FB_IMG_1777039076222.jpg
Spread the love

ದಿನಾಂಕ:24-04-2026 (ಹಾಯ್ ಉಡುಪಿ ನ್ಯೂಸ್) ನಟನಾಗಿ, ಗಾಯಕನಾಗಿ ಮಾತ್ರವಲ್ಲ ಕನ್ನಡ ನಾಡು, ನುಡಿಯ ಬಗೆಗೆ ರಾಜ್‌ಕುಮಾರ್ ಅವರಿಗಿದ್ದ ಪ್ರೀತಿ – ಬದ್ಧತೆಗೆ ಅವರೇ ಸಾಟಿ ಎಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಹೇಳಿದರು.

ರಾಜ್‌ಕುಮಾರ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು. ಯಶಸ್ಸು, ಖ್ಯಾತಿ, ಸಂಪತ್ತು ಈ ಎಲ್ಲವೂ ಯಥೇಚ್ಛವಾಗಿ ಬಂದರೂ ರಾಜಣ್ಣನ ವ್ಯಕ್ತಿತ್ವ ಮಾತ್ರ ಬದಲಾಗಲಿಲ್ಲ, ಅವರು ಸಮಾಜಕ್ಕೆ ಮತ್ತಷ್ಟು ಹತ್ತಿರವಾಗುತ್ತಾ ಹೋದರು, ಸುತ್ತಲಿನ ಜನರನ್ನು ಹೆಚ್ಚು ಪ್ರೀತಿಸಲಾರಂಭಿಸಿದರು.

ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವತುಂಬುತ್ತಿದ್ದ ಅವರು ತಮ್ಮ ಅತ್ಯದ್ಭುತ ನಟನೆ, ಸುಮಧುರ ಕಂಠಸಿರಿಯ ಮೂಲಕ ಹಲವು ದಶಕಗಳ ಕಾಲ ಕನ್ನಡದ ಸಿನಿಪ್ರಿಯರನ್ನು ರಂಜಿಸಿದವರು.

ನಡೆ – ನುಡಿಯಲ್ಲೂ ರಾಜಕುಮಾರನಾಗಿ ಬಾಳಿದ ಮಹಾನ್ ಚೇತನಕ್ಕೆ ನನ್ನ ಅಭಿಮಾನಪೂರ್ವಕ ನಮನಗಳು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

error: No Copying!