ಉಡುಪಿ: ದಿನಾಂಕ:18-04-2026(ಹಾಯ್ ಉಡುಪಿ ನ್ಯೂಸ್) ದಾಂಪತ್ಯ ಜೀವನದಲ್ಲಿ ವೈಮನಸ್ಯ ಹೊಂದಿರುವ ಪತಿ ಹಾಗೂ ಪತ್ನಿ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಇದೀಗ ಪತ್ನಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾಳೆ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಪು, ಉಚ್ಚಿಲ ನಿವಾಸಿ ಕಿರಣ್ ಕುಮಾರ್ (42)ಎಂಬವರು ಪಡುಬಿದ್ರಿಯಲ್ಲಿ SEZ ಕಂಪನಿಯಲ್ಲಿ Electrical Engineer ಆಗಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ಇವರು ವನಿತಾ ಎಂಬುವವರೊಂದಿಗೆ 2016 ನೇ ಸಾಲಿನಲ್ಲಿ ಮದುವೆಯಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ-ಬೇರೆ ಯಾಗಿ ಜೀವನ ಸಾಗಿಸುತ್ತಿದ್ದಾರೆ.
ಕಿರಣ್ ಕುಮಾರ್ ಅವರು ಅವರಿಗೆ ಸಂಬಂಧಪಟ್ಟ ದಾಖಲಾತಿಗಳು ಹಾಗೂ IDBI ಬ್ಯಾಂಕ್, ಉಡುಪಿ ಶಾಖೆ ಲಾಕರ್ ಕೀ ಯನ್ನು ಮನೆಯ ಅಲ್ಮಾರಿನಲ್ಲಿ ಇಟ್ಟಿರುತ್ತಾರೆ. ದಿನಾಂಕ : 10/04/2026 ರಂದು ಕಿರಣ್ ಕುಮಾರ್ ರವರು ಕೆಲಸಕ್ಕೆ ಹೋಗಿದ್ದಾಗ ವನಿತಾ ರವರು ಅಲ್ಮಾರವನ್ನು ಕೀ ಮೇಕರ್ ರವರ ಸಹಾಯದಿಂದ ಒಡೆದು ಅದರೊಳಗಿದ್ದ IDBI ಬ್ಯಾಂಕ್ ಲಾಕರ್ ಕೀ ಯನ್ನು ಕಳವು ಮಾಡಿ IDBI ಬ್ಯಾಂಕ್, ಉಡುಪಿ ಶಾಖೆಯಲ್ಲಿ ಲಾಕರ್ ಕೀ ಯನ್ನು ಬಳಸಿ ಕಿರಣ್ ಕುಮಾರ್ ರವರಿಗೆ ಸಂಬಂಧಪಟ್ಟ 169 ಗ್ರಾಂ ಚಿನ್ನ ಅಂದಾಜು ಮೌಲ್ಯ 23,67,690/-ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3) 305 BNS ರಂತೆ ಪ್ರಕರಣ ದಾಖಲಾಗಿದೆ.
