IMG-20260415-WA0076.jpg
Spread the love

ಕುಂದಾಪುರ: ದಿನಾಂಕ :17-04-2026(ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಗ್ರಾಮದ ಸರ್ವೆ ನಂಬರ್ 244 ಮತ್ತು 250 ರ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ ನಿರ್ಮಾಣ ಮತ್ತು ಭೂಕಬಳಿಕೆ ಪ್ರಕರಣ ರಾಜಕೀಯ ಪಕ್ಷಗಳ ನಾಯಕರುಗಳ ಬೆಂಗಾವಲಿನಲ್ಲಿ ನಿರಂತರವಾಗಿ ಅಕ್ರಮ ಕಟ್ಟಡ ನಿರ್ಮಾಣ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಿದ್ದಾಪುರದ ಮಂಗನಸಾಲು ಎಂಬಲ್ಲಿ 2018 ರಿಂದಲೂ ಶ್ರೀಧರ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ಎಂಬವರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸುದರ್ಶನ ಶೆಟ್ಟಿ ಎಂಬವರು ನಿರಂತರವಾಗಿ ದೂರು ನೀಡುತ್ತಾ ಬಂದಿದ್ದಾರೆ.

ಗ್ರಾಮ ಪಂಚಾಯತ್ ಮತ್ತು ತಹಶೀಲ್ದಾರ್ ಅವರು ಹಲವು ಬಾರಿ ನೋಟಿಸ್ ನೀಡಿದ್ದರೂ ಒತ್ತುವರಿದಾರರು ಕಾನೂನಿಗೆ ಬೆಲೆ ನೀಡದೆ ಕಾಮಗಾರಿ ಮುಂದುವರಿಸಿದ್ದಾರೆ.

ಕುಂದಾಪುರ ತಾಲ್ಲೂಕಿನ ಸಿದ್ದಾಪುರದ ಮಂಗನಸಾಲು ಅಕ್ರಮ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಒತ್ತುವರಿದಾರ ಶ್ರೀಧರ್ ಶೆಟ್ಟಿಯ ಬೆನ್ನಿಗೆ ನಿಂತಂತೆ ಕಾಣುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ವಿರುದ್ಧ  ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಲೋಕಾಯುಕ್ತ ದೂರು ದಾಖಲಾಗಿ ಲೋಕಾಯುಕ್ತದಿಂದ ಅಕ್ರಮ ಕಟ್ಟಡ ತೆರವು ಗೊಳಿಸುವ ಆದೇಶ ಹೊರಬಂದ ಬಳಿಕವೂ, ಅಧಿಕಾರಿಗಳು ಪದೇ ಪದೇ ಗಡುವು ನೀಡಿ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಲೋಕಾಯುಕ್ತ ಆದೇಶಕ್ಕೂ ಈ ಪ್ರಕರಣದಲ್ಲಿ ಬೆಲೆಯೇ ಇಲ್ಲ! ಮಾಧ್ಯಮಗಳು ವರದಿ ಮಾಡಿದಂತೆ, ತೆರವು ಕಾರ್ಯಾಚರಣೆಯ ದಿನಾಂಕ ದಂದು ನಾಟಕೀಯವಾಗಿ ನಡೆದಿದ್ದು, ಕಾರ್ಯಾಚರಣೆ ದಿನವೇ ತಹಸೀಲ್ದಾರ್ ರಜೆ, ಗ್ರಾಮ ಆಡಳಿತಾಧಿಕಾರಿ ರಜೆ, ಮತ್ತು ಆರ್.ಐ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ಘಟನೆ ಅನುಮಾನಕ್ಕೆ ಕಾರಣವಾಗಿದೆ.

ನಂತರ ತಹಸೀಲ್ದಾರ್ ತೆರವು ಆದೇಶ ನೀಡಿದರೂ, ಆರ್.ಐ. ಮೆಸ್ಕಾಂ, ಪೊಲೀಸ್ ಇಲಾಖೆಗಳಿಗೆ ಕಾಟಾಚಾರಕ್ಕಾಗಿ ನೋಟಿಸ್ ನೀಡಿದಂತೆ ನಡೆದುಕೊಂಡಿದ್ದಾರೆ. ಆದರೆ ಜೇಸಿಬಿ ಬಳಸದೆ, ಸ್ಥಳಕ್ಕೆ ತೆರಳಿ, ಒತ್ತುವರಿದಾರನೊಂದಿಗೆ ಮಾತುಕತೆ ನಡೆಸಿ, ““ಒತ್ತುವರಿದಾರ ತಾನೇ ತಡೆ ಆಜ್ಞೆ ತಂದಿದ್ದೇನೆ ”ಎಂಬ ಹೇಳಿಕೆಯನ್ನು ವೈಟ್ ಪೇಪರ್‌ನಲ್ಲಿ ಬರೆಯಿಸಿಕೊಂಡು ಸ್ವೀಕರಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

ಇದರ ಜೊತೆಗೆ, ತಹಸೀಲ್ದಾರರಿಗೆ ವಿಷಯ ತಿಳಿಸದೇ, ಸಂಜೆ ವೇಳೆಯಲ್ಲಿ ಮತ್ತೊಂದು ಆದೇಶ ಪ್ರತಿಯನ್ನು ಸಿದ್ಧಪಡಿಸಿ, ತಹಸೀಲ್ದಾರ್ ರಿಂದ ಆರ್. ಐ ರಾಘವೇಂದ್ರ ಮಂಗಳಾರತಿ ಮಾಡಿಸಿಕೊಂಡ ವಿಚಾರ ತಾಲೂಕು ಕಚೇರಿಯ ಒಳಾಂಗಣದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗಿದೆ.

ಕೊನೆಗೂ, ಒತ್ತುವರಿದಾರನಿಗೆ ಸ್ಟೇ ಸಿಗುವಂತೆ ಸಹಕರಿಸಿದ ಆರೋಪಗಳು  ಅಧಿಕಾರಿಗಳ ಮೇಲೆ ಕೇಳಿಬರುತ್ತಿವೆ. ಈ ಪ್ರಕರಣದಲ್ಲಿ ಕೆಲವು ರಾಜಕೀಯ ಫುಡಾರಿಗಳು ಮತ್ತು ಅಧಿಕಾರಿಗಳು ಸೂಟ್ ಕೇಸ್ ಪಡೆದು ಕೊಂಡು ಸರಕಾರಕ್ಕೆ ವಂಚಿಸಿರುವುದಂತೂ ಸತ್ಯ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದರೂ ಖಡಕ್ ಕ್ರಮ ಕೈಗೊಳ್ಳುವರೇ ಎಂದು ದೂರುದಾರರು ಮತ್ತು ಸಾರ್ವಜನಿಕರು ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

error: No Copying!