂರಿತ ಮತ್ತು ಒಂದೇ ಸೈದ್ಧಾಂತಿಕ ನಿಲುವುಗಳ ಅಂಕಣಗಳನ್ನು ಬರೆದು ಸ್ವಲ್ಪ ಜನಪ್ರಿಯತೆ ಪಡೆದು ಒಂದು ಅಧಿಕಾರ ಗಿಟ್ಟಿಸಿದ ಮಾತ್ರಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಸಾಮರ್ಥ್ಯ ವೃದ್ಧಿಸುತ್ತದೆಯೇ ?

ದಯವಿಟ್ಟು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಇದನ್ನು ಯೋಚಿಸಬೇಕು. ಇದು ಯಾವುದೋ ಪಕ್ಷದ ಮತ್ತು ಧರ್ಮದ ಅಥವಾ ಸಿದ್ದಾಂತಗಳ ವಿಷಯವಲ್ಲ. ನಮ್ಮ ನಾಡಿನ ನಮ್ಮ ಮಕ್ಕಳ ಭವಿಷ್ಯದ ವಿಷಯ. ಶಿಕ್ಷಣದ ವಿಷಯ. ಇಂದು ಇದೂ ಕೂಡಾ ರಾಜಕೀಯ ಚದುರಂಗದಾಟದಲ್ಲಿ ಮಲಿನವಾದರೆ ಅದನ್ನು ನಾವು ಮೌನವಾಗಿ ಒಪ್ಪಿಕೊಂಡರೆ ನಾಳೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮೇಲ್ನೋಟದ ಸತ್ಯಕ್ಕಿಂತ ಒಳನೋಟ ಮತ್ತು ಸಮಗ್ರ ಚಿಂತನೆಗಳಿಂದ ಮಾತ್ರ ವಾಸ್ತವ ಅರಿವಾಗಲು ಸಾಧ್ಯ. ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರೆ ಅದು ಬೇಜವಾಬ್ದಾರಿ ಹೇಳಿಕೆಯಾಗುತ್ತದೆ.

ನಮಗೆ ಆದರ್ಶ ವ್ಯಕ್ತಿಗಳು ಯಾರು ? ಎಚ್ಚರಿಕೆಯ ವ್ಯಕ್ತಿತ್ವಗಳು ಯಾವುವು ? ಯಾರ ವಿಚಾರಗಳು ನಮ್ಮಲ್ಲಿನ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತದೆ ಎಂಬುದು ಭಾರತದ ಸಾಂಸ್ಕೃತಿಕ ಭವಿಷ್ಯವನ್ನು ನಿರ್ಧರಿಸುತ್ತದೆ. ಅದನ್ನು ಅತ್ಯಂತ ಪ್ರಾಮಾಣಿಕತೆಯಿಂದ ಅಧ್ಯಯನದಿಂದ ಪಠ್ಯಗಳಲ್ಲಿ ಸೇರಿಸಬೇಕು. ಅದಕ್ಕೆ ನಿಷ್ಪಕ್ಷಪಾತ ಪ್ರತಿಭಾವಂತ ದೇಶ ಪ್ರೇಮಿಗಳು ಅವಶ್ಯಕತೆ ಇದೆ. ಇಲ್ಲದಿದ್ದರೆ ಈ ದ್ವೇಷ ಅಸೂಯೆ ಅಧಿಕಾರ ಲಾಲಸೆ ಸೈದ್ಧಾಂತಿಕ ಗುಲಾಮಿತನಗಳು ಮತ್ತೊಮ್ಮೆ ದೇಶ ವಿಭಜನೆಗೆ ಕಾರಣವಾಗಬಹುದು ಎಂದು ಎಚ್ಚರಿಸುತ್ತಾ…..

ಒಂದು ವೇಳೆ ದೇಶ ಸಮಗ್ರವಾಗಿ ಉಳಿಯಬೇಕಾದರೆ ಅತ್ಯಂತ ಜರೂರಾಗಿ ಮತ್ತು ರಾಜಕೀಯವಾಗಿ ಎಡಬಲಗಳ ಮಧ್ಯೆ ಸಮನ್ವಯ ಸಾಧಿಸುವ ಅವಶ್ಯಕತೆ ಇದೆ. ಸಾಮಾನ್ಯರಾದ ನಮಗೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಮುಖ್ಯವಲ್ಲ. ಈ ದೇಶ ಮತ್ತು ಈ ಜನರನ್ನು ಯಾರು ಹೆಚ್ಚು ಸುರಕ್ಷಿತವಾಗಿ ಇಡುತ್ತಾರೆ ಎಂಬುದು ಮುಖ್ಯ. ಕನಿಷ್ಠ ಇದನ್ನಾದರೂ ಗಂಭೀರವಾಗಿ ಯೋಚಿಸಿ. ಒಳಮರ್ಮಗಳನ್ನು ಮುಖವಾಡಗಳನ್ನು ಅರಿಯಿರಿ…..

ಇತರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068………

error: No Copying!