IMG-20260401-WA0036-1536x864.jpg
Spread the love

ದಿನಾಂಕ:01-04-2026(ಹಾಯ್ ಉಡುಪಿ ನ್ಯೂಸ್)

ಸಿದ್ದಾಪುರ:ಕಾರ್ಮಿಕರ ಹಲವು ಕಾಯ್ದೆಗಳನ್ನು ಮೊಟಕು ಗೊಳಿಸಿ ಎಪ್ರಿಲ್ 01 ರಿಂದ ನಾಲ್ಕು ಲೇಬರ್ ಕೋಡ್ ಜಾರಿ ಮಾಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಕಪ್ಪು ದಿನಾಚರಣೆ ಸಿದ್ದಾಪುರದ ಪೇಟೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ; ಕಾರ್ಮಿಕರ ವರ್ಗ ಕಷ್ಟಪಟ್ಟು ಹೋರಾಟ ನಡೆಸಿ ಪಡೆದ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದು ಪಡಿಸಿ ನೂತನ ಲೇಬರ್ ಕೋಡ್ ತಂದಿರುವುದು ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುವ ನೀತಿಯಾಗಿದೆ ಎಂದು ಹೇಳಿದರು.

ಹೊಸ ಲೇಬರ್ ಕೋಡ್ ಬಹುತೇಕ ಮಾಲೀಕ ವರ್ಗಕ್ಕೆ ಸೂಪರ್ ಲಾಭ ಮತ್ತು ರಕ್ಷಣೆ ಒದಗಿಸುವ ಕಾರ್ಮಿಕ ಕಾಯ್ದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಲೇಬರ್ ಕೋಡ್ ರಾಜ್ಯದಲ್ಲಿ ಜಾರಿಯಾದರೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರದ್ದಾಗಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಪ್ರಿಲ್ 01 ರಿಂದ ಜಾರಿ ಮಾಡಿದರೆ ರಾಜ್ಯದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಪ್ರತಿಭಟನೆಯಲ್ಲಿ ಅನಿಲ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ತಾಲೂಕು ಉಪಾಧ್ಯಕ್ಷರಾದ ಅಲೆಕ್ಸಾಂಡರ್, ಸಿದ್ದಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ರಾಘವೇಂದ್ರ,ಚಕ್ರೇಶ್, ಸುಧಾಕರ ಮೇಸ್ತ್ರಿ, ರತ್ನಾಕರ ರಾವ್ ಸುಕುಮಾರ್ ಉಪಸ್ಥಿತರಿದ್ದರು.
ಅಲೆಕ್ಸಾಂಡರ್ ಸ್ವಾಗತಿಸಿದರು, ರಾಘವೇಂದ್ರ ಆಚಾರ್ಯ ವಂದಿಸಿದರು.

error: No Copying!