ಕೊಲ್ಲೂರು: ದಿನಾಂಕ: 12/03/2026 (ಹಾಯ್ ಉಡುಪಿ ನ್ಯೂಸ್) ವಂಡ್ಸೆ ಗ್ರಾಮದ ಅಡಿಕೆ ಮತ್ತು ಕ್ರಷಿ ಸಂಬಂಧಿತ ಬೆಳೆ ಮಾರಾಟದ ಅಂಗಡಿಗೆ ಅಕ್ರಮ ಪ್ರವೇಶ ಮಾಡಿದ ವ್ಯಕ್ತಿ ಯೋರ್ವರು ಅಂಗಡಿ ಮಾಲೀಕರಿಗೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಬೆಳ್ಳಾಲ ಗ್ರಾಮದ ನಿವಾಸಿ ಶೇಷು ಶೆಟ್ಟಿ (65) ಎಂಬವರು ವಂಡ್ಸೆ ಗ್ರಾಮದ ಐತಾಳ್ ಕ್ಲಿನಿಕ್ ಹತ್ತಿರ ನಡೆಸಿಕೊಂಡಿರುವ ಅಡಿಕೆ ಮತ್ತು ಕೃಷಿ ಸಂಬಂದಿತ ವಾಣಿಜ್ಯ ಬೆಳೆ ಮಾರಾಟದ ಅಂಗಡಿಗೆ ದಿನಾಂಕ:10-03-2026 ರಂದು ಆರೋಪಿ ಪ್ರಕಾಶ್ ಎಮ್. ಎಸ್ ಎಂಬವರು ತನ್ನ KA-20-MC-8310 ನೇ ಕಾರನ್ನು ಚಲಾಯಿಸಿಕೊಂಡು ಬಂದು ಕಾರನ್ನು ಅಂಗಡಿಯ ಬಳಿ ನಿಲ್ಲಿಸಿ ಶೇಷು ಶೆಟ್ಟಿ ರವರ ಅಂಗಡಿಗೆ ಒಳಗೆ ಪ್ರವೇಶ ಮಾಡಿ ಹಣಕಾಸಿನ ವಿಚಾರವನ್ನು ಕಾರಣವಾಗಿಟ್ಟುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೊರಳಪಟ್ಟಿ ಹಿಡಿದುಕೊಂಡು ಕೆನ್ನೆಗೆ ಹೊಡೆದು ಎದೆಯ ಮೇಲೆ ಗುದ್ದಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದು ಅಲ್ಲಿದ್ದ ಮರದ ಕೋಲಿನಿಂದ ಹೊಡೆದಿರುತ್ತಾನೆ.
ಈ ಘಟನೆಯನ್ನು ನೋಡಿ ತಡೆಯಲು ಬಂದ ಶೇಷು ಶೆಟ್ಟಿ ರವರ ತಮ್ಮ ಸೂಲಿಯಣ್ಣ ಶೆಟ್ಟಿ ಯವರಿಗೂ ಆರೋಪಿ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದಿರುತ್ತಾನೆ. ಈ ಘಟನೆ ನೋಡಿ ಸ್ಥಳಕ್ಕೆ ಬಂದ ಸ್ಥಳೀಯರನ್ನು ನೋಡಿ ಆರೋಪಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.
ಈ ಹಲ್ಲೆಯಿಂದ ಶೇಷು ಶೆಟ್ಟಿ ರವರು ಹಾಗೂ ಸೂಲಿಯಣ್ಣ ಶೆಟ್ಟಿ ಯವರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 329(4), 352, 115 (2), 118(1), 351(2) BNS ರಂತೆ ಪ್ರಕರಣ ದಾಖಲಾಗಿದೆ.
