img-20260310-wa00153794493670791393115.jpg
Spread the love

ದಿನಾಂಕ:10-03-2026(ಹಾಯ್ ಉಡುಪಿ ನ್ಯೂಸ್)

ಬೆಂಗಳೂರು:ಕರ್ನಾಟಕ ರಾಜ್ಯದ ಸರ್ಕಾರಿ ವೈದ್ಯರುಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆಯಿಂದ   ಐದು ದಿನದ  ಓ ಪಿ ಡಿ ಬಂದ್, ಆ ಬಳಿಕ ಎಲ್ಲಾ ಸೇವೆಗಳನ್ನು ನಿಲ್ಲಿಸಿ ಕರೆಕೊಡಲಾಗಿದ್ದ  ಅನಿರ್ದಿಷ್ಟಾವಧಿಯ  ಮುಷ್ಕರಕ್ಕೆ  ತೆರೆ ಬಿದ್ದಿದೆ.

  ರಾಜ್ಯ ಸರ್ಕಾರಿ ವೈದ್ಯಕೀಯ ಸಂಘವು (KGMOA) ವೈದ್ಯರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್ 11 ರಿಂದ ಮಾರ್ಚ್ 15 ರವರೆಗೆ ಐದು ದಿನಗಳ  ಓ ಪಿ ಡಿ ಬಂದ್ ಆನಂತರ ಎಲ್ಲಾ ವೈದ್ಯಕೀಯ ಸೇವೆಯನ್ನು ನಿಲ್ಲಿಸಿ ಅನಿರ್ದಿಷ್ಟ ಅವಧಿಯ   ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಈ ಒಂದು ಮುಷ್ಕರದಿಂದ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಹಾಗೂ ಲಕ್ಷಾಂತರ ಬಡ ಜನರಿಗೆ ಸಾಕಷ್ಟು ತೊಂದರೆಯಾಗುವ ಸಾಧ್ಯತೆ ಇತ್ತು. ಇದೆಲ್ಲವನ್ನು ಮನಗಂಡ ರಾಜ್ಯ ಸರ್ಕಾರವು ವೈದ್ಯರ ಮುಷ್ಕರದಿಂದ ಆಗುವ ತೊಂದರೆಯನ್ನು ತಪ್ಪಿಸುವದಕ್ಕೋಸ್ಕರ ಸರ್ಕಾರಿ ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆಗೆ ಇಂದು ಸಂಜೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದ ಪರಿಣಾಮ, ವೈದ್ಯರು ಮತ್ತು ಸರ್ಕಾರದ ಮಧ್ಯೆ ಸಹಮತ ವೇರ್ಪಟ್ಟಿದೆ ಎನ್ನುವುದು ಗೊತ್ತಾಗಿದೆ. 

ಸರ್ಕಾರಿ ವೈದ್ಯರ ಬಡ್ತಿ ವಿಚಾರ, ಬಗೆಹರಿಯದ ಸೇವೆಗಳ ಬಗ್ಗೆ, ಸಿಬ್ಬಂದಿಗಳ ಕೊರತೆಯ ನಿವಾರಣೆ ಇನ್ನು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ಕೊಡಲಾಗಿತ್ತು. 

ಒಂದು ಮೂಲದ ಪ್ರಕಾರ ಸರ್ಕಾರವು ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. ಆ ಬೇಡಿಕೆಗಳನ್ನು  ಹಂತಹಂತವಾಗಿ ಈಡೇರಿಸಲಾಗುವುದು ಎಂದು ಮಾತು ಕೊಟ್ಟ ಕಾರಣ, ರಾಜ್ಯ ಸರ್ಕಾರಿ ವೈದ್ಯಕೀಯ ಸಂಘವು ತಕ್ಷಣವೇ ಕರೆಕೊಟ್ಟ ಮುಷ್ಕರವನ್ನು ಹಿಂತೆಗೆದು ಕೊಂಡಿದೆ. ಹಾಗೆಯೇ ಎಲ್ಲಾ ವೈದ್ಯರುಗಳು ಕರ್ತವ್ಯದಲ್ಲಿ ಹಾಜರಿರುತ್ತಾರೆ ಎಂಬ ಮಾತನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆಂದು ಪತ್ರಿಕೆಗೆ   ತಿಳಿದು ಬಂದಿದೆ. 

ಈ ಕಾರಣದಿಂದ ರಾಜ್ಯದ ಮಧ್ಯಮ ಹಾಗೂ ಬಡ ಜನರು ನಿಟ್ಟುಸಿರು ಬಿಡುವಂತಾಗಿದೆ.

error: No Copying!