ದಿನಾಂಕ:26-04-2026(ಹಾಯ್ ಉಡುಪಿ ನ್ಯೂಸ್)
ಉಡುಪಿ: ನಗರದ ಹೃದಯಭಾಗವಾದ ಸಿಟಿ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಖಾದರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮೊಬೈಲ್ ಮತ್ತು ಇನ್ನಿತರ ಮಳಿಗೆಗಳು ಬೆಂಕಿಗಾಹುತಿಯಾಗಿವೆ.
ಖಾದರ್ ಕಮರ್ಷಿಯಲ್ ಕಟ್ಟಡದ ಕೆಳಮಹಡಿಯಲ್ಲಿದ್ದ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ಕೆಲವೇ ನಿಮಿಷಗಳಲ್ಲಿ ಬೆಂಕಿಯ ಜ್ವಾಲೆ ಇಡೀ ಮಳಿಗೆಯನ್ನು ಆವರಿಸಿಕೊಂಡಿದೆ. ಪರಿಣಾಮವಾಗಿ ಅಂಗಡಿಯಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಫೋನ್‌ಗಳು, ಬಿಡಿಭಾಗಗಳು ಮತ್ತು ಇನ್ನಿತರ ಪರಿಕರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಬಸ್ ನಿಲ್ದಾಣದ ಸನಿಹದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ,ಕಟ್ಟಡದಿಂದ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ಬೆಂಕಿಯ ಜ್ವಾಲೆಗಳು ರಸ್ತೆಗೂ ವ್ಯಾಪಿಸುವಂತೆ ಕಂಡುಬಂದವು. ಅಪಾಯದ ಮುನ್ಸೂಚನೆ ಅರಿತ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಅಗ್ನಿಶಾಮಕ ದಳದ ವಾಹನ ತಡವಾಗಿ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸತತ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾದರು. ಇದರಿಂದಾಗಿ ಪಕ್ಕದ ಇತರ ಮಳಿಗೆಗಳಿಗೆ ಬೆಂಕಿ ಹರಡುವುದು ತಪ್ಪಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
