ಖಾವಿ, ಟೋಪಿ ಮತ್ತು ಜುಬ್ಬಾ, ಉದ್ದನೆಯ ಬಿಳಿ ನಿಲುವಂಗಿ ಅಥವಾ ಗೌನು ತೊಟ್ಟ ಮಾತ್ರಕ್ಕೆ ನಾವು ಸ್ವಾಮಿ, ಮೌಲ್ವಿ, ಪಾದ್ರಿ ಎನ್ನಬೇಕೆ …….
ಹತ್ತಾರು ಎಕರೆ ಪ್ರದೇಶದಲ್ಲಿ ಆಶ್ರಮ, ಮಂದಿರ, ಮಸೀದಿ, ಚರ್ಚು ಇದ್ದ ಮಾತ್ರಕ್ಕೆ ಇವರನ್ನು ಧರ್ಮ ರಕ್ಷಕರು ಎನ್ನಬೇಕೆ……………
ಅವರವರ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ ಅದರ ಬಗ್ಗೆ ಪ್ರವಚನ ನೀಡಿದ ಮಾತ್ರಕ್ಕೆ, ಇವರ ಕಾಲಿಗೆ ಬಿದ್ದು ಇವರನ್ನು ದೇವರ ಪ್ರತಿನಿಧಿಗಳು ಎಂದೂ, ಅತಿ ಮಾನುಷ ವ್ಯಕ್ತಿಗಳೆಂದು ಗೌರವ ಕೊಡಬೇಕೆ……..
ಈ ಕ್ಷಣದಲ್ಲಿ ನಮ್ಮ ಸಮಾಜದಲ್ಲಿ ಇವರ ವರ್ತನೆಯನ್ನು ನೋಡಿದರೆ ಇವರು ನಮ್ಮ ನಂಬಿಕೆಗೆ ಅರ್ಹರೆ…….
ಕೆಲವರು ಜಾತಿಗೊಬ್ಬ ಸ್ವಾಮಿ, ನೀತಿಗೆಟ್ಟ ಸ್ವಾಮಿ, ಹಿಂಸೆ ಭೋದನೆಯ ಮೌಲ್ವಿ, ಅತ್ಯಾಚಾರಿ ಪಾದ್ರಿಗಳು……….
ಒಬ್ಬ ಸ್ವಾಮಿ ಅತ್ಯಾಚಾರದ ಆರೋಪಿ, ಇನ್ನೊಬ್ಬ ಸ್ವಾಮಿ ಮಠದಲ್ಲಿ ಪಂಕ್ತಿಬೇದ ಮಾಡುತ್ತಾರೆ, ಮತ್ತೊಬ್ಬ ಸ್ವಾಮಿ ನಮ್ಮ ಜಾತಿಯ ತಂಟೆಗೆ ಬಂದರೆ ಹುಷಾರ್ ಎನ್ನುತ್ತಾರೆ, ಮಗದೊಬ್ಬ ಸ್ವಾಮಿ ಇದೇ ಪಕ್ಷಕ್ಕೆ ಮತ ಹಾಕಿ ಎನ್ನುತ್ತಾರೆ. ಒಬ್ಬರು ಅಡ್ಡ ಪಲ್ಲಕ್ಕಿಯಲ್ಲಿ ಕುಳಿತು ಮಹಾರಾಜರಂತೆ ಮೆರೆಯುತ್ತಾರೆ. ಇನ್ನೊಬ್ಬರು ಪಾದ ಪೂಜೆಗೆ ಕಾಲು ನೀಡುತ್ತಾರೆ. ಒಬ್ಬ ಮೌಲ್ವಿ ಧರ್ಮ ರಕ್ಷಣೆಗೆ ಇತರರನ್ನು ಕೊಲ್ಲಿ ಎನ್ನುತ್ತಾರೆ, ಇನ್ನೊಬ್ಬ ಪಾದ್ರಿ ಮತಾಂತರಕ್ಕೆ ಪ್ರೋತ್ಸಾಹಿಸುತ್ತಾರೆ……..
ಶಿಯಾ ಸ್ವಾಮಿ ಒಂದು ಪಕ್ಷ,
ಸುನ್ನಿ ಸ್ವಾಮಿ ಇನ್ನೊಂದು ಪಕ್ಷ,
ಬ್ರಾಹ್ಮಣ ಸ್ವಾಮಿ ಒಂದು ಪಕ್ಷ, ಲಿಂಗಾಯತ ಸ್ವಾಮಿ ಇನ್ನೊಂದು ಪಕ್ಷ , ವೀರಶೈವ ಸ್ವಾಮಿ ಮತ್ತೊಂದು ಪಕ್ಷ, ಒಕ್ಕಲಿಗ ಸ್ವಾಮಿ ಒಂದು ಪಕ್ಷ,
ಕುರುಬ ಸ್ವಾಮಿ ಇನ್ನೊಂದು ಪಕ್ಷ,
ದಲಿತ ಸ್ವಾಮಿ ಮತ್ತೊಂದು ಪಕ್ಷ……
ಪ್ರಾಟೆಸ್ಟೆಂಟ್ ರಿಗೆ ಒಬ್ಬ ಸ್ವಾಮಿ, ಕ್ಯಾಥೊಲಿಕ್ ರಿಗೆ ಇನ್ನೊಬ್ಬ ಸ್ವಾಮಿ,
ದಿಗಂಬರ ಜೈನರಿಗೆ ಒಬ್ಬ ಸ್ವಾಮಿ, ಶ್ವೇತಂಬರ ಜೈನರಿಗೆ ಇನ್ನೊಬ್ಬ ಸ್ವಾಮಿ,
ಮಹಾಯಾನ ಬೌದ್ಧರಿಗೆ ಒಬ್ಬ ಸ್ವಾಮಿ, ಹೀನಯಾನ ಬೌದ್ಧರಿಗೆ ಇನ್ನೊಬ್ಬ ಸ್ವಾಮಿ…….
ಯಪ್ಪಾ, ಇದೇ ಏನು ಇವರುಗಳಿಗೆ ಇವರ ಧರ್ಮ ಭೋದಿಸಿರುವುದು
ಸಮಾಜವನ್ನು ವಿಭಜನೆ ಮಾಡುವುದು ಧರ್ಮದ ಕೆಲಸವೇ…….
ಇವರ ಭಾಷೆಯೋ…….
ಮೊದಮೊದಲಿಗೆ
ಮೆಲುದನಿಯ ಸಭ್ಯತೆಯಿಂದಲೇ ಒಳಗಿನ ವಿಷ ಕಕ್ಕುತಿದ್ದರು…. ಈಗೀಗ ನೇರವಾಗಿಯೇ ಅಸಭ್ಯ ಭಾಷೆಯ ಬೆಂಕಿ ಉಗುಳುತ್ತಿದ್ದಾರೆ. ನೀತಿಗೆಟ್ಟು ಬಹಿರಂಗವಾಗಿ ಡೀಲುಗಳಿಗೆ ಇಳಿದಿದ್ದಾರೆ. ನಿಜ ಭಕ್ತರು ಮಾಯವಾಗಿ ನಕಲಿ ಕಾರ್ಯಕರ್ತರು ಸ್ವಾಮಿಗಳನ್ನು ಸುತ್ತುವರಿದಿದ್ದಾರೆ.
ಶಿಕ್ಷಣ ಮಾಫಿಯಾ, ಸರ್ಕಾರಿ ನೌಕರರ ವರ್ಗಾವಣೆ ಮಾಫಿಯಾ, ರಿಯಲ್ ಎಸ್ಟೇಟ್ ದಂಧೆ ಇವರ ನಿತ್ಯದ ಕಾಯಕವಾಗಿದೆ…….
ವ್ಯಕ್ತಿತ್ವಗಳಿಲ್ಲದ ಇವರಿಗೆ ನಾವು ಇನ್ನೂ ಮರ್ಯಾದೆ ಕೊಡಬೇಕೆ…..
ಸರ್ವಸಂಗ ಪರಿತ್ಯಾಗಿಗಳಾಗಿ ಭಿಕ್ಷೆ ಬೇಡಿ ಅನ್ನ ದಾಸೋಹ, ಅಕ್ಷರ ದಾಸೋಹ , ಆಶ್ರಮ ಮತ್ತು ಆಶ್ರಯ ದಾಸೋಹ ಮಾಡಬೇಕಿದ್ದ ಇವರುಗಳು ಮಾಡುತ್ತಿರುವುದಾದರೂ ಏನು ?
ಗೌರವ ಕೊಡಬೇಕಾಗಿರುವುದು ಅವರು ತೊಡುವ ಬಟ್ಟೆಗೋ ಅವರ ವ್ಯಕ್ತಿತ್ವಕ್ಕೋ….
ಕೆಲವು ವ್ಯಕ್ತಿತ್ವ ಇಲ್ಲದ ಸ್ವಾಮಿಗಳನ್ನು ಮೌಲ್ವಿಗಳನ್ನು, ಪಾದ್ರಿಗಳನ್ನು ತಿರಸ್ಕರಿಸುವ ಸಮಯ ಬಂದಿದೆ…….
ನೈಜ ಸೇವಾ ಮನೋಭಾವದ ನಿಸ್ವಾರ್ಥ ಜನ ಸೇವಕರನ್ನು ಪ್ರೋತ್ಸಾಹಿಸುವ ಕಾಲ ಬಂದಿದೆ……..
ಧಾರ್ಮಿಕ ಸಂಸ್ಥೆಗಳ, ಸ್ಥಳಗಳ ಮತ್ತು ವ್ಯಕ್ತಿಗಳ ಬಣ್ಣ ಬಯಲಾಗುತ್ತಿದೆ.
ಸಮುದಾಯಗಳ ಬಹುಮುಖ್ಯ ಭಾಗವಾಗಿ ಆದರ್ಶ ವ್ಯಕ್ತಿಗಳಾಗಬೇಕಿದ್ದ ಇವರುಗಳು ಬೆತ್ತಲಾಗುತ್ತಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಸ್ವಾಮಿ, ಪಾದ್ರಿ, ಮೌಲ್ವಿ ಪದಗಳ, ಅದರ ವ್ಯಕ್ತಿತ್ವದ ಘನತೆಯನ್ನು ನೈಜ ಅರ್ಥದಲ್ಲಿ ಎತ್ತಿ ಹಿಡಿಯಬೇಕಿದೆ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
