ಕುಂದಾಪುರ: ದಿನಾಂಕ:10-03-2026 (ಹಾಯ್ ಉಡುಪಿ ನ್ಯೂಸ್) ಕನ್ಯಾನ ಗ್ರಾಮದ ನಿವಾಸಿ ಕೊರಗ ಸಮುದಾಯದ ನಾಗ (65) ಎಂಬವರನ್ನು ಜೀತದಾಳಾಗಿ ಕೆಟ್ಟ ರೀತಿಯಲ್ಲಿ ಸಂಬಳ ಕೊಡದೆ ದುಡಿಸಿಕೊಳ್ಳುತ್ತಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ನಿವಾಸಿ ನಾಗ (65) ಎಂಬವರು ಪರಿಶಿಷ್ಟ ಪಂಗಡ (ಕೊರಗ) ಸಮುದಾಯಕ್ಕೆ ಸೇರಿದವರಾಗಿದ್ದು ಅವರನ್ನು ಸುಮಾರು 30 ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿಯಾದ ಸುಬ್ಬಣ್ಣ ಶೆಟ್ಟಿ ಯಾನೆ ಶಾನಪ್ಪ ಶೆಟ್ಟಿ ಎಂಬವರು ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ.
ಸುಬ್ಬಣ್ಣ ಶೆಟ್ಟಿ ರವರು ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ರವರು ನಾಗರವರನ್ನು ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿಕೊಂಡಿದ್ದು, ನಾಗರವರಿಂದ ದನ, ಎಮ್ಮೆ, ಸಗಣಿ ತೆಗೆದು ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿದ್ದರು.
ನಾಗರವರನ್ನು 30 ವರ್ಷ ಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸಿದ್ದಾರೆ. ನಾಗರವರಿಗೆ ದನದ ಕೊಟ್ಟಿಗೆಯಲ್ಲಿಯೇ ವಾಸ ಸ್ಥಳವನ್ನಾಗಿ ನೀಡಿದ್ದು, ಹಾಗೂ ತಿಂಡಿ ತಟ್ಟೆಗಳು, ಬಟ್ಟೆ, ಎಲ್ಲಾ ದನದ ಕೊಟ್ಟಿಗೆಯಲ್ಲಿಯೇ ಇಡುವಂತೆ ಒತ್ತಾಯ ಮಾಡಿರುತ್ತಾರೆ.
ಊಟವನ್ನು ಸಹ ಬಾಳೆ ಎಲೆಯಲ್ಲಿ ದನದ ಕೊಟ್ಟಿಗೆಯಲ್ಲಿ ನೀಡುತ್ತಿದ್ದು, ನಾಗರವರಿಗೆ ಸಂಬಳ ಕೊಡದೆ ಮನೆಯಿಂದ ಹೊರಗಡೆ ಹೋಗಲು ಬಿಡದೆ ದೌರ್ಜನ್ಯ ಎಸಗಿದ್ದಾರೆ ಎಂದು ನಾಗರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕಲಂ: 3(1)(H) SC/ST Act-ರಂತೆ ಪ್ರಕರಣ ದಾಖಲಾಗಿದೆ.
