IMG-20260507-WA0049.jpg
Spread the love

ಕುಂದಾಪುರ: ದಿನಾಂಕ :08-05-2026 (ಹಾಯ್ ಉಡುಪಿ ನ್ಯೂಸ್) ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಸ್ತು ಅರಣ್ಯ ಪಾಲಕ ಆನಂದ ಬಳೆಗಾರ (48) ಎಂಬವರಿಗೆ ಪರಿಚಿತ ವ್ಯಕ್ತಿಯೊಬ್ಬರು ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಘಟನೆ ಕುಂದಾಪುರ ಸಂಗಂ ಜಂಕ್ಷನ್ ಬಳಿ ನಡೆದಿದೆ.

ಬಸ್ರೂರಿನಿಂದ ಗಂಗೊಳ್ಳಿಗೆ ಪ್ರತಿದಿನ ಕರ್ತವ್ಯಕ್ಕೆ ತೆರಳುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನಂದ ಬಳೆಗಾರ, ದಿನಾಂಕ 01/05/2026 ರಂದು ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ, ಕಚೇರಿ ಗೇಟ್ ಬಳಿ ಸದಾಶಿವ ಕೋಟೆಕಾರ್ ಎಂಬ ವ್ಯಕ್ತಿ ಅಡ್ಡಬಂದು ಅಸಭ್ಯವಾಗಿ ವರ್ತಿಸಿದ್ದಾನೆ .

“ನೀನು ಇಲಾಖೆಯಲ್ಲಿ ದೊಡ್ಡ ವಹಿವಾಟು ಮಾಡುತ್ತಿದ್ದೀಯ, ನಿನ್ನ ಎಲ್ಲಾ ವಿಚಾರ ನನಗೆ ಗೊತ್ತು. ₹25,000 ಹಣ ಕೊಡಬೇಕು, ಇಲ್ಲದಿದ್ದರೆ ನಿನ್ನ ವಿಚಾರಗಳನ್ನು ಬಹಿರಂಗ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ . ಇದಕ್ಕೂ ಮೀರಿ, 06/05/2026 ರಂದು ಮತ್ತೊಮ್ಮೆ ಅದೇ ಸ್ಥಳದಲ್ಲಿ ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ, “ಈಗಲೇ ₹25,000 ಕೊಡಬೇಕು, ಇಲ್ಲದಿದ್ದರೆ ನಿನ್ನ ವಿರುದ್ಧ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದು ಬಹಿರಂಗ ಮಾಡುತ್ತೇನೆ, ಜೀವಕ್ಕೂ ಅಪಾಯ ಉಂಟು ಮಾಡುತ್ತೇನೆ” ಎಂದು ನೇರ ಜೀವ ಬೆದರಿಕೆ ಹಾಕಿದ್ದಾನೆ. ಘಟನೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಆನಂದ ಬಳೆಗಾರ ಜೋರಾಗಿ ಕೂಗಿದ ಹಿನ್ನೆಲೆಯಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆನಂದ ಬಳೆಗಾರ ತಿಳಿಸಿದ್ದಾರೆ.

ಆರೋಪಿ ಸದಾಶಿವ ಕೋಟೆಕಾರ್ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಜೀಪ್ ಚಾಲಕನಾಗಿ ಕೆಲಸ ಮಾಡಿದ್ದನು. ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಆನಂದ ಬಳೆಗಾರ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ದಾಖಲಿಸಿ ಕೊಂಡಿರುವ  ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: No Copying!