ದಿನಾಂಕ:12-05-2026(ಹಾಯ್ ಉಡುಪಿ ನ್ಯೂಸ್)
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣದ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ “ಪವನ್” ಹೆಸರಿನ ಕ್ಯಾಂಟೀನ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದುದನ್ನು ಬೆಳ್ತಂಗಡಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಕ್ಯಾಂಟೀನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ ಹಾಗೂ ಅವರ ಪರಿಚಯದ ಉಸ್ಮಾನ್ ಎಂಬವರು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಕ್ಯಾಂಟೀನ್‌ನ ಒಳಗಿರುವ ಕೋಣೆಯನ್ನು ಬಳಸಿಕೊಂಡು ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿ ಪರಿಶೀಲನೆ ಮಾಡಿದ ವೇಳೆ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಬಳಿಕ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅ ಕ್ರ ಸಂ. 48/2026ರಡಿ ಐಟಿಪಿ ಆಕ್ಟ್‌ನ ಕಲಂ 3, 4, 5 ಹಾಗೂ ಬಿ.ಎನ್.ಎಸ್ ಕಲಂ 143(2) ಅನ್ವಯ ತನಿಖೆ ಮುಂದುವರಿದಿದೆ.
